ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬೆಂಗಳೂರು ನಗರ ಜಿಲ್ಲೆಗಾಗಿ ಸಂಭವನೀಯ ಸಾಲ ಕ್ರಿಯಾ ಯೋಜನೆ ರೂಪಿಸಿದ್ದು (2019-20 ನೇ ಸಾಲಿಗಾಗಿ) ವಿವಿಧ ಆದ್ಯತಾ ವಲಯಗಳಿಗೆ 50,447 ಕೋಟಿ ರೂ.ಮೀಸಲಿಟ್ಟಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಕೇಂದ್ರ ಸಚಿವ ಸದಾನಂದ ಗೌಡ ಅವರ ಸಮ್ಮುಖದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಬಾರ್ಡ್ ಹಿರಿಯ ಅಧಿಕಾರಿ ಪ್ರಭಾ ಅವರು, ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ಶೇ.55.02ರಷ್ಟು ಹಣ ಮೀಸಲಿಡಲಾಗಿದೆ. ಗೃಹ ನಿರ್ಮಾಣ ಕ್ಷೇತ್ರಕ್ಕೆ ಶೇ.25.21, ಕೃಷಿ ಉತ್ಪಾದನಾ ಕ್ಷೇತ್ರಕ್ಕೆ ಶೇ.14.06, ಶಿಕ್ಷಣ ಕ್ಷೇತ್ರಕ್ಕೆ ಶೇ.2.58, ರಫ್ತು ವಲಯಕ್ಕೆ ಶೇ.2.61, ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಶೇ.0.12 ಹಾಗೂ ನವೀಕರಿಸಬಹುದಾದ ಇಂಧನ ವಲಯಕ್ಕೆ ಶೇ.0.39ರಷ್ಟು ಹಣ ಮೀಸಲಿಡಲಾಗಿದೆ ಎಂದು ವಿವರ ನೀಡಿದರು.
ಅನರ್ಹರನ್ನು ಹೊರಹಾಕಿ: ಕೇಂದ್ರ ಸರ್ಕಾರದ ವಿವಿಧ ಯೋಜನಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಕಾನೂನಿನ ಚೌಕಟ್ಟಿನೊಳಗೆ ಜನತೆಯ ಸೇವೆ ಮಾಡಿ. ಅವರು ತಮ್ಮ ಉಸಿರು ಇರುವವರೆಗೂ ನಿಮ್ಮನ್ನು ನೆನೆಯುತ್ತಾರೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಯೋಜನೆಗೆ ಅನರ್ಹರೂ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಅಂತವರ ಅರ್ಜಿಗಳನ್ನು ತಕ್ಷಣವೇ ಆನ್‌ಲೈನ್‌ನಿಂದ ತೆಗೆದು ಹಾಕಿ, ಅರ್ಹರಿಗೆ ಶೀಘ್ರ ವಸತಿ ಸೌಲಭ್ಯ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗರಂ: ಸಭೆಗೆ ಬಿಬಿಎಂಪಿ ಅಧಿಕಾರಿಗಳು ಹಾಜರಾಗದ ಬಗ್ಗೆ ಅಸಮಾಧಾನಗೊಂಡ ಕೇಂದ್ರ ಸಚಿವರು, ಪಾಲಿಕೆ ಅಧಿಕಾರಿಗಳು ಪದೇ ಪದೆ ಸಭೆಗೆ ಗೈರಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಲೀಡ್ ಬ್ಯಾಂಕ್ ಮುಖ್ಯಸ್ಥ ಮಂಜುನಾಥ್, ಆರ್‌ಬಿಐ ಹಿರಿಯ ಅಧಿಕಾರಿ ನಾಗರಾಜ್, ಬೆಂಗಳೂರು ನಗರ ಜಿಲ್ಲೆಯ ಯೋಜನಾಧಿಕಾರಿ ಹನುಮನರಸಯ್ಯ ಉಪಸ್ಥಿತರಿದ್ದರು.