ಮಂಗಳೂರು: ಆರೆಸ್ಸೆಸ್ ಈ ದೇಶದಲ್ಲಿ ರಾಷ್ಟ್ರ ಭಕ್ತಿಯನ್ನು ಕಲಿಸಿದೆ. ಈ ದೇಶ ನಡೆಸುವ ಪ್ರಧಾನಿ ಆರೆಸ್ಸೆಸ್ ಸ್ವಯಂ ಸೇವಕ. ಕೇಂದ್ರದ ಮಂತ್ರಿಗಳು, ನಾವೆಲ್ಲರೂ ಆರೆಸ್ಸೆಸ್ ಸ್ವಯಂ ಸೇವಕರು. ನೆಹರೂ, ಇಂದಿರಾ ಗಾಂಧಿ ಎಲ್ಲರೂ ನಿಷೇಧಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿದಾರೆ. ನಿಷೇಧದ ಕೆಲಸ ಮಾಡಿದಾಗಲೆಲ್ಲ ದೇಶದಲ್ಲಿ ಕಾಂಗ್ರೆಸ್ ಸರಕಾರವೇ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ಪಿಎಫ್‌ಐ ಅನ್ನು ನಾವು ನಿಷೇಧ ಮಾಡಿದ್ದೇವೆ, ಇವರೇನು ನಿಷೇಧ ಮಾಡುವುದು ಎಂದು ಪ್ರಶ್ನಿಸಿದ ಅವರು, ಆರೆಸ್ಸೆಸ್ ರಾಷ್ಟ್ರಭಕ್ತಿ ಸಂಕೇತ ಅಂತ ಕಾಂಗ್ರೆಸ್‌ನವರೇ ಹೇಳಿದ್ದಾರೆ. ವಿಧಾನಸೌಧದಲ್ಲಿ ಡಿಕೆಶಿಯವರೇ ಪ್ರಾರ್ಥನೆ ಮಾಡಿದ್ದಾರೆ. ಆ ಪ್ರಾರ್ಥನೆಯಲ್ಲಿ ಏನಿದೆ ಅಂತ ಖರ್ಗೆಯವರು ಡಿಕೆಶಿ ಬಳಿ ಕೇಳಲಿ ಎಂದವರು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹು ಮತವಿದೆ. ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ಮೂಲಕ ಪಕ್ಷ ಆಡಳಿತಕ್ಕೆ ಬಂದಿದ್ದು, ಸಿದ್ದ ರಾಮಯ್ಯ ಮತ್ತು ಡಿಕೆಶಿ ಅವರು ಸರಕಾರ ಬಂದು 24 ಗಂಟೆಯಲ್ಲಿ ಕೊಡುವುದಾಗಿ ಹೇಳಿದ್ದಾರೆ. 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತುಗಳಿಲ್ಲ. ಆದೇಶ ಮಾಡಿದರೂ ಯಾವಾಗಿಂದ ಯೋಜನೆ ಜಾರಿಯಾಗುತ್ತದೆ ಎಂದು ಹೇಳಿಲ್ಲ. ಸುಳ್ಳು ಆಶ್ವಾಸನೆ ಕೊಟ್ಟು ಸಿದ್ದರಾಮಯ್ಯ ಸರಕಾರ ಬಂದಿದೆ. ಯಾವುದೇ ಮಾನದಂಡ ಇಲ್ಲದೇ ಭಾಗ್ಯಗಳು ಸಿಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ನಳಿನ್ ಆರೋಪಿಸಿದರು.
ಸಿದ್ದರಾಮಯ್ಯ ಸರಕಾರ 20 ಸಾವಿರ ಕೋಟಿ ಟೆಂಡರ್ ವಾಪಸ್ ಪಡೆದಿದೆ. ಶೇ. 80 ಕಮಿಷನ್‌ಗೆ ಡಿಮ್ಯಾಂಡ್ ಇಡಲು ಈ ರೀತಿ ಮಾಡಿದ್ದಾರೆ. ಆರಂಭವಾದ ಕಾಮಗಾರಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಪರ್ಸೆಂಟೇಜ್‌ಗಾಗಿ ಕಾಮಗಾರಿ ನಿಲ್ಲಿಸಿದ್ದಾರೆ. ನಮ್ಮ ಕಾಲಾವಧಿಯ ಯಾವುದೇ ಕಾಮಗಾರಿ ಬೇಕಾದರೂ ತನಿಖೆ ಅಗಲಿ. ಅದರ ಜತೆಗೆ ಲೋಕಾಯುಕ್ತದ ಸಿದ್ದರಾಮಯ್ಯ ಕೇಸ್ ಕೂಡ ತನಿಖೆ ಆಗಲಿ ಎಂದವರು ಹೇಳಿದರು.
ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಪ್ರಾರಂಭಿಸಿದೆ. ಅಶ್ವತ್ಥನಾರಾಯಣ್ ಯಾವುದೋ ಸಂದರ್ಭದ ಹೇಳಿಕೆಗೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ. ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೆ ಒಳಗಾದವರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿಪಕ್ಷವನ್ನು ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಈ ಸರಕಾರ ಹೆಚ್ಚು ದಿನ ಬಾಳದು ಎಂದು ನಳಿನ್ ಹೇಳಿದರು.