ಮಂಡ್ಯ: ಸರ್ಕಾರದ ಕಾರ್ಮಿಕರ ನಿಧಿಯಲ್ಲಿ ಕಳೆದ ಸಾಲಿನಲ್ಲಿ ಸುಮಾರು 9 ಸಾವಿರ ಕೋಟಿ ರೂ. ಹಣವಿದ್ದು, ಇದು ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಯಾಲಕ್ಕಿ ಗೌಡ ಹೇಳಿದರು.
ನಗರದ ಗುತ್ತಲು ಬಡಾವಣೆಯಲ್ಲಿರುವ ನುಡಿಭಾರತಿ ಸಮುದಾಯಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘ ಮತ್ತು ನುಡಿಭಾರತಿ ಸೇವಾ ಟ್ರಸ್ಟ್, ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಗುರುತಿನ ಕಾರ್ಡ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೌಲಭ್ಯ ಪಡೆಯಿರಿ: ಪ್ರಸ್ತುತ ದಿನಗಳಲ್ಲಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಗುರು ತಿನ ಚೀಟಿ ಪಡೆದು, ಸರ್ಕಾರ ನೀಡುವ ಸೌಲಭ್ಯ ಮತ್ತು ಸವಲತು ಪಡೆದುಕೊಳ್ಳುವಂತಾಗಬೇಕಿದೆ. ಕಾರ್ಮಿಕರ ಕಲ್ಯಾಣ ಕ್ಕಾಗಿ ನಿಧಿಯ ಸ್ಥಾಪಿಸಿದ್ದು, ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂದರು.
ಉತ್ತಮ ಯೋಜನೆ: ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ರಾಜೇಶ್ ಜಾಧವ್ ಮಾತ ನಾಡಿ, ದಿನ ನಿತ್ಯ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ 1996ರಲ್ಲಿ ಕಾರ್ಮಿಕ ಹಿತಕಾಯಲು ಕಾಯ್ದೆ ರೂಪಿಸಿದರು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಇದರಲ್ಲಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಾರ್ಮಿಕ ಇಲಾಖೆಯಲ್ಲಿ ಉತ್ತಮ ಯೋಜನೆಗಳು ಇವೆ. ಅರ್ಹ ಫಲಾನುಭವಿಗಳು ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು. ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ಮದುವೆ, ಮನೆ ನಿರ್ಮಾಣಕ್ಕೆ ಸಾಲ, ಪಿಂಚಣಿ ವ್ಯವಸ್ಥೆ ಇದೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅರ್ಹ ಕಾರ್ಮಿಕ ಫಲಾನುಭವಿಗಳಿಗೆ ಗಣ್ಯರು ಕಟ್ಟಡ ಕಾರ್ಮಿಕ ನೋಂದಣಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ಅಧ್ಯಕ್ಷೆ ರಜನಿರಾಜ್, ಮಿಮ್ಸ್ ಪಿಆರ್.ಒ ಉಮೇಶ್, ಮೈಸೂರು ವಿಶ್ವವಿದ್ಯಾಲಯದ ಮಾಜಿ ಸನೆಟ್ ಸದಸ್ಯ ಎ.ಎಲ್.ಬಸವೇಗೌಡ, ಮೀನಾ ನಾಗೇಶ್, ನೀನಾ ಪಟೇಲ್, ದೇವರಾಜುಕೊಪ್ಪ, ಅನು ಪಮ, ಮಂಜುಳಾ, ಶಂಕುಂತಲಾ, ವರ ಪ್ರಸಾದ್, ನಾಗರತ್ನ, ರಶ್ಮಿ ನಗರಸಭಾ ಸದಸ್ಯೆ ಪೂರ್ಣಿಮಾ, ಸುಧಾ ಹಾಜರಿದ್ದರು.