Advertisement

ದೇಶ ವಿಭಜಿಸುತ್ತಿರುವ ಆರೆಸ್ಸೆಸ್‌: ರಾಹುಲ್‌

06:00 AM Mar 21, 2018 | Team Udayavani |

ಪಡುಬಿದ್ರಿ: ಸೇವಾದಳವು ಪರಸ್ಪರ ಪ್ರೀತಿ, ಬ್ರಾತೃತ್ವವನ್ನು ಬೆಳೆಸುತ್ತದೆ. ಆದರೆ ನಮ್ಮ ವಿರೋಧಿ ಸಂಘಟನೆ ಆರೆಸ್ಸೆಸ್‌ ಕ್ರೋಧ, ಮತ್ಸರಗಳ ಮೂಲಕ ದೇಶವನ್ನು ವಿಭಜಿಸುವ, ಕ್ಷೋಭೆಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಇದುವೇ ನಮ್ಮ ಮತ್ತು ಆರೆಸ್ಸೆಸ್‌ ನಡುವಣ ವ್ಯತ್ಯಾಸ. ಆದರೂ ನಾವು ಆರೆಸ್ಸೆಸ್‌, ಬಿಜೆಪಿ ಮಂದಿಯನ್ನೂ ಪ್ರೀತಿಯಿಂದಲೇ ಕಾಣುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ಅವರು ಮಂಗಳವಾರ ತೆಂಕ ಎರ್ಮಾಳಿನಲ್ಲಿ ರಾಜೀವ್‌ ಗಾಂಧಿ ನ್ಯಾಶನಲ್‌ ಅಕಾಡೆಮಿ ಆಫ್‌ ಪೊಲಿಟಿಕಲ್‌ ಸೈನ್ಸ್‌ ಸಂಸ್ಥೆಯನ್ನು ಉದ್ಘಾಟಿಸಿದ ಬಳಿಕ ಕಾಂಗ್ರೆಸ್‌ ಸೇವಾದಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಸೇವಾದಳದ ಮುಖ್ಯ ಉದ್ದೇಶ ಹಿಂದೂಸ್ಥಾನವನ್ನು ಜೋಡಿಸುವುದಾಗಿದೆ. ಈಚೆಗಷ್ಟೇ ನಾನು ದಿಲ್ಲಿಯಲ್ಲಿ  ಮಾಡಿದ ಒಂದು ಭಾಷಣದಲ್ಲಿ  ಕಾಂಗ್ರೆಸ್‌ ಪಕ್ಷವು ಬದಲಾಗಲು ಬಯಸಿರುವುದಾಗಿ ಹೇಳಿದ್ದೆ. ನಾನು ಬಯಸಿರುವ ಈ ಬದಲಾವಣೆಗಳನ್ನು ಸೇವಾದಳವು ವಸ್ತುಶಃ ಮಾಡಿ ತೋರಿಸಬಲ್ಲದು ಎಂದು ರಾಹುಲ್‌ ಹೇಳಿದರು.

ಮಹಿಳೆಯರು, ಯುವಕರ ಧ್ವನಿ
ಕಾಂಗ್ರೆಸ್‌ ಇರುವ ವರೆಗೂ ಈ ದೇಶದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳೇ ನಮ್ಮೊಳಗೆ ಬೇರು ಬಿಟ್ಟಿರುತ್ತವೆ. ಸೇವಾದಳವು ಈ ದೇಶದ ಬೆಳವಣಿಗೆಗೆ ಸರಿಯಾದ ದಾರಿ ತೋರಬಲ್ಲದು. ಕಾಂಗ್ರೆಸ್‌ ಪಕ್ಷವು ಮಹಿಳೆಯರು, ಯುವಕರ ಧ್ವನಿಯಾಗಿದೆ ಎಂದೂ ರಾಹುಲ್‌ ಪ್ರತಿಪಾದಿಸಿದರು.

ಆರೆಸ್ಸೆಸ್‌ ಮತ್ತು ಬಿಜೆಪಿ ವಿಚಾರಧಾರೆಗಳು ಈ ದೇಶದಲ್ಲಿ ಭಾರತವನ್ನು ಹರಿಹಂಚಾಗಿಸುವ ರೀತಿಯಲ್ಲಿ ಕಾರ್ಯವೆಸಗುತ್ತಿವೆ. ಕಾಂಗ್ರೆಸ್‌ ಪಕ್ಷವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ನಮಗೆ ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡು, ಅಸ್ಸಾಂ ರಾಜ್ಯಗಳೆಲ್ಲವೂ ಸೇರಿ ಸಮಗ್ರ ಭಾರತ ವೆನಿಸುತ್ತದೆ. ನಾವು ಅದನ್ನು ಮನ್ನಿಸುತ್ತೇವೆ. ಆದರೆ ಆರೆಸ್ಸೆಸ್‌ ಈ ರಾಜ್ಯಗಳ ಪರಂಪರೆಯಲ್ಲೂ ತನ್ನದೇ ಆದ ವಿಷಭರಿತ ವಿಚಾರಧಾರೆಯನ್ನು ಪ್ರವಹಿಸಲು ಬಯಸುತ್ತದೆ. ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿಯ ಆಶಯಗಳೂ ಕಾಂಗ್ರೆಸ್‌ನ ಸದಾಶಯಗಳಾಗಿರುತ್ತವೆ ಎಂದೂ ರಾಹುಲ್‌ ಗಾಂಧಿ ಅವರು ಹೇಳಿದರು.

ನನ್ನ ಕನಸಿನ ನವ ಕಾಂಗ್ರೆಸ್‌ ಸ್ವರೂಪದಲ್ಲಿ ಕಾಂಗ್ರೆಸ್‌ ಸೇವಾದಳಕ್ಕೂ ಪ್ರಮುಖ ಸ್ಥಾನವಿರುತ್ತದೆ. ಸೇವಾದಳ ಸದಸ್ಯರೆಲ್ಲರೂ ಕಾಂಗ್ರೆಸ್‌ನ ಸದಸ್ಯರು ಎಂದು ರಾಹುಲ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next