Advertisement

62 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ ಜಾರಿ

04:50 PM Sep 09, 2017 | Team Udayavani |

ಕೊರಟಗೆರೆ: ಕಳೆದ ನಾಲ್ಕು ವರ್ಷಗಳ ಅವಧಿಯ ಕಾಂಗ್ರೆಸ್‌ ಪಕ್ಷದ ಆಡಳಿತದಲ್ಲಿ ರಾಜ್ಯ ರೈತರ ಹಿತಕಾಯುವ ದೃಷ್ಟಿಯಿಂದ ನೀರಾವರಿ ಯೋಜನೆಗಾಗಿ 62 ಸಾವಿರ ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ವಿವಿಧ ಗ್ರಾಪಂಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಎತ್ತಿನ ಹೊಳೆ ಪ್ರಗತಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷದ ಅದಿಕಾರ ಅವಧಿಯಲ್ಲಿ ಮಹತ್ವಕಾಂಕ್ಷಿ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆ ಈಗಾಗಲೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಈ ಭಾಗಕ್ಕೆ ನೀರು ಹರಿಯಲಿದೆ ಎಂದರು. ಕೊರಟಗೆರೆ ತಾಲೂಕಿನ ಬೈರಗೊಂಡ್ಲ ಗ್ರಾಮದಲ್ಲಿ ನಿರ್ಮಾಣವಾಗುವ ಎತ್ತಿನಹೊಳೆ ಯೋಜನೆಯ ಬಫ‌ರ್‌ ಡ್ಯಾಂ ನಿರ್ಮಾಣಕ್ಕೆ ರೈತರಿಂದ ಪಡೆಯುವ ಜಮೀನಿಗೆ ದೊಡ್ಡಬಳ್ಳಾಪುರ ರೈತರಿಗೆ ನೀಡುವಂತೆ ಪರಿಹಾರ ನೀಡಲಾಗುವುದು ಎಂದರು.

ಬರವರಿಗೆ ಮನೆ: ಮನೆ ಇಲ್ಲದ ವರಿಗೆ 15 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯಲ್ಲಿ 13 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ಉಳಿದ ಅವಧಿಯಲ್ಲಿ ಇನ್ನು 3 ಲಕ್ಷ ಮನೆ ನಿರ್ಮಾಣ ಮಾಡಿ ಗುರಿ ಮೀರಿ ಸಾಧನೆ ಮಾಡಲಾಗುವುದು ಎಂದರು.

35 ಸಾವಿರ ಉದ್ಯೋಗ ಸೃಷ್ಟಿ: ಪ್ರತಿವರ್ಷ ನಿರುದ್ಯೋಗಿ ಯುವಕ ಯುವತಿಯರಿಗೆ 35 ಸಾವಿರ ಉದ್ಯೋಗ ಸೃಷ್ಟಿಸಿ ಉದ್ಯೋಗ ನೀಡಲಾಗಿದೆ, ಹಸಿದ ಬಡ ಜನತೆಗೆ ಅನ್ನಭಾಗ್ಯ ಯೋಜನೆ ಯಡಿ 3.5 ಕೋಟಿ ಮಂದಿಗೆ ತಲಾ 7 ಕೆ.ಜಿ. ಅಕ್ಕಿ, 63 ಲಕ್ಷ ಮಂದಿ ಶಾಲಾ ಮಕ್ಕಳಿಗೆ ಪ್ರತಿ ನಿತ್ಯ ಕ್ಷೀರಭಾಗ್ಯ ಮತ್ತು ಬಿಸಿ ಊಟ ದೊಂದಿಗೆ ಉಚಿತ ಸೈಕಲ್‌ ಮತ್ತು ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು.

ಗ್ರಾಪಂಗಳಿಗೆ ಅಧಿಕಾರ: ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದ ಸಾಧನೆಯನ್ನು ಜನರಲ್ಲಿ ಅರಿವುಮೂಡಿಸಲು ಕಾಂಗ್ರೆಸ್‌ ನಡಿಗೆ ಮನೆ-ಮನೆಗೆ ಎಂಬ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಬೇಕಾಗಿದೆ ಎಂದರು.

Advertisement

ಕೊರಟಗೆರೆ ಅಭಿವೃದ್ಧಿಗೆ ಕ್ರಮ: ಕೊರಟಗೆರೆ ಕ್ಷೇತ್ರದಲ್ಲಿ ತಮಗೆ ಅಧಿಕಾರ ಇಲ್ಲದಿದ್ದರೂ ಕಳೆದ 4 ವರ್ಷಗಳಲ್ಲಿ ಅನೇಕ ಅಭಿವೃದ್ಧಿಕಾಮಗಾರಿಗಳನ್ನು ಮತ್ತು ಅನುದಾನವನ್ನು ನೀಡುವ ಮೂಲಕ ಶ್ರಮಿಸಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗ ನಿಷ್ಟೆಯಿಂದ ಶ್ರಮಿಸ ಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಎಸ್‌.ಪಿ.ಮುದ್ದಹಮೇಗೌಡ, ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿ.ಬಿ.ರಾಮಚಂದ್ರಯ್ಯ, ಸೋಮಣ್ಣ, ಮುಖಂಡರಾದ ಎ.ಡಿ.ಬಲರಾಮಯ್ಯ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕವಿತಾ, ಎಪಿಎಂಸಿಅಧ್ಯಕ್ಷ ವೆಂಕಟೇಶ್‌ಮೂರ್ತಿ, ಸದಸ್ಯ ರವಿಕುಮಾರ್‌, ಗ್ರಾ ಪಂ ಸದಸ್ಯೆ ಭಾಗ್ಯಮ್ಮ, ಮಯೂರಗೋವಿಂದರಾಜು, ಜಯರಾಮ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next