Advertisement

Manipal: ಇಂದು ಪ್ರಥಮ ವಾರ್ಷಿಕ ಪುಣ್ಯತಿಥಿ: ದೃಢಸಂಕಲ್ಪದ ಆದರ್ಶ ಟಿ. ಮೋಹನದಾಸ್‌ ಪೈ

11:49 PM Aug 18, 2023 | Team Udayavani |

“ಭಾರತವನ್ನು ಯಾರೇ ಬಂದು ಆಳಿದ್ದರೂ ಅಳಿಸಲಾಗಲಿಲ್ಲ’ ಎಂಬ ಮಾತನ್ನು ಅನುಭವಿಗಳು “ಭಾರತ ಅಷ್ಟೂ ಸುಭದ್ರ’ ಎಂಬ ಹಿನ್ನೆಲೆಯಲ್ಲಿ ಹೇಳುವುದಿದೆ. “ನಮ್ಮಲ್ಲಿ ಹಲವು ಗುಣಮಟ್ಟದ ಸಂಸ್ಥೆಗಳಿವೆ. ಅದನ್ನು ಹಾಳು ಮಾಡಲು ಯಾರಾದರೂ ಪ್ರಯತ್ನಿಸಿದರೂ ಹಾಳಾಗದು. ಹಾಗಿದೆ ಆ ಪುಣ್ಯಾತ್ಮರು ಹಾಕಿದ ಭದ್ರ ಪಂಚಾಂಗ’ – ಇಂತಹ ಮಾತುಗಳು ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ ಸಂಸ್ಥೆಗಳ ಗಟ್ಟಿತನಕ್ಕೆ ಹೋಲಿಸುವಾಗ ಹೇಳುವುದಿದೆ. ಮೊದಲನೆಯದು ದೇಶಕ್ಕಾದರೆ, ಎರಡನೆಯದು ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಸಂಸ್ಥಾಪಕರ ಕ್ರತುಶಕ್ತಿ ಹಾಗಿರುತ್ತದೆ ಎನ್ನುವುದೇ ಈ ಮಾತುಗಳ ತಾತ್ಪರ್ಯ.

Advertisement

ಇಂತಹ ಮಾತುಗಳು ಮಣಿಪಾ ಲದ ಡಾ|ಟಿಎಂಎ ಪೈಯವರಿಗೂ, ಅವರ ಅಣ್ಣ ಉಪೇಂದ್ರ ಪೈಯವರ ಮಗ ಟಿ.ಎ.ಪೈ ಮತ್ತು ಡಾ| ಪೈಯವರ ಜ್ಯೇಷ್ಠ ಪುತ್ರ ಟಿ. ಮೋಹನದಾಸ್‌ ಪೈಯವರಿಗೂ ಅಕ್ಷರಶಃ ಸತ್ಯ.

ಮಾದರಿಗಳ ಸರದಾರ
ಮಣಿಪಾಲದ ಪೈ ಬಂಧುಗಳು ಹಲವು ವಿಷಯಗಳಲ್ಲಿ ಮಾಡೆಲ್‌ ಎಂದು ಹಲವು ದಿಗ್ಗಜರು ಹೇಳುವುದಿದೆ. ಡಾ| ಟಿಎಂಎ ಪೈಯವರು ತನ್ನ ಉತ್ತರಾಧಿಕಾರಿಯಾಗಿ ತನ್ನ ಮಕ್ಕಳ ಬದಲು ಅಣ್ಣ ಉಪೇಂದ್ರ ಪೈಯವರ ಮಗ ಟಿ.ಎ. ಪೈಯವರನ್ನು ಸುಮ್ಮನೆ ರೂಪಿಸಿದ್ದಲ್ಲ, ತರಬೇತಿ ಕೊಟ್ಟು ರೂಪಿಸಿದರು. ಇದೇ ಮಾಡೆಲ್‌ನ್ನು ಟಿ. ಮೋಹನದಾಸ್‌ ಪೈಯವರು ದೊಡ್ಡಪ್ಪನ ಕಿರಿಯ ಮಗ ಟಿ. ಸತೀಶ್‌ ಪೈಯವರನ್ನು “ಸಹಸವಾರ’ರನ್ನಾಗಿ ಬೆಳೆಸಿದರು. ಇವರಿಬ್ಬರ ಅನ್ಯೋನ್ಯತೆ ಬಣ್ಣಿಸುವುದು ಅಸಾಧ್ಯ, ಒಡಹುಟ್ಟಿದ ಸಹೋದರರಿಗೂ ಇಷ್ಟು ಅನ್ಯೋನ್ಯತೆ ಇರದೋ ಎಂಬಂತೆ ಅವರ ಭ್ರಾತೃತ್ವ ಕಾಣುತ್ತಿತ್ತು.

ಸಂಕಷ್ಟಗಳನ್ನು ಎದುರಿಸುವ ಮೋಹನದಾಸ್‌ ಪೈಯವರ ಮಾನಸಿಕತೆಯೂ ಮಾಡೆಲ್‌. 1990ರ ದಶಕದಲ್ಲಿ ಐಸಿಡಿಎಸ್‌ ಇತರ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುವಂತೆ ಸಮಸ್ಯೆಗಳನ್ನು ಎದುರಿಸಿದಾಗ ತನ್ನ ವೈಯಕ್ತಿಕ ಮೊತ್ತವನ್ನು ಠೇವಣಿದಾರರಿಗೆ ಕೊಟ್ಟು ಹಿಂದಿರುಗಿಸಿದರು. ಅವರ ಸಾಂಸ್ಕೃತಿಕ ಪ್ರಿಯತೆಗೆ ಸಾಕ್ಷಿಯಾಗಿ ಮಣಿಪಾಲದ ಹೆರಿಟೇಜ್‌ ವಿಲೇಜ್‌ ಇದೆ. ಈ ವಿಷಯದಲ್ಲಿ ಮೋಹನದಾಸ್‌ ಪೈಯವರು ಎದುರಿಗೆ ಬಾರದಿದ್ದರೂ ಇದರ ರೂವಾರಿ ದಿ| ವಿಜಯನಾಥ ಶೆಣೈ ಅವರ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸಿದರು. ಡಾ|ಟಿಎಂಎ ಪೈ ಪ್ರತಿಷ್ಠಾನದ ಮೂಲಕ ಕೊಂಕಣಿ ಭಾಷೆಯ ಉನ್ನತಿಗೆ ಭದ್ರ ಬುನಾದಿ ಹಾಕಿದರಲ್ಲದೆ, ಗುಣಮಟ್ಟದ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು.

ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಪೈಯವರು, ಕೊನೆಯವರೆಗೂ ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿ ಕೈಗೆಟಕುವ ದರದಲ್ಲಿಯೇ ವಿದ್ಯಾ ರ್ಥಿಗಳಿಗೆ ಶಿಕ್ಷಣ ದೊರಕಬೇಕೆಂದು ಶುಲ್ಕ ಹೆಚ್ಚಿಸಲು ಬಿಡಲಿಲ್ಲ, ಉಪನ್ಯಾಸಕರಿಗೆ ಯೋಗ್ಯ ವೇತನ ನೀಡಲು ಹಿಂದೆ ಮುಂದೆ ನೋಡಿರಲಿಲ್ಲ, ಲಕ್ಷಾಂತರ ರೂ. ಸ್ವಂತದ ಹಣವನ್ನು ವಿದ್ಯಾರ್ಥಿವೇತನಕ್ಕಾಗಿ ನೀಡುತ್ತಿದ್ದರು. ಇದು ಅವರಲ್ಲಿದ್ದ ಸಾಮಾಜಿಕ ನ್ಯಾಯದ ಬದ್ಧತೆ. ತಾವಿದ್ದ ಮನೆಯನ್ನು ತಮ್ಮ ಕಾಲದ ಬಳಿಕ ಡಾ| ಟಿಎಂಎ ಪೈ ಪ್ರತಿಷ್ಠಾನಕ್ಕೆ ನೀಡಿ ವೀಲುನಾಮೆ ಬರೆಸಿದ್ದರು. “ಉದಯವಾಣಿ’ ಪತ್ರಿಕೆ ಪ್ರತೀ ವರ್ಷ ಮಕ್ಕಳ ದಿನಾಚರಣೆ ಸಂಬಂಧ ನಡೆಸುತ್ತಿರುವ ಛಾಯಾಚಿತ್ರ ಸ್ಪರ್ಧೆ ಆರಂಭಗೊಂಡದ್ದು ಮೋಹನದಾಸ್‌ ಪೈಯವರ ಆಸಕ್ತಿಯಿಂದಲೇ. ಕೊನೆಯ ತನಕವೂ ಅವರು ಈ ಸ್ಪರ್ಧೆಯ ಪ್ರಕ್ರಿಯೆಗಳನ್ನು ಅವಲೋಕನ ನಡೆಸಿ ಮಾರ್ಗದರ್ಶನ ನೀಡುತ್ತಿದ್ದುದು ಅವರ ಛಾಯಾಚಿತ್ರದ ಆಸಕ್ತಿಯನ್ನೂ ಬೆಟ್ಟು ಮಾಡುತ್ತದೆ.

Advertisement

ಮುದ್ರಣ ಕ್ಷೇತ್ರಕ್ಕೆ ದಾಪುಗಾಲು
ಮಣಿಪಾಲಕ್ಕೆ ಹಿಂದಿರುಗಿದ ಅನಂತರ ಕೆನರಾ ಲ್ಯಾಂಡ್‌ ಇನ್‌ವೆಸ್ಟ್‌ಮೆಂಟ್ಸ್‌ನ ಜನರಲ್‌ ಮೆನೇಜರ್‌ ಹುದ್ದೆ ಜತೆಗೆ ಮಣಿಪಾಲ್‌ ಪವರ್‌ ಪ್ರಸ್‌ನ ಆಡಳಿತ ಪಾಲುದಾರರಾಗಿಯೂ ನಿಯೋಜನೆಗೊಂಡ ಮೋಹನದಾಸ್‌ ಪೈಯವರು ಕೇವಲ ತಂದೆಯವರ ಆಶ್ರಯದಲ್ಲಿಯೇ ಮುಂದುವರಿಯದೆ ಸ್ವಯಂ ಬುದ್ಧಿಮತ್ತೆಯಿಂದ ಮುದ್ರಣ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಹಲವು ದಾಪುಗಾಲುಗಳನ್ನು ಇಟ್ಟರು, ತನ್ನದೇ ಛಾಪನ್ನು ಒತ್ತಿ ಮುನ್ನಡೆದರು.

ದಿಗ್ಗಜರ ಹೆಜ್ಜೆಗುರುತು
1964ರಲ್ಲಿ ಮಣಿಪಾಲದ ನೇತಾರರಲ್ಲಿ ಒಬ್ಬರಾದ ಟಿ.ಎ. ಪೈಯವರು ಮಾಧ್ಯಮ ಕ್ಷೇತ್ರಕ್ಕೆ ಏಕೆ ಇಳಿಯ ಬಾರದು ಎಂದು ಚಿಂತನೆ ನಡೆಸಿದ್ದರು. 1969ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ರಾಷ್ಟ್ರೀಕರಣಗೊಂಡಾಗ ಮುದ್ರಣ ಸಂಸ್ಥೆಗೆ ಮತ್ತು ಕುಶಲಕರ್ಮಿಗಳಿಗೆ ಕೆಲಸ ಕೊಡಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದರ ಪರಿಣಾಮವೇ 1970ರ ಜನವರಿ 1ರಂದು “ಉದಯವಾಣಿ’ಯು ಉದಯವಾಯಿತು. ಇದರ ಸಂಪೂರ್ಣ ಆಡಳಿತ ನಿರ್ವಹಣೆ, ಹಣಕಾಸು ಯೋಜನೆಯ ಜವಾಬ್ದಾರಿಯನ್ನು ಮೋಹನದಾಸ್‌ ಪೈ ವಹಿಸಿಕೊಂಡರೆ ಟಿ. ಸತೀಶ್‌ ಪೈಯವರು ಉತ್ಪಾದನ ಜವಾಬ್ದಾರಿಯನ್ನು ವಹಿಸಿಕೊಂಡರು. ಆಫ್ಸೆಟ್‌ ಪ್ರಿಂಟಿಂಗ್‌ನಲ್ಲಿ ಆಗ ಆರಂಭಗೊಂಡ ಮೊದಲ ಪತ್ರಿಕೆ “ಉದಯವಾಣಿ’. “ಕೇವಲ ಎರಡು ಮೂರು ತಿಂಗಳ ತಯಾರಿಯಲ್ಲಿಯೇ ಉದಯವಾಣಿ ಆರಂಭ ಗೊಂಡಿತು. ಧೀರೂಬಾಯಿ ಅಂಬಾನಿ, ಸಿಂಡಿಕೇಟ್‌ ಬ್ಯಾಂಕ್‌ನವರು ಜಾಹೀರಾತು ಕೊಟ್ಟು ಪ್ರೋತ್ಸಾಹಿಸಿದ್ದರು’ ಎನ್ನುವುದನ್ನು ಸತೀಶ್‌ ಪೈಯವರು ನೆನಪಿಸಿಕೊಳ್ಳುತ್ತಾರೆ.

ಆ ಕಾಲದ “ಮೇಕ್‌ ಇನ್‌ ಇಂಡಿಯ”
1970ರಲ್ಲಿ ಉದಯವಾಣಿ ಆರಂಭಿಸುವಾಗ ಜರ್ಮನಿಯಿಂದ ಹೈಡಲ್‌ಬರ್ಗ್‌ ಯಂತ್ರವನ್ನು ತರಿಸಿಕೊಳ್ಳಲಾಗಿತ್ತು. ಮೂರು ತಿಂಗಳಲ್ಲೇ ಇದು ಕೈಕೊಟ್ಟಿತು. ಪರ್ಯಾಯ ಮಾರ್ಗವಿಲ್ಲದ ಆ ಸಂದರ್ಭದಲ್ಲಿ ತಾಂತ್ರಿಕ ಸಿಬಂದಿಯಾಗಿದ್ದ ಶ್ರೀನಿವಾಸ ಶೆಟ್ಟಿಗಾರ್‌ ಮತ್ತು ಕಲಾವಿದರಾಗಿದ್ದ ಆರ್‌.ಕೆ. ಡಿ’ಗಾರ್‌ (ರಾಮಕೃಷ್ಣ ದೇವಾಡಿಗ) ಅವರು ತಮ್ಮದೇ ತಂತ್ರಜ್ಞಾನದ ಮೂಲಕ ಮುದ್ರಣವನ್ನು ಸಾಧ್ಯವಾಗುವಂತೆ ಮಾಡಿದ್ದರು. ಹಾಟ್‌ಮೆಟ್‌ ಲೈಸನ್ಸ್‌ ಅನ್ನು ವೆಬ್‌ ಆಫ್ಸೆಟ್‌ಗೆ ಪರಿವರ್ತಿಸುವಾಗ ಇಂಗ್ಲೆಂಡ್‌ನಿಂದ ಸ್ಪೇಸರ್‌ ಯಂತ್ರವನ್ನು ತರಿಸಿಕೊಂಡರು.

ಮಣಿಪಾಲದಲ್ಲಿ ಕಸ್ತೂರಿ
ರಾತ್ರಿಯಿಂದ ಬೆಳಗ್ಗೆ 9- 10 ಗಂಟೆಯವರೆಗೆ ಮೋಹನದಾಸ್‌ ಪೈ ಮತ್ತು ಸತೀಶ್‌ ಪೈಯವರು ಮುದ್ರಣ ಕೇಂದ್ರದಿಂದ ತೊಡಗಿ ಏಜೆಂಟರಿಗೆ ಮುಟ್ಟಿಸುವ ತನಕ ವಿಚಾರಣೆ ನಡೆಸಿ ಹಿಂದಿರು ಗುತ್ತಿದ್ದರು. ಮಂಗಳೂರಿನಲ್ಲಿ ಸುಮಾರು 10 ಏಜೆಂಟರನ್ನು ಗೊತ್ತುಪಡಿಸಿ ಏಜೆನ್ಸಿ ಕೊಟ್ಟ ಬಳಿಕ “ಉದಯವಾಣಿ’ಯ ಉತ್ಕರ್ಷದ ನಡೆ ಇಂದಿನವರೆಗೂ ಮುಂದುವರಿಯುತ್ತಿದೆ. ಇವರಿಬ್ಬರ ಜತೆಯಿಂದಾಗಿಯೇ ಹಲವು ವರ್ಷ ಮುದ್ರಣದ ಗುಣಮಟ್ಟಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿದ್ದವು. ಪ್ರಸಿದ್ಧವಾದ “ದಿ ಹಿಂದೂ’ ಪತ್ರಿಕೆಯ ಕಸ್ತೂರಿಯವರು ಒಂದು ವಾರ ಕಾಲ ಮಣಿಪಾಲದಲ್ಲಿ ಉಳಿದುಕೊಂಡು ತಮ್ಮ ಪತ್ರಿಕೆಯ ಶತಮಾನೋತ್ಸವದ ಕೃತಿಯನ್ನು ಮುದ್ರಿಸಿಕೊಂಡಿದ್ದರು ಎಂದರೆ ಮುದ್ರಣದ ಗುಣಮಟ್ಟವನ್ನು ಅರಿಯಬಹುದು. ಅಂದು ಅವರು ಹಾಕಿದ ಬೀಜ ಈಗ ಮಣಿಪಾಲ್‌ ಟೆಕ್ನಾಲಜೀಸ್‌, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಸಹಿತ ಹಲವು ಸಂಸ್ಥೆಗಳ ವಿಕಾಸಕ್ಕೆ ಕಾರಣವಾಗಿವೆ. ಮೋಹನದಾಸ್‌ ಪೈಯವರು ಮಾಧ್ಯಮ ಕ್ಷೇತ್ರದ ದಿಗ್ಗಜರೆನಿಸಿದರೂ ವೈಯಕ್ತಿಕ ಪ್ರಚಾರಕ್ಕೆ ಒಂದಿನಿತೂ ಬೆಲೆ ಕೊಡದೆ, ತೆರೆಮರೆಯಲ್ಲಿಯೇ ಕಾಲವಾದರು.

ರ್‍ಯಾಂಕ್‌ ಗಿಟ್ಟಿಸಿಕೊಂಡ ಗಟ್ಟಿಗ
1933ರ ಜೂ. 20ರಂದು ಜನಿಸಿದ ಟಿ.ಮೋಹನದಾಸ್‌ ಪೈಯವರು 2022ರ ಜು. 31ರಂದು ಇಹಲೋಕ ತ್ಯಜಿಸಿದರು. ತಿಥಿ ಪ್ರಕಾರ ಆ. 19ರಂದು ಅವರು ನಮ್ಮನ್ನು ಅಗಲಿ ವರ್ಷವಾಗುತ್ತಿದೆ. ಪೈಯವರು ಉಡುಪಿ, ಮಣಿಪಾಲದಲ್ಲಿ ಪದವಿ ತನಕ ಓದಿದ್ದರೆ, ಮುಂಬಯಿ ಪ್ರಾಂತವಾದ ಕೊಲ್ಲಾಪುರದಲ್ಲಿ ಕಾನೂನು ಶಿಕ್ಷಣ ಪಡೆದರು. ಆಗ ಪೈಯವರು ಪುಣೆ ವಿ.ವಿ. ವ್ಯಾಪ್ತಿಯಲ್ಲಿ ಪ್ರಥಮ ರ್‍ಯಾಂಕ್‌ ಪಡೆದವರು ಮತ್ತು ಆ ಕಾಲದಲ್ಲಿ ರ್‍ಯಾಂಕ್‌ನ ಗಟ್ಟಿತನ ಎಷ್ಟೆಂಬುದು ಈಗಿನ ತಲೆಮಾರಿನವರಿಗೆ ತಿಳಿದಿರಲಾರದು. ಕಾನೂನು ಶಿಕ್ಷಣ ಪಡೆಯ ಬೇಕಾದರೆ ಆಗ ಒಂದೋ ಮದ್ರಾಸ್‌ ಪ್ರಾಂತ ಅಥವಾ ಮುಂಬಯಿ ಪ್ರಾಂತಕ್ಕೆ ಹೋಗಬೇಕಿತ್ತು ಎನ್ನುವುದು ಜ್ಞಾನಾರ್ಜನೆ ಹಾದಿಯ ಕಷ್ಟವನ್ನು ತಿಳಿಸುತ್ತದೆ. ಆಗ ದೇಶಕ್ಕೆ ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳಾಗಿತ್ತು.

ಹೊಣೆಗಾರಿಕೆ- ಸ್ವಾತಂತ್ರ್ಯ ಜತೆಜತೆಯಲಿ…
ಮೋಹನದಾಸ್‌ ಪೈಯವರ ಇನ್ನೊಂದು ಗುಣವೆಂದರೆ ಕೆಲಸದ ಜವಾಬ್ದಾರಿ ಕೊಟ್ಟ ಬಳಿಕ ಕೆಲಸ ಮಾಡಲು ಸ್ವಾತಂತ್ರ್ಯವನ್ನು ಕೊಡುವುದು ಮತ್ತು ಗಮನಿಸಿ ಆಗಾಗ ಮಾರ್ಗದರ್ಶನ ನೀಡುವುದು. ಆರಂಭದ ಸಂಪಾದಕೀಯ ವಿಭಾಗ ಮುಖ್ಯಸ್ಥರಾಗಿದ್ದ ಬನ್ನಂಜೆ ರಾಮಾಚಾರ್ಯ, ಅವರ ತಮ್ಮ ಡಾ| ಬನ್ನಂಜೆ ಗೋವಿಂದಾಚಾರ್ಯರು ಮೋಹನದಾಸ್‌ ಪೈಯವರು ಕೊಟ್ಟ ಸ್ವಾತಂತ್ರ್ಯವನ್ನು ಸದಾ ಸ್ಮರಿಸುತ್ತಿದ್ದರು. “ಅವರೊಬ್ಬ ಪರ್ಫೆಕ್ಷನಿಸ್ಟ್‌, ಶುದ್ಧ ಭಾಷಾಪ್ರೇಮಿ. ಅವರ ಇರಾದೆಯನ್ನು ಅನುಷ್ಠಾನ ಮಾಡಿದಾಗ ಅವರ ಕಣ್ಣುಗಳಲ್ಲೇ ಅವರಿಗೆ ಇಷ್ಟವಾಗಿತ್ತು ಎಂದು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದೆವು’ ಎನ್ನುತ್ತಾರೆ 44 ವರ್ಷಗಳ ಕಾಲ ಅವರೊಂದಿಗೆ ಒಡನಾಟ ಹೊಂದಿದ್ದ “ಉದಯವಾಣಿ’ಯ ವಿಶ್ರಾಂತ ಸಂಪಾದಕ ಎನ್‌.ಗುರುರಾಜ್‌.

ಹಲವು ಸಂದೇಶಗಳ ಬೀಜ ಬಿತ್ತನೆ
ಬಹುಮುಖೀ ವ್ಯಕ್ತಿತ್ವದ ಮೋಹನದಾಸ್‌ ಪೈಯವರು ಹಲವು ಸಂದೇಶಗಳ ಬೀಜಗಳನ್ನು ಬಿತ್ತಿ ಹೋಗಿದ್ದಾರೆ, ಈ ಬೀಜಗಳನ್ನು ವೃಕ್ಷ ಮಾಡಿ ವೃಕ್ಷದಿಂದ ಬಿಡುವ ಫ‌ಲಗಳನ್ನು ಹಂಚುವ ಹೊಣೆಗಾರಿಕೆ ನಮ್ಮೆಲ್ಲರಿಗಿದೆ ಎಂಬುದನ್ನು ಅವರ ಪ್ರಥಮ ವಾರ್ಷಿಕ ಪುಣ್ಯತಿಥಿಯಂದು ಜ್ಞಾಪಿಸಿಕೊಳ್ಳಬೇಕಾಗಿದೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next