Advertisement

500 ಕೋಟಿ ಆದಾಯ, 497 ಕೋಟಿ ವ್ಯಯ

12:49 PM May 07, 2017 | Team Udayavani |

ಮೈಸೂರು: ಪ್ರಮುಖ ರಸ್ತೆಗಳ ಅಭಿವೃದ್ಧಿ, ವಸತಿ ಯೋಜನೆ, ನೀರು ಸರಬರಾಜು ಯೋಜನೆ ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನ ಅಭಿವೃದ್ಧಿ ಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ 2017-18ನೇ ಸಾಲಿಗೆ 2.76 ಕೋಟಿ ರೂ.ಗಳ ಉಳಿತಾಯ ಬಜೆಟ್‌ ಮಂಡಿಸಲಾಯಿತು. ಇತ್ತೀಚಿಗೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆಗಳ ಅಗಲೀಕರಣ ಸೇರಿದಂತೆ ಪ್ರಮುಖ ರಸ್ತೆಗಳ ಅಭಿವೃದ್ಧಿಗೊಳಿಸಲು ಮುಡಾ ಉದ್ದೇಶಿಸಿದೆ.

Advertisement

ಮುಡಾ ಆಯುಕ್ತ ಡಾ.ಎಂ. ಮಹೇಶ್‌ ಶನಿವಾರ ಮಂಡಿಸಿದ ಆಯವ್ಯಯದಲ್ಲಿ 2017-18ನೇ ಸಾಲಿನ ಹೊಸ ಯೋಜನೆಗಳಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಆ ಮೂಲಕ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಆದಾಯವನ್ನು ಹಾಗೂ 497.23 ಕೋಟಿ ರೂ. ವೆಚ್ಚವನ್ನು ಭರಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಪ್ರಸ್ತುತ ಸಾಲಿನಲ್ಲಿ 2.76 ಕೋಟಿ ರೂ. ಉಳಿತಾಯ ಬಜೆಟ್‌ ಮಂಡಿಸಿ, ಅನುಮೋದನೆ ಪಡೆದರು.

ರಸ್ತೆ ಅಭಿವೃದ್ಧಿಗೆ ಒತ್ತು: ಈ ಬಾರಿಯ ಮುಡಾ ಬಜೆಟ್‌ ಆಯವ್ಯಯದಲ್ಲಿ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 143.1 ಕೋಟಿ ರೂ. ಕಾಯ್ದಿರಿಸಲಾಗಿದೆ. ಅದರಂತೆ ನಗರದ ಬಲ್ಲಾಳ್‌ ವೃತ್ತದಿಂದ ಮಾನಂದವಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಬೇಡ್ಕರ್‌ ರಸ್ತೆ, ಶ್ರೀರಾಂಪುರ ವಿವೇಕಾನಂದ ನಗರ ವೃತ್ತದಿಂದ ಮಾನಂದವಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣ,

ದಟ್ಟಗಳ್ಳಿ 3ನೇ ಹಂತದ ಜೋಡಿ ಬೇವಿನಮರದಿಂದ ಕೇರ್ಗಳ್ಳಿ ರಸ್ತೆ ಅಭಿವೃದ್ಧಿ, ಸಯ್ನಾಜಿರಾವ್‌ ರಸ್ತೆಯಿಂದ ಪುಲಿಕೇಶಿ ರಸ್ತೆ ಮಾರ್ಗವಾಗಿ ಎಪ್‌ಟಿಎಸ್‌ ವೃತ್ತ ಸೇರುವ ರಸ್ತೆಯನ್ನು ದೇವರಾಜ ಅರಸು ರಸ್ತೆ ಮಾದರಿಯಲ್ಲಿ ವಾಣಿಜ್ಯೀಕರಿಸುವ ಕಾಮಗಾರಿ, ರಿಂಗ್‌ರಸ್ತೆಯಿಂದ ಸ್ವರ್ಣಜಯಂತಿನಗರ ಯೋಜನೆಯ ಮುಖ್ಯರಸ್ತೆ ಅಭಿವೃದ್ಧಿ, ಮೈಸೂರು-ಬನ್ನೂರು ರಸ್ತೆ, ಲಲಿತಾದ್ರಿಪುರ-ತಿ.ನರಸೀಪುರ(ಎನ್‌.ಎಚ್‌-212) ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮುಡಾ ಮುಂದಾಗಿದೆ.

ಹೊಸ ಬಡಾವಣೆಗಳ ನಿರ್ಮಾಣ: ಪ್ರಾಧಿಕಾರ ದಲ್ಲಿ ನಿವೇಶನಾಕಾಂಕ್ಷಿಗಳು ಹೆಚ್ಚಿದ್ದು, ಬೇಡಿಕೆಗೆ ಅನುಸಾರವಾಗಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳ ನಿರ್ಮಾಣ ಅವಶ್ಯಕ. ಈ ಹಿನ್ನೆಲೆಯಲ್ಲಿ 2017-18ನೇ ಸಾಲಿನಲ್ಲಿ ಹಂಚಿಕೆಗೆ ಅನುವಾಗುವಂತೆ ಆರ್‌.ಟಿ.ನಗರ ಹಾಗೂ ಲಲಿತಾದ್ರಿನಗರದಲ್ಲಿ ಸಿವಿಲ್‌ ಹಾಗೂ ವಿದ್ಯುತ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 169.9 ಕೋಟಿ ರೂ. ಕಾಯ್ದಿರಿಸಲಾಗಿದೆ. ವಸತಿ ಯೋಜನೆಯಲ್ಲಿ ನಗರದಲ್ಲಿ ಸ್ವಂತ ಮನೆಯಿಲ್ಲದವರಿಗಾಗಿ ವಿಜಯನಗರ 2ನೇ ಹಂತದ ಬಡಾವಣೆಗಳಲ್ಲಿ ಮುಡ ಜಾಗದಲ್ಲಿ ಕೈಗೆಟುಕುವ ಬೆಲೆಯಲ್ಲಿ ವಸತಿ ಯೋಜನೆ ಅಡಿಯಲ್ಲಿ ವಸತಿ ಗೃಹಗಳನ್ನು 422 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಸಜಾjಗಿದೆ.

Advertisement

ಬಾಲಭವನ ಅಭಿವೃದ್ಧಿ: ನಗರದ ಬನ್ನಿಮಂಟಪ ದಲ್ಲಿರುವ ಬಾಲಭವನದಲ್ಲಿ ಲಘು ಉಪಾಹಾರ ಮಂದಿರ, ಬಯಲು ರಂಗಮಂದಿರ, ಪಾರ್ಟಿ ಹಾಲ್‌, ಮಕ್ಕಳ ಆಟದ ಮೈದಾನ ಶೌಚಾಲಯ, ಕುಡಿಯುವ ನೀರಿನ ಘಟಕ ಮತ್ತು ಉದ್ಯಾನವದ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈ ಸಂಬಂಧ ಪ್ರಾಧಿಕಾರ ಹಾಗೂ ಖಾಸಗಿ ಪ್ರಾಯೋಜಕತ್ವದಲ್ಲಿ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, 2ನೇ ಹಂತದಲ್ಲಿ ಪುಟಾಣಿ ರೈಲು, ಕಿಡ್ಸ್‌ ಪಲೇ ಜೋನ್‌,

ಡಾನ್ಸಿಂಗ್‌  ವಾಟರ್‌ ಗೇಮ್ಸ್‌, ಪ್ಲೇ ಸ್ಟೇಷನ್‌, ಪ್ಲಾನಿಟೋರಿಯಂ, ವೀಡಿಯೋ ಗೇಮ್ಸ್‌, ಸ್ವಿಮಿಂಗ್‌ ಪೂಲ್‌ ಹಾಗೂ ಜಿಮ್‌ ಮತ್ತು ಆರೋಗ್ಯ ಕೇಂದ್ರ ಗಳನ್ನು ನಿರ್ಮಾಣ ಮಾಡಲು 10 ಕೋಟಿ ರೂ. ನಿಗದಿಪಡಿಸಲಾಗಿದೆ.  ಉಳಿದಂತೆ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬಡಾವಣೆ/ಗ್ರಾಮಗಳಲ್ಲಿ ಸರಕಾರಿ ಶಾಲೆಗಳನ್ನು ನಿರ್ಮಾಣ ಮಾಡಲು, ಹಾಲಿ ಇರುವ ಶಾಲೆಗಳಲ್ಲಿನ ದುರಸ್ತಿ ಕಾಮಗಾರಿಗಳನ್ನು ಹಾಗೂ ಇತರೆ ಅಭಿವೃದ್ಧಿ ಕೆಲಸ ಹಾಗೂ ವಾಚನಾಲಯ ನಿರ್ಮಾಣಕ್ಕೆ ಉದ್ದೇಶಿಸಿದ್ದು, 5 ಕೋಟಿ ರೂ. ಕಾಯ್ದಿರಿಸಲಾಗಿದೆ.

ಭೂ ಸ್ವಾಧೀನ ವೆಚ್ಚ: ಪ್ರಾಧಿಕಾರದ ವಿವಿಧ ಬಡಾವಣೆಗಳಿಗೆ ಭೂ ಸ್ವಾಧೀನವಾದ ಗ್ರಾಮಗಳ ಜಮೀನುಗಳಿಗೆ ಭೂ ಪರಿಹಾರದ ಬಾಕಿ ಮೊಬಲಗು ಪಾವತಿಸಲು ಹಾಗೂ ಹೊಸ ಬಡಾವಣೆ, ಉಂಡವಾಡಿ ಕುಡಿಯುವ ನೀರಿನ ಯೋಜನೆ, ಮುಂತಾದ ಯೋಜನೆಗಳಿಗಾಗಿ ಅಗತ್ಯವಿರುವ ಭೂಸ್ವಾಧೀನ ಕುರಿತು 100 ಕೋಟಿ. ರೂ. ಕಾಯ್ದಿರಿಸ ಲಾಗಿದೆ. ಉಳಿದಂತೆ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಪಾರ್ಕ್‌ಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ವ್ಯಾಯಾಮ ಪರಿಕರಗಳನ್ನು ಅಳವಡಿಸಿ ಆ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡಲು ಮುಡಾ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ. 

ಇನ್ನೂ ವಿಜಯನಗರ 3ನೇ ಹಂತದಲ್ಲಿ ಸುಸಜ್ಜಿತ ಕನ್ವೆಂಷನ್‌ ಹಾಲ್‌ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ 5 ಕೋಟಿ ರೂ.ಗಳನ್ನು ಮುಡಾ ಕಾಯ್ದಿರಿಸಲಾಗಿದೆ. ಅಲ್ಲದೆ ಪ್ರಾಧಿಕಾರದ ಬಡಾವಣೆಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಪ್ರಾಧಿಕಾರ ಮುಂದಾಗಿದ್ದು, ಅದರಂತೆ ವಿಜಯನಗರ 4ನೇ ಹಂತ 2ನೇ ಪೇಸ್‌ನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 20 ಕೋಟಿ ರೂ. ಮೀಸಲಿಡಲಾಗಿದೆ.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ. ಧ್ರುವಕುಮಾರ್‌, ಶಾಸಕರಾದ ಎಂ.ಕೆ.ಸೋಮಶೇಖರ್‌, ವಾಸು, ಜಿ.ಟಿ. ದೇವೇಗೌಡ, ವಿಧಾನಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಆರ್‌.ಧರ್ಮಸೇನಾ, ಸಂದೇಶ್‌ ನಾಗರಾಜು, ಪಾಲಿಕೆ ಸದಸ್ಯ ಸಂದೇಶ್‌ಸ್ವಾಮಿ, ಜಿಲ್ಲಾಧಿಕಾರಿ ಡಿ.ರಂದೀಪ್‌ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next