Advertisement
ಹಲವು ವರ್ಷಗಳ ಕಾಲ ಮದನ್ ದಾಸ್ ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅವರ ಸರಳತೆ ಮತ್ತು ಮೃದು ಸ್ವಭಾವವನ್ನು ನಾನು ಬಹಳ ಹತ್ತಿರದಿಂದ ನೋಡಿದೆ. ಅವರು ಅತ್ಯುನ್ನತ ಸಂಘಟಕರಾಗಿದ್ದರು. ನಾನು ಕೂಡ ಅವರ ಸಂಘಟನೆಯಲ್ಲಿ ಅಪಾರ ಸಮಯವನ್ನು ಕಳೆದಿದ್ದೇನೆ. ಆದ್ದರಿಂದ, ಸಂಘಟನೆಯ ಅಭಿವೃದ್ಧಿ ಮತ್ತು ಕಾರ್ಯಕರ್ತರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳು ನಮ್ಮ ಮಾತುಕತೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದುದು ಸಹಜವಾಗಿತ್ತು. ಅಂತಹ ಒಂದು ಸಂಭಾಷಣೆಯ ಸಮಯದಲ್ಲಿ, ಅವರು ಮೂಲತಃ ಎಲ್ಲಿಗೆ ಸೇರಿದವರು ಎಂದು ನಾನು ಅವರನ್ನು ಕೇಳಿದೆ. ಅವರು ನಾನು ಮಹಾರಾಷ್ಟ್ರದ ಸೊಲ್ಲಾಪುರದ ಸಮೀಪದ ಹಳ್ಳಿಯವನು, ನಮ್ಮ ಪೂರ್ವಜರು ಗುಜರಾತ್‌ನವರು ಎಂದು ಹೇಳಿದರು. ಆದರೆ ಅವರು ಯಾವ ಸ್ಥಳದಿಂದ ಬಂದವರು ಎಂದು ಅವರಿಗೆ ನಿಖರವಾಗಿ ತಿಳಿದಿರಲಿಲ್ಲ. ನನಗೆ ದೇವಿ ಎಂಬ ಉಪನಾಮದ ಶಿಕ್ಷಕಿ ಇದ್ದರು ಮತ್ತು ಅವರು ವಿಸ್ನಾಗರಕ್ಕೆ ಸೇರಿದವರು ಎಂದು ನಾನು ಅವರಿಗೆ ಹೇಳಿದೆ. ನಂತರ ಅವರು ವಿಸ್ನಾಗರ ಮತ್ತು ವಡ್ನಾಗರಕ್ಕೆ ಭೇಟಿ ನೀಡಿದರು. ನಮ್ಮ ಮಾತುಕತೆಗಳೂ ಸಹ ಗುಜರಾತಿಯಲ್ಲಿಯೇ ನಡೆಯುತ್ತಿದ್ದವು.ಮದನ್ ದಾಸ್ ಜಿ ಅವರ ಅನೇಕ ವಿಶೇಷತೆಗಳಲ್ಲಿ, ಮಾತುಗಳ ಹಿಂದಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಒಂದಾಗಿತ್ತು. ಮೃದು ಮಾತಿನ ಮತ್ತು ಸದಾ ಹಸನ್ಮುಖರಾಗಿರುತ್ತಿದ್ದ ಅವರು ಗಂಟೆಗಳ ಕಾಲದ ಚರ್ಚೆಗಳನ್ನು ಕೆಲವೇ ವಾಕ್ಯಗಳಲ್ಲಿ ಸಂಕ್ಷಿಪ್ತಗೊಳಿಸಿ ಹೇಳಬಲ್ಲವರಾಗಿದ್ದರು.
Related Articles
Advertisement
ತಮ್ಮ ತಾರುಣ್ಯದ ದಿನಗಳಲ್ಲಿ ಮದನ್ ದಾಸ್ ಜಿ ಅವರಿಂದ ಪಡೆದ ಮಾರ್ಗದರ್ಶನದಿಂದ ಸಾರ್ವಜನಿಕ ಜೀವನದಲ್ಲಿ ಉನ್ನತಿ ಹೊಂದಿದ ಹಲವಾರು ನಾಯಕರ ಬಗ್ಗೆ ನಾನು ಬಲ್ಲೆ. ಆದರೆ ಅದರ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುವುದು ಅವರ ಸ್ವಭಾವದಲ್ಲಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ, ಜನರ ನಿರ್ವಹಣೆ, ಪ್ರತಿಭಾ ನಿರ್ವಹಣೆ ಮತ್ತು ಕೌಶಲ್ಯ ನಿರ್ವಹಣೆಯ ಪರಿಕಲ್ಪನೆಗಳು ಅತ್ಯಂತ ಜನಪ್ರಿಯವಾಗಿವೆ. ಮದನ್ ದಾಸ್ ಜಿ ಅವರು ಜನರನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅವರ ಪ್ರತಿಭೆಯನ್ನು ಸಂಘಟನೆಯ ಗುರಿಗಳ ಮೇಲೆ ಕೇಂದ್ರೀಕರಿಸುವಲ್ಲಿ ಪರಿಣತರಾಗಿದ್ದರು. ಅವರು ಜನರ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದರು ಮತ್ತು ಅದರ ಆಧಾರದ ಮೇಲೆ ಕೆಲಸವನ್ನು ನಿಯೋಜಿಸುತ್ತಿದ್ದರಿಂದ ಅವರು ವಿಶೇಷರಾಗಿದ್ದರು. ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಜನರನ್ನು ರೂಪಿಸಬೇಕು ಎಂಬ ಸಿದ್ಧಾಂತವನ್ನು ಅವರು ಎಂದಿಗೂ ಒಪ್ಪಲಿಲ್ಲ. ಅದಕ್ಕಾಗಿಯೇ ಹೊಸ ಆಲೋಚನೆಯ ಯಾವುದೇ ಯುವ ಕಾರ್ಯಕರ್ತರಿಗೆ ಮದನ್ ದಾಸ್ ಜಿ ಅವರು ಸ್ಪಷ್ಟವಾದ ಧ್ವನಿಯಾಗಿದ್ದರು. ಅದರಿಂದಾಗಿಯೇ ಅವರೊಂದಿಗೆ ಕೆಲಸ ಮಾಡಿದ ಬಹಳಷ್ಟು ಜನರು ತಮ್ಮದೇ ಆದ ಸಾಮರ್ಥ್ಯದ ಮೇಲೆ ಗುರುತಿಸಿಕೊಳ್ಳುತ್ತಿದ್ದರು. ಆದ್ದರಿಂದ, ಅವರ ನಾಯಕತ್ವದಲ್ಲಿ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಬೆಳೆದವು ಮತ್ತು ಅವು ಪ್ರಮಾಣ ಮತ್ತು ವ್ಯಾಪ್ತಿಗಳಲ್ಲಿ ದೊಡ್ಡದಾಗಿದ್ದರೂ ಸಹ ಸುಸಂಘಟಿತವಾಗಿವೆ ಮತ್ತು ಪರಿಣಾಮಕಾರಿಯಾಗಿವೆ.
ಮದನ್ ದಾಸ್ ಜಿಯವರು ಬಿಡುವಿಲ್ಲದ ಪ್ರಯಾಣ ಮಾಡುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಮ್ಮ ಕರ್ತವ್ಯಗಳಿಂದಾಚೆಗೆ, ಜನರನ್ನು ಭೇಟಿ ಮಾಡುವ ವಿಷಯದಲ್ಲಿ ಅವರು ತುಂಬಾ ಆಯ್ಕೆಯವರಾಗಿದ್ದರು ಮತ್ತು ಯಾವಾಗಲೂ ಸಭೆಗೆ ಸಿದ್ಧರಾಗಿರುತ್ತಿದ್ದರು. ಆದರೆ ಅವರ ಕಾರ್ಯಕ್ರಮಗಳು ಯಾವಾಗಲೂ ಸರಳವಾಗಿರುತ್ತಿದ್ದವು. ಯಾವುದೇ ಕಾರ್ಯಕರ್ತರಿಗೆ ಹೊರೆಯಾಗುತ್ತಿರಲಿಲ್ಲ. ಈ ಗುಣವು ಅವರಿಗೆ ಕೊನೆಯವರೆಗೂ ಇತ್ತು. ಅವರು ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಿದರು, ಆದರೆ ನಾನು ಅದರ ಬಗ್ಗೆ ಕೇಳಿದಾಗ, ಹಲವಾರು ಬಾರಿ ವಿಚಾರಿಸಿದ ನಂತರ ಮಾತ್ರ ಅದರ ಬಗ್ಗೆ ಮಾತನಾಡುತ್ತಿದ್ದರು. ದೈಹಿಕ ನೋವಿನ ಹೊರತಾಗಿಯೂ ಅವರು ಸಂತೋಷವಾಗಿದ್ದರು. ಅನಾರೋಗ್ಯದ ಸಂದರ್ಭದಲ್ಲಿಯೂ ಅವರು ದೇಶ ಮತ್ತು ಸಮಾಜಕ್ಕಾಗಿ ಏನು ಮಾಡಬಹುದು ಎಂದು ನಿರಂತರವಾಗಿ ಯೋಚಿಸುತ್ತಿದ್ದರು.
ಮದನ್ ದಾಸ್ ಜಿ ಅವರು ಅದ್ಭುತವಾದ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದರು ಮತ್ತು ಇದು ಅವರ ನಿಖರವಾದ ಕೆಲಸದ ವಿಧಾನವನ್ನು ರೂಪಿಸಿತು. ಅವರೊಬ್ಬ ಅಗಾಧ ಓದುಗ, ಅವರು ಏನಾದರೂ ಒಳ್ಳೆಯದನ್ನು ಓದಿದಾಗ, ಅದನ್ನು ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಬಂಧಿತ ವ್ಯಕ್ತಿಗೆ ಕಳುಹಿಸುತ್ತಿದ್ದರು. ಅಂತಹ ವಿಷಯಗಳನ್ನು ಆಗಾಗ್ಗೆ ಸ್ವೀಕರಿಸಿದ ಅದೃಷ್ಟಶಾಲಿ ನಾನಾಗಿದ್ದೇನೆ. ಅವರು ಅರ್ಥಶಾಸ್ತ್ರ ಮತ್ತು ನೀತಿನಿರೂಪಣೆ ವಿಷಯಗಳಲ್ಲಿ ಉತ್ತಮ ತಿಳುವಳಿಕೆ ಹೊಂದಿದ್ದರು. ಯಾವುದೇ ವ್ಯಕ್ತಿ ಇತರರ ಮೇಲೆ ಅವಲಂಬಿತವಾಗಿಲ್ಲದ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತಹ ಸ್ವಯಂ-ಸುಧಾರಣೆ ಮತ್ತು ಬೆಳವಣಿಗೆಯ ಅವಕಾಶಗಳಿಂದ ಸಶಕ್ತವಾದ ಭಾರತವನ್ನು ಅವರು ಕಲ್ಪಿಸಿದರು. ಪರಸ್ಪರ ಗೌರವ, ಸಬಲೀಕರಣ ಮತ್ತು ಹಂಚಿಕೆಯ ಸಮೃದ್ಧಿಯ ತತ್ವಗಳಲ್ಲಿ ಬೇರೂರಿರುವ ಸಮಾಜದೊಂದಿಗೆ ಸ್ವಾವಲಂಬನೆಯು ಕೇವಲ ಒಂದು ಗುರಿಯಾಗಿರದೆ ಪ್ರತಿಯೊಬ್ಬ ನಾಗರಿಕನ ವಾಸ್ತವವಾಗಿರುವ ಭಾರತವನ್ನು ಮದನ್ ದಾಸ್ ಜಿ ಅವರು ಕಲ್ಪಿಸಿಕೊಂಡರು. ಈಗ, ಭಾರತವು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಯಾಗುತ್ತಿರುವುದನ್ನು ಕಂಡು ಅವರಷ್ಟು ಸಂತೋಷಪಟ್ಟವರು ಬೇರಾರೂ ಇಲ್ಲ.
ಇಂದು, ನಮ್ಮ ಪ್ರಜಾಪ್ರಭುತ್ವವು ರೋಮಾಂಚಕವಾಗಿರುವಾಗ, ಯುವಜನರು ಆತ್ಮವಿಶ್ವಾಸದಿಂದಿರುವಾಗ, ಸಮಾಜವು ಮುಂದುವರೆಯುತ್ತಿರುವಾಗ ಮತ್ತು ರಾಷ್ಟ್ರವು ಭರವಸೆ ಮತ್ತು ಆಶಾವಾದದಿಂದ ತುಂಬಿರುವಾಗ, ತಮ್ಮ ಇಡೀ ಜೀವನವನ್ನು ಸೇವೆ ಮತ್ತು ರಾಷ್ಟ್ರವನ್ನು ಅಂತಹ ಮೇಲ್ಮುಖ ಪಥದಲ್ಲಿ ನಡೆಸುವ ಕಡೆಗೆ ಮುಡಿಪಾಗಿಟ್ಟ ಶ್ರೀ ಮದನ್ ದಾಸ್ ದೇವಿ ಜಿ ಅವರಂತಹವರನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ.
-ನರೇಂದ್ರ ಮೋದಿ