Advertisement
ಮಂಗಳೂರು: ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಲ್ಲಿ (ಪಿಎಂಕೆಎಸ್‌ವೈ) ದ.ಕ. ಜಿಲ್ಲೆಯಿಂದ ಕೇಂದ್ರಕ್ಕೆ ಸಲ್ಲಿಕೆಯಾಗಿರುವ 5987 ಕೋ. ರೂ. ನೀರಾವರಿ ಯೋಜನೆಗಳು ಮಂಜೂರಾತಿಗಾಗಿ ಕಾಯುತ್ತಿವೆ.
1.11 ಕೋ. ಘನ ಮೀಟರ್ ನೀರು ಸೃಜಿಸುವ ಗುರಿ
ದ.ಕನ್ನಡ ಜಿಲ್ಲೆಯಲ್ಲಿ ವಾಡಿಕೆಯಂತೆ 3912 ಮಿ. ಮೀ. ಮಳೆಯಾಗುತ್ತಿದ್ದು, ಮೇಲ್ಮೈ ಮತ್ತು ಅಂತರ್ಜಾಲ ಸೇರಿ 0.43 ಕೋಟಿ ಘನ ಮೀಟರ್ ನೀರು ಲಭ್ಯವಿದೆ. ಆದರೆ ಪ್ರಸ್ತುತ ಜಿಲ್ಲೆಯ ನೀರಾವರಿ, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಮತ್ತು ಕೈಗಾರಿಕಾ ಬೇಡಿಕೆ ಸೇರಿ 2020ರ ವೇಳೆಗೆ ಒಟ್ಟಾರೆ 0.487 ಕೋಟಿ ಘನ ಮೀಟರ್ ನೀರಿನ ಬೇಡಿಕೆ ಉಂಟಾಗಲಿದೆ. ಇದನು ಪೂರೈಸಲು ವಿವಿಧ ಇಲಾಖೆಗಳು ಸೇರಿ ಪ್ರಧಾನಿ ಕೃಷಿ ಸಿಂಚಯಿ ಯೋಜನೆಯಲ್ಲಿ 5987 ಕೋ. ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. 1.43 ಲಕ್ಷ ಹೆಕ್ಟೇರಿಗೆ ನೀರಾವರಿ
ಪ್ರಸ್ತಾವಿತ ಯೋಜನೆ ಪ್ರಕಾರ ದ.ಕನ್ನಡ ಜಿಲ್ಲೆಯಲ್ಲಿ 1,43, 681 ಹೆಕ್ಟೇರ್ ವಿಸ್ತೀರ್ಣ ಪ್ರದೇಶಕ್ಕೆ ನೀರಾವರಿ ಆಗಲಿದೆ. ನೀರಾವರಿ ಇಲಾಖೆಯಿಂದ 51,900 ಹೆಕ್ಟೇರ್ ಪ್ರದೇಶಕ್ಕೆ 4222.47 ಕೋ. ರೂ. ಅಂದಾಜು ಮೊತ್ತ ನಿಗದಿ ಪಡಿಸಲಾಗಿದ್ದು, 1.08 ಕೋಟಿ ಘನ ಮೀಟರ್ ನೀರು ಸಂಗ್ರಹ, ಕೃಷಿ ಇಲಾಖೆಯಿಂದ 84704 ವಿಸ್ತೀರ್ಣ ಪ್ರದೇಶಕ್ಕೆ 167 ಕೋ. ರೂ. ಅಂದಾಜು ಮೊತ್ತ ವೆಚ್ಚ, ತೋಟಗಾರಿಕೆ ಇಲಾಖೆಯಂದ 7077 ಹೆಕ್ಟೇರ್ ಪ್ರದೇಶಕ್ಕೆ 378 ಕೋ. ರೂ. ನೀರಾವರಿ ವ್ಯವಸ್ಥೆ ಮಾಡುವ ಪ್ರಸ್ತಾವನೆ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿದೆ. ಒಟ್ಟಾರೆ ಯೋಜನೆಯಲ್ಲಿ 1.118 ಕೋಟಿ ಘನ ಮೀಟರ್ ನೀರು ಸಂಪನ್ಮೂಲ ಹೊಂದುವ ಗುರಿ ಹೊಂದಲಾಗಿದೆ. ಇದರಲ್ಲಿ ನೀರಾವರಿ ಇಲಾಖೆಯಿಂದ 1029 ಕಿಂಡಿ ಅಣೆಕಟ್ಟು ಹಾಗೂ ಕೃಷಿ ಇಲಾಖೆಯಿಂದ 519 ಕಿಂಡಿ ಅಣೆಕಟ್ಟುಗಳು ಹಾಗೂ ಇತರ ಪೂರಕ ಕಾಮಗಾರಿಗಳನ್ನು ಕ್ರಿಯಾ ಯೋಜನೆ ಒಳಗೊಂಡಿದೆ.
ದ.ಕ. : 1.13 ಲಕ್ಷ ಹೆ. ತೋಟಗಾರಿಕೆ, 28,700 ಹೆ. ಭತ್ತ ದಕ್ಷಿಣ ಕನ್ನಡ ಜಿಲ್ಲೆ ಒಟ್ಟು 4,77, 149 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1,13,549 ಹೆ. ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಇದೆ. ಈ ಬಾರಿ ಮುಂಗಾರಿನಲ್ಲಿ 28,700 ಹಾಗೂ ಹಿಂಗಾರಿನಲ್ಲಿ 19930 ಹೆ. ಭತ್ತ ಕೃಷಿ ಮಾಡಲಾಗಿದೆ. 2016-17ನೇ ಸಾಲಿನಲ್ಲಿ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಭತ್ತದ ಕೃಷಿ ಗಣನೀಯವಾಗಿ ಕಡಿಮೆಯಾಗಿದೆ. ವಾರ್ಷಿಕವಾಗಿ ದ.ಕ. ಜಿಲ್ಲೆಯ ವಾಡಿಕೆ ಮಳೆ 3912.2 ಮಿ.ಮೀ. ಆಗಿದ್ದು, ಈ ಬಾರಿ 2965.3 ಮಿ.ಮೀ. ಮಳೆ ಬಂದಿದೆ. 2015 ನೇ ಸಾಲಿನಲ್ಲಿ 3151.6 ಮಿ.ಮೀ. ಮಳೆಯಾಗಿತ್ತು.
Related Articles
ಹರ್ ಖೇತಿ ಕೋ ಪಾನಿ (ಪ್ರತಿಯೊಂದು ಹೊಲಕ್ಕೂ ನೀರು) ಎಂಬ ಪರಿಕಲ್ಪನೆಯೊಂದಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಿ ಕೃಷಿ ಸಿಂಚಯಿ ಯೋಜನೆ (ಪಿಎಂಕೆಎಸ್‌ವೈ) ಒಟ್ಟು 5 ವರ್ಷಗಳ ಯೋಜನೆಯಾಗಿದ್ದು, ಇದಕ್ಕೆ 50,000 ಕೋ. ರೂ. ನಿಗದಿಪಡಿಸಲಾಗಿದೆ. ದೇಶದಲ್ಲಿ 142 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿ ಇದ್ದು ಇದರಲ್ಲಿ ಶೇ. 45 ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ.
Advertisement
ಈ ಹಿನ್ನೆಲೆಯಲ್ಲಿ ಎಲ್ಲ ಕೃಷಿ ಭೂಮಿಯನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸುವುದು, ನೀರಿನ ಮೂಲಗಳನ್ನು ಸೃಷ್ಟಿಸುವುದು, ನೀರಿನ ಬಳಕೆ ದಕ್ಷತೆ ಹೆಚ್ಚಿಸುವುದು, ನೀರು ಪೋಲು ಕಡಿಮೆ ಮಾಡುವುದು, ತಂತ್ರಜ್ಞಾನಗಳನ್ನು ಬಳಕೆ ಮಾಡಿ ಸಂರಕ್ಷಣೆ ಮಾಡುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಒಳಗೊಂಡಿದೆ.
– ಕೇಶವ ಕುಂದರ್