ಮುಂಬಯಿ: ಮುಂಬಯಿಯಲ್ಲಿನ ಸಾರಸ್ವತ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತರ ಸಂಘವು ಕೆಲವಾರು ವರ್ಷಗಳಿಂದ ಸಮುಚಿತವಾಗಿ ಮತ್ತು ವಿಜೃಂಭಣೆಯಿಂದ ಸಂಸ್ಕೃತಿ ದಿನಾಚರಣೆಯಾಗಿ ಸಾರಸ್ವತ ಉತ್ಸವವನ್ನು ಆಚರಿಸುತ್ತಾ ಬರುತ್ತಿದ್ದು, ಸಮಾಜದ ಯುವ ಪೀಳಿಗೆಯಲ್ಲಿ ಸಂಸ್ಕೃತಿ ಪ್ರಜ್ಞೆಯನ್ನು ಬೆಳೆಸುತ್ತಿದೆ. ಇದರೊಂದಿಗೆ ಸಾಧಕರನ್ನು ಗುರುತಿಸಿ ಸಾಧಕ ಪ್ರಶಸ್ತಿಯನ್ನು ಪ್ರದಾನಿಸುತ್ತಿರುವುದು ಅಭಿನಂದನೀಯ. ವಿವಿಧ ಆಶಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಈ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹಲವಾರು ಗೌಡ ಸಾರಸ್ವತ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ, ಸಮಾಜ ಸೇವಕ ಮೋಹನ್‌ದಾಸ್ ಪಿ. ಮಲ್ಯ ಅವರು ನುಡಿದರು.
ಮುಂಬಯಿ ರಾಜಾಪುರ ಸಾರಸ್ವತ ಸಂಘದ ವತಿಯಿಂದ ಇತ್ತೀಚೆಗೆ ದಹಿಸರ್ ಶ್ರೀ ಕಾಶೀಮಠದ ಸಭಾಗೃಹದಲ್ಲಿ ನಡೆದ ಮುಂಬಯಿ ರಾಜಾಪುರ ಸಾರಸ್ವತ ಉತ್ಸವ-2017 ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಕುಲದೇವರು, ಇಷ್ಟದೇವರು ಹಾಗೂ ಗುರುಗಳ ಚಿತ್ರವಿರಿಸಿ ಅದಕ್ಕೆ ಪ್ರಾತಃಕಾಲ ನಮಸ್ಕರಿಸಬೇಕು. ಅಲ್ಲದೆ ಆತ್ಮ ನಿವೇಧನೆ ಮಾಡಿಕೊಳ್ಳಬೇಕು. ಇದಕ್ಕಿಂತ ದೊಡ್ಡ ತೀರ್ಥಯಾತ್ರೆ ಇನ್ನೊಂದಿಲ್ಲ. ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಸೇವೆಗಳು ಅನುಕರಣೀಯವಾಗಿದೆ. ನಿಮ್ಮ ಅರ್ಥಪೂರ್ಣ ಸಮಾಜಪರ ಕಾರ್ಯಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
ಸಮಾಜ ಸೇವಕ, ಛಾಯಾಗ್ರಾಹಕ ಪಿ. ಆರ್. ರವಿಶಂಕರ್ ಡಹಾಣೂ ಅವರು ಮಾತನಾಡಿ, ಪತ್ರಿಕೋದ್ಯಮದಲ್ಲಿ ಸಕ್ರಿಯರಾದವರು ಭಾಷಾಜ್ಞಾನ, ಇತಿಮಿತಿಗಳು, ವಿಷಯ ಸಂಗ್ರಹಣೆಯ ಔಚಿತ್ಯವನ್ನು ಅರಿತಿರಬೇಕು. ಯಾವುದೇ ಒಂದು ಸ್ಥಳ, ವಸ್ತು ಅಥವಾ ಘಟನೆಯನ್ನು ಆಧರಿಸಿ ಲೇಖನ, ಡಾಕ್ಯೂಮೆಂಟರಿ, ಕಥೆಗಳನ್ನು ನಿರ್ಮಿಸುವ ಬಗ್ಗೆ ಮಾಹಿತಿ ನೀಡಿದರು.
ಇನ್ನೋರ್ವ ಸಮ್ಮಾನಿತ ಸಿಡ್ಕೊà ಸುಪರಿಂಟೆಂಡೆಂಟ್ ಎಂಜಿನಿಯರ್ ರಾಜಾ ರಾಮ ಎಸ್. ನಾಯಕ್ ಅವರು ಮಾತನಾಡಿ, ಬೌದ್ಧಿಕ ಮತ್ತು ಭಾವುಕತೆಗಳ ನಡುವೆಯೂ ಸಂಘರ್ಷಮಯ ಚಟುವಟಿಕೆಗಳಿಂದ ನಿಧಾನವಾಗಿ ಹೊಸ ತಲೆಮಾರು ತನ್ನ ನೆಲೆಯನ್ನು ಕಂಡುಕೊಳ್ಳುತ್ತಿರುವುದು ಅಭಿನಂದನೀಯ. ಉದ್ಯಮ ಕ್ಷೇತ್ರದಲ್ಲಿ ನಮ್ಮ ಸಮಾಜ ಯುವಕರು ನೂತನ ಅನ್ವೇಷಣೆ, ಸಾಧ್ಯತೆಗಳತ್ತ ಪ್ರಯತ್ನಿಸಬೇಕು ಎಂದು ಹೇಳಿದರು.
ಇನ್ನೋರ್ವ ಸಮ್ಮಾನಿತ, ಮ್ಯಾರಥಾನ್‌ನಲ್ಲಿ ವಿಶಿಷ್ಟ ಸಾಧನೆಗೈದ ಸುಧಾಕರ ಎಸ್. ಸಾಲ್ವಾಣRರ್ ಅವರು ಮಾತನಾಡಿ, ಇಂದಿನ ಸಾಮುದಾಯಿಕ ಬದುಕಿನಲ್ಲಿ ರಾಜಾಪುರ ಸಂಘದ ಚಟುವಟಿಕೆಗಳು ಸ್ಫೂರ್ತಿಯನ್ನು ನೀಡುತ್ತಿವೆ. ಸಂಘದ ಎಲ್ಲಾ ಕಾರ್ಯಕ್ರಮಗಳು ಅಭಿನಂದನೀಯವಾಗಿದೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಪಡೆದ ಕಡ್ತಲ ಕೃಪಾ ನಾಯಕ್ ಅವರನ್ನು ಸಾಧಕ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್, ಸಂಸ್ಥೆಯ ಮಹಿಳಾ ವಿಭಾಗ, ಯುವ ವಿಭಾಗ ಇನ್ನಿತರ ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಪೂಜಾ ಜೆ. ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 206 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲಾಯಿತು. ಬಾಂದ್ರಾದ ಮಹಾತ್ಮಾ ಗಾಂಧೀ ಸೇವಾ ಆಸ್ಪತ್ರೆಯ ಸಹಯೋಗದೊಂದಿಗೆ ಜರಗಿದ ರಕ್ತದಾನ ಶಿಬಿರದಲ್ಲಿ 81 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಯುವ ವೃಂದ ಹಾಗೂ ಮಹಿಳಾ ವಿಭಾಗದ ವತಿಯಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.