Advertisement

ಪೊಲೀಸರಿಂದ ಅರ್ಧ ಕೋಟಿ ರೂ.ಜಪ್ತಿ

02:22 PM Nov 09, 2017 | |

ಕಲಬುರಗಿ: ಮೀಟರ್‌ ಬಡ್ಡಿ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಸಂಗ್ರಹಿಸಿಟ್ಟ ಸುಮಾರು ಅರ್ಧಕೋಟಿ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಒಟ್ಟು ನಾಲ್ಕು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಒಟ್ಟು 49 ಲಕ್ಷ ರೂ.ಗಳಿಗೂ ಅಧಿಕ ಹಣ ಜಪ್ತಿ ಮಾಡಿದ್ದಾರೆ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

Advertisement

ಬ್ರಹ್ಮಪುರ ಠಾಣೆ ಪೊಲೀಸರು ಮಿಲನ್‌ ಚೌಕ್‌ದಲ್ಲಿ ಕರಣ ಗಾಯಕವಾಡ ಎಂಬುವನನ್ನು ಬಂಧಿಸಿ 40.08 ಲಕ್ಷ ರೂ. ಹಾಗೂ ಶ್ರೀಕಾಂತ ಒಂಟಿ ಎಂಬಾತನನ್ನು ಬಂಧಿಸಿ 3.26 ಲಕ್ಷ ರೂ. ವಶಪಡಿಸಿ ಕೊಳ್ಳಲಾಗಿದೆ. ಸ್ಟೇಷನ್‌ ಬಜಾರ್‌ ಠಾಣೆ ಪೊಲೀಸರು ಮೀನಾಕ್ಷಿ ಕಾಂತಾ ಎನ್ನುವರನ್ನು ಬಂಧಿಸಿ 3.15 ಲಕ್ಷ ರೂ. ಹಾಗೂ ರಾಘವೇಂದ್ರ ನಗರ ಠಾಣೆ ಸಿಬ್ಬಂದಿ ನಾಗರಾಜ ಕಲಶೆಟ್ಟಿ ಎಂಬುವನನ್ನು ಬಂಧಿಸಿ 2.68 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬ್ರಹ್ಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಿಲನ್‌ ಚೌಕ್‌ ಬಡಾವಣೆಯಲ್ಲಿ ಕರಣ ಗಾಯಕವಾಡ ಎಂಬಾತ ಅಕ್ರಮವಾಗಿ ಹಣ ಸಂಗ್ರಹಿಸಿ ಯಾವುದೇ ಸರ್ಕಾರಿ ಪರವಾನಗಿ ಇಲ್ಲದೇ ಹಣದ ವ್ಯವಹಾರ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 40 ಲಕ್ಷ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಈ ಹಣ ದೊರೆತ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಕರಣ ಗಾಯಕವಾಡ ಮಿಲನ್‌ ಚೌಕ್‌ದಲ್ಲಿ ಸಣ್ಣದೊಂದು ಕಚೇರಿ ಮಾಡಿಕೊಂಡು ಸರ್ಕಾರದ ಪರವಾನಗಿ ಇಲ್ಲದೆ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅಲ್ಲದೆ ಯಾವುದೇ ದಾಖಲೆಗಳಿಲ್ಲದೆ ಹಣ ಸಂಗ್ರಹಿಸಿಟ್ಟುಕೊಂಡಿದ್ದರು. ದಾಖಲೆಗಳನ್ನು ನೀಡಲು ವಾರದವರೆಗೆ ಸಮಯ ನೀಡಿದರೂ ಕೊಡಲಾಗಲಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಆದಾಯ ತೆರಿಗೆ
ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾವು ಖುದ್ದಾಗಿ ಐಟಿ ಅಧಿಕಾರಿಗಳೊಂದಿಗೆ ಮಾತನಾಡಿ, ತನಿಖೆ ನಡೆಸುವಂತೆ ಕೋರಿದ್ದೇವೆ ಎಂದು ತಿಳಿಸಿದರು.

ಎಸ್ಪಿ ಶಶಿಕುಮಾರ ಮಾರ್ಗದರ್ಶನದಲ್ಲಿ ಎಎಸ್ಪಿ ಲೋಕೇಶ ಬಿ.ಜೆ.ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಗಂಗಾಧರ ಬಿ.ಎಂ,
ಎಸ್‌.ಎಂ.ಯಾಳಗಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಕುರಿತು ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು. ಡಿಎಸ್ಪಿ ಯು.ಶರಣಪ್ಪ ಹಾಗೂ ಕಾರ್ಯಾಚರಣೆ ನಡೆಸಿದ ತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

ನಿರ್ಭಯವಾಗಿ ದೂರು ನೀಡಿ
ಮೀಟರ್‌ ಬಡ್ಡಿಯಿಂದ ತೀವ್ರ ತೊಂದರೆಗಾದವರಿಂದ ತಮ್ಮ ಕಚೇರಿಗೆ ಮೀಟರ್‌ ಬಡ್ಡಿ ವ್ಯವಹಾರದ ವಿರುದ್ಧ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಅದೇ ರೀತಿ ಸಾರ್ವಜನಿಕರು ಮೀಟರ್‌ ದಂಧೆಯಿಂದ ಕಿರುಕುಳಕ್ಕೆ ಒಳಗಾದವರು ವಿವರಣೆ ಸಮೇತ ದೂರು ನೀಡಿದಲ್ಲಿ ಬುಡ ಸಮೇತ ಕಿತ್ತು ಹಾಕಲು ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಬರೀ ಅನಾಮಧೇಯ ಪತ್ರ ಕಳಿಸುವ ಬದಲು ಖುದ್ದಾಗಿ ದೂರು ನೀಡಲು ಮುಂದೆ ಬಂದರೆ ಉತ್ತಮ.
ಅಲೋಕಕುಮಾರ, ಐಜಿಪಿ, ಈಶಾನ್ಯ ವಲಯ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next