ಕುಷ್ಟಗಿ:ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿ ನೀರು, ಕುಷ್ಟಗಿ ಜಲಸಂಗ್ರಹಕಾರಕ್ಕೆ ಪೂರೈಕೆ ವೇಳೆ ಪೋಲಾಗುವುದನ್ನು ತಪ್ಪಿಸಲು ನಗರೋತ್ಥಾನ ಯೋಜನೆ ಹಂತ ಮೂರರ ಅನುದಾನದ ಉಳಿಕೆ ಹಣ ಬಳಸಿಕೊಂಡು 74 ಲಕ್ಷ ರೂ. ವೆಚ್ಚದಲ್ಲಿ ನೆಲಮಟ್ಟದ ಜಲಸಂಗ್ರಹ ನಿರ್ಮಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಹೇಳಿದರು.
ಇಲ್ಲಿನ ಇಲಕಲ್ ರಸ್ತೆಯಲ್ಲಿ ಪುರಸಭೆ ಕೃಷ್ಣಾ ನದಿ ನೀರಿನ ಜಲಸಂಗ್ರಹಗಾರದ ಬಳಿ, ಕರ್ನಾಟಕ ನಗರ ನೀರು ಸರಬರಾಜು ಓಳ ಚರಂಡಿ ಮಂಡಳಿ ನಿರ್ಮಿಸುತ್ತಿರುವ 74 ಲಕ್ಷರೂ ಯೋಜನಾ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೆಚ್ಚುವರಿ ಜಲ ಸಂಗ್ರಹ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಪಟ್ಟಣಕ್ಕೆ ನೀರು ಪೂರೈಸುವ ವೇಳೆ ಕುಷ್ಟಗಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಲ್ಲಿ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿತ್ತು. ವ್ಯರ್ಥವಾಗಿ ಹಳ್ಳ ಸೇರುವ ನೀರನ್ನು 10 ಲಕ್ಷ ಲೀಟರ್ ಸಾಮರ್ಥ್ಯ ದ ಜಲ ಸಂಗ್ರಹಗಾರ ನಿರ್ಮಿಸಿದರೆ, ಕುಷ್ಟಗಿಯಲ್ಲಿ ಮೂರು ವಿದ್ಯುತ್ ಹೋದರೂ ಸಹ, ನೀರು ವ್ಯರ್ಥವಾಗದೇ ಜಲಸಂಗ್ರಹಗಾರದಲ್ಲಿ ಜಮೆಯಾಗಲಿದೆ ಆ ನೀರನ್ನು ಪಟ್ಟಣಕ್ಕೆ ಬೇಕಾದಾಗ ಪೂರೈಸಬಹುದಾಗಿದೆ ಎಂದರು.
ಈ ಕಾಮಗಾರಿಯನ್ನು ಕೆಯುಡಬ್ಲ್ಯೂ ಎಸ್ ಬಿ ಆದಷ್ಟು ಬೇಗನೆ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ಕೆಯುಡಬ್ಲ್ಯೂಎಸ್ ಬಿ ಹುನಗುಂದ ಇಇ ಎಸ್.ಎಸ್. ಪಟ್ಟಣಶೆಟ್ಟರ್, ಮುಖ್ಯಾಧಿಕಾರಿ ಉಮೇಶ ಹಿರೇಮಠ, ಪುರಸಭೆ ಸದಸ್ಯರಾದ ಸಯ್ಯದ್ ಮೈನುದ್ದೀನ್ ಮುಲ್ಲಾ, ಬಸವರಾಜ ಬುಡಕುಂಟಿ, ಅಂಬಣ್ಣ ಭಜಂತ್ರಿ, ಮಹಾಂತೇಶ ಕಲ್ಲಭಾವಿ ಹಾಗೂ ಮಂಜುನಾಥ ಕಟ್ಟಿಮನಿ, ಯಮನೂರ ಸಂಗಟಿ, ಎಇಇ ವೀಣಾ ಸೀತಿಮನಿ, ಗುತ್ತಿಗೆದಾರ ಅಬ್ದುಲಗನಿ ದೋಟಿಹಾಳ, ವ್ಯವಸ್ಥಾಪಕ ಷಣ್ಮುಖಪ್ಪ ಮತ್ತಿತರಿದ್ದರು.