Advertisement

ಪಳ್ಳತ್ತೂರು ಸರ್ವಋತು ಸೇತುವೆಗೆ 7.50 ಕೋಟಿ ರೂ. ಮಂಜೂರು

03:40 PM Nov 23, 2017 | |

ಈಶ್ವರಮಂಗಲ: ಕರ್ನಾಟಕ-ಕೇರಳ ರಾಜ್ಯವನ್ನು ಬೆಸೆಯುವ ಪಳ್ಳತ್ತೂರಿನಲ್ಲಿ ಸರ್ವಋತು ಸೇತುವೆಗೆ ಕೊನೆಗೂ ಕೇರಳ ಸರಕಾರ 7.50 ಕೋಟಿ ರೂ. ಮಂಜೂರುಗೊಳಿಸಿದೆ. ಈ ಮೂಲಕ ಮಳೆಗಾಲದಲ್ಲಿ ಮುಳುಗುತ್ತಿದ್ದ ಮುಳುಗು ಸೇತುವೆ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ನೂತನ ಸೇತುವೆ ಕಾಮಕಾರಿ ನ. 24ರಿಂದ ಪ್ರಾರಂಭವಾಗಲಿದೆ.

Advertisement

ಎಲ್ಲಿದೆ ಸೇತುವೆ?
ಪುತ್ತೂರು ತಾಲೂಕಿನ ಈಶ್ವರಮಂಗಲದಿಂದ 5 ಕಿ.ಮೀ. ದೂರದಲ್ಲಿ ಪಳ್ಳತ್ತೂರು ಎಂಬಲ್ಲಿ ಕೇರಳ ರಾಜ್ಯದ ದೇಲಂಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಮುಳುಗು ಸೇತುವೆ ಇದೆ. ಪಳ್ಳತ್ತೂರಿನಿಂದ ಅರ್ಧ ಕಿ.ಮೀ ದೂರ ಸಾಗಿದರೆ ಸುಳ್ಯ-ಕಾಸರಗೋಡು ಸಂಪರ್ಕಿಸುವ ಕೇರಳದ ಲೋಕೋಪಯೋಗಿ ರಸ್ತೆಯಿದೆ. ಕರ್ನೂರು ಗಾಳಿಮುಖ ರಸ್ತೆ ಮೂಲಕ ಕೇರಳ ಸಂಪರ್ಕಿಸಲು ಅವಕಾಶ ಇದ್ದರೂ ರಸ್ತೆಯ ಅವ್ಯವಸ್ಥೆಯಿಂದ ಬಹುತೇಕರು ಈ ರಸ್ತೆಯನ್ನು ಬಳಸುತ್ತಾರೆ.
ಇನ್ನೂ ಒಂದು ಅಚ್ಚರಿ ಎಂದರೆ ಇಲ್ಲಿ ಸೇತುವೆ ಭಾಗ ಮಾತ್ರ ಕೇರಳದ ಭೂಪ್ರದೇಶದಲ್ಲಿದ್ದು, ಅದರ ಎರಡೂ ಕಡೆ ರಸ್ತೆ ಕರ್ನಾಟಕಕ್ಕೆ ಸೇರಿದ್ದಾಗಿದೆ.

ಮಳೆಗಾಲದಲ್ಲಿ ಸಂಚಾರ ಕಷ್ಟ!
ಮಳೆಗಾಲ ಸಂದರ್ಭದಲ್ಲಿ ಮುಳುಗು ಸೇತುವೆಯಲ್ಲಿ ಸಂಚಾರ ಕಷ್ಟವಾಗಿತ್ತು. ಇಲ್ಲಿ ಕಿರು ಮೋರಿಗಳನ್ನು ಅಳವಡಿಸಿ, ಪಳ್ಳತ್ತೂರು ಕಿರು ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಸಣ್ಣ ಮಳೆಗೂ ಸೇತುವೆ ಮುಳುಗುವುದರಿಂದ ಇಲ್ಲಿ ವರ್ಷವೂ ಸಂಚಾರ ಸ್ಥಗಿತಗೊಳ್ಳುತ್ತಿತ್ತು. 2 ವರ್ಷಗಳ ಹಿಂದೆ ಇಲ್ಲಿ ಮಳೆಗಾಲದ ಸಂದರ್ಭ ಬೈಕ್‌ ಚಲಾಯಿಸಿ ಹೆಚ್ಚುವರಿ ಎಸ್‌ಐ ಅವರು ನೀರಲ್ಲಿ ಕೊಚ್ಚಿ ಹೋಗಿದ್ದರು. ನೀರಿನ ಸೆಳೆತಕ್ಕೆ ವಾಹನಗಳು ನದಿ ಪಾಲಾದ ಘಟನೆಗಳು ನಡೆದಿದ್ದವು.

ಹಲವು ಬಾರಿ ಕೇರಳ ಸರಕಾರಕ್ಕೆ ಮನವಿ
ದುರ್ಘ‌ಟನೆಗಳ ಹಿನ್ನೆಲೆಯಲ್ಲಿ ಹಲವು ಬಾರಿ ಸ್ಥಳೀಯ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಶಾಸಕಿ ಶಕುಂತಳಾ ಶೆಟ್ಟಿ ಅವರ ಮೂಲಕ ಜಿಲ್ಲಾಡಳಿತ ಸಂಪರ್ಕಿಸಿ ಹೊಸ ಸೇತುವೆಗೆ ಕೇರಳಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೇ ಸೇತುವೆ ಬರುವ ಕೇರಳದ ಉದುಮ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಲಾಗಿತ್ತು. ಸ್ಥಳೀಯರ ಒತ್ತಾಸೆ ಮೇರೆಗೆ ಈಗ ಪಳ್ಳತ್ತೂರು ಸೇತುವೆಗೆ ಕಾಸರಗೋಡು ಪ್ಯಾಕೇಜ್‌ ಒಳಪಡಿಸಿ ಕೇರಳ ಸರಕಾರ 7.50 ಕೋಟಿ ರೂ. ಮಂಜೂರು ಮಾಡಿದೆ. ನ.24ರಿಂದ ಇದರ ಕಾಮಗಾರಿ ಆರಂಭವಾಗಲಿದೆ.

ಶಾಸಕರ ಪ್ರಯತ್ನ
ಪಳ್ಳತ್ತೂರು ಮುಳುಗು ಸೇತುವೆ ಬಗ್ಗೆ ಹಲವು ಬಾರಿ ಕೇರಳ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಶಾಸಕಿ ಶಕುಂತಳಾ ಶೆಟ್ಟಿ ಅವರೂ ಈ ಬಗ್ಗೆ ಪ್ರಯತ್ನ ನಡೆಸಿದ್ದರು. ಇದೀಗ ಕಾಮಗಾರಿಗೆ ಹಣ ನೀಡಿಕೆಯೊಂದಿಗೆ, ಜನತೆಯ ಹಲವಾರು ವರ್ಷಗಳ ಬೇಡಿಕೆ ಈಡೇರಲಿದೆ.
ಶ್ರೀರಾಮ್‌ ಪಕ್ಕಳ,
   ನೆಟ್ಟಣಿಗೆಮುಟ್ನೂರು ಗ್ರಾ.ಪಂ.

Advertisement

 ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next