ಬೆಂಗಳೂರು: ಚಲನಚಿತ್ರ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಂದ 85 ಲಕ್ಷ ರೂ. ಪಡೆದು ವಂಚಿಸಿದ್ದ ಚಿತ್ರ ನಿರ್ಮಾಪಕ ಸೇರಿ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಚಿತ್ರ ನಿರ್ಮಾಪಕ ಕೆ.ಸುಧಾಕರ, ವೆಂಕಟ ಸುಬ್ಬಯ್ಯ, ನಲ್ಲಯ್ಯನ್ ಪೀಟರ್, ಜಯ್‌ಕುಮಾರ್ ಬಂಧಿತರು. ವರ್ಧನ, ಹುಲಿದುರ್ಗ ಚಲನಚಿತ್ರಗಳ ನಿರ್ಮಾಪಕನಾಗಿರುವ ಕೆ.ಸುಧಾಕರ್, ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ “ಪೇಟ’ ಚಿತ್ರದ ವಿತರಣೆ ಹಕ್ಕು ಪಡೆದಿರುವುದಾಗಿ ನಂಬಿಸಿ ಹಲವರಿಂದ ಹಣಪಡೆದು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಹೊಸಕೆರೆಹಳ್ಳಿ ನಿವಾಸಿ ದಿವ್ಯಾ ಎಂಬುವವರನ್ನು ಪರಿಚಯಿಸಿಕೊಂಡಿದ್ದ ಸುಧಾಕರ್, ಚಲನ ಚಿತ್ರ ನಿರ್ಮಾಣದಲ್ಲಿ ಹಣ ತೊಡಗಿಸಿದರೆ ಹೆಚ್ಚು ಲಾಭ ಮಾಡಬಹುದು. ಜತೆಗೆ, ಮೈಸೂರಿನ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್ ಬಳಿ ಜಮೀನು ಖರೀದಿಸಿ ಲೇಔಟ್ ನಿರ್ಮಾಣ ಮಾಡುವುದಾಗಿ ನಂಬಿಸಿ 85 ಲಕ್ಷ ರೂ. ಪಡೆದು ವಾಪಾಸ್ ನೀಡದೆ ವಂಚಿಸಿದ್ದ.
ಹಲವು ಬಾರಿ ಹಣ ವಾಪಾಸ್ ಕೇಳಿದರೂ ನೀಡದೆ, ಸತಾಯಿಸಿದ್ದಲ್ಲದೆ, ಬೆದರಿಕೆ ಹಾಕಿದ್ದ. ಈ ಕುರಿತು ದಿವ್ಯಾ, ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ವರ್ಗಾವಣೆಯಾದ ಬಳಿಕ ತನಿಖೆ ನಡೆಸಿ ಸುಧಾಕರ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಸುಧಾಕರ ಮಾಡುವ ವಂಚನೆಗಳಿಗೆ ಆತನ ಸಹಚರರು ಸಾಥ್ ನೀಡುತ್ತಿದ್ದರು. ಕೆಲವೊಮ್ಮೆ, ಅವರೇ ಹಣವಿರುವವರನ್ನು ಆತನಿಗೆ ಪರಿಚಯ ಮಾಡಿಕೊಡುತ್ತಿದ್ದರು. ಬಳಿಕ ಹಣ ಲಕ್ಷಾಂತರ ರೂ. ಹಣ ಪಡೆದು ವಂಚನೆ ಎಸಗುತ್ತಿದ್ದರು. ಆರೋಪಿಗಳಿಂದ ವಂಚನೆಗೊಳಗಾದವರು ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.