Advertisement

ತ್ವರಿತಗತಿಯಲ್ಲಿ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿಯಾಗಲಿ

12:02 AM Nov 23, 2021 | Team Udayavani |

ರಾಜ್ಯದಲ್ಲಿ ನಿರಂತರ ಮಳೆಯಿಂದ ಸಾವಿರಾರು ಕಿ.ಮೀ. ರಸ್ತೆ ಹಾಗೂ ನೂರಾರು ಸೇತುವೆಗಳಿಗೆ ಹಾನಿಯಾಗಿದ್ದು ಸಂಪರ್ಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಇದರ ಗಂಭೀರತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 500 ಕೋಟಿ ರೂ. ತ‌ತ್‌ಕ್ಷಣ ಬಿಡುಗಡೆಗೆ ಸೂಚನೆ ನೀಡಿರುವುದು ಸ್ವಾಗತಾರ್ಹ.

Advertisement

ರಸ್ತೆ ಹಾನಿ ವರದಿ ಪಡೆದು ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಸಂಚಾರ ಸಂಪರ್ಕ ಕಡಿತಗೊಂಡಿರುವ ಸ್ಥಳಗಳನ್ನು ಆದ್ಯತೆ ಮೇರೆಗೆ ಸರಿಪಡಿಸಬೇಕು ಎಂದು ಸೂಚಿಸಿ ರಸ್ತೆಗಳ ದುರಸ್ತಿ ಹೊಣೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಲೋಕೋಪಯೋಗಿ ಇಲಾಖೆಗೆ ವಹಿಸಿರುವುದು ಒಳ್ಳೆಯ ಬೆಳವಣಿಗೆ.

ರಸ್ತೆಯ ಹಾನಿ ಕುರಿತು ತಾಲೂಕುವಾರು ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದರಿಂದ ತಾಲೂಕು ಮಟ್ಟದ ಮಾಹಿತಿ ಸಂಗ್ರಹವಾಗಿ ರಸ್ತೆಗಳ ಅಭಿವೃದ್ಧಿಗೆ ವೇಗ ಸಿಗಲಿದೆ. ಇದು ತತ್‌ಕ್ಷಣಕ್ಕೆ ಆಗಬೇಕಾದ ಕೆಲಸವೂ ಹೌದು.

ಹಣಕಾಸು ಇಲಾಖೆಯ ನೆರವು ಇಲ್ಲದೆ ಲೋಕೋಪಯೋಗಿ ಇಲಾಖೆ ಅಥವಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ವಂತ ಅನುದಾನದಲ್ಲಿ ಇಷ್ಟೊಂದು ದೊಡ್ಡ ಮೊತ್ತ ವೆಚ್ಚ ಮಾಡಲು ಆಗುತ್ತಿರ ಲಿಲ್ಲ. ಹಣಕಾಸಿನ ಲಭ್ಯತೆ ಇಲ್ಲದಿದ್ದರೆ ತಿಂಗಳಾನುಗಟ್ಟಲೆ ಹಾನಿಗೀಡಾದ ರಸ್ತೆಗಳು ದುರಸ್ತಿಯಾಗದೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆಯ ಮೇಲೆಯೇ ನೇರ ಪರಿಣಾಮ ಬೀರುತ್ತಿತ್ತು.

ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ನಡೆಸಿದ ವೀಡಿಯೋ ಸಂವಾದದಲ್ಲೂ ಪ್ರಮುಖವಾಗಿ ರಸ್ತೆ ಹಾಗೂ ಸೇತುವೆ ಹಾನಿ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಪ್ರಸ್ತಾವವಾಗಿತ್ತು. ಇದರಿಂದಾಗಿ ತುರ್ತು ಸಭೆಯಲ್ಲಿ ಹಣಕಾಸು ಇಲಾಖೆಗೆ ಮುಖ್ಯಮಂತ್ರಿಯವರು 500 ಕೋಟಿ ರೂ. ಬಿಡುಗಡೆಗೆ ಸೂಚನೆ ನೀಡಿದರು.

Advertisement

ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ

ಅದರಲ್ಲೂ ಹಳ್ಳಿಗಾಡಿನಲ್ಲಿ ರಸ್ತೆಗಳ ಸ್ಥಿತಿ ಇನ್ನಷ್ಟು ಬಿಗಡಾ ಯಿಸಿದೆ. ಈಗ ಹಾನಿಗೊಳಗಾದ ರಸ್ತೆ ಮತ್ತು ಸೇತುವೆ ದುರಸ್ತಿ ಮಾಡುವ ಹೊಣೆಗಾರಿಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಲೋಕೋ ಪಯೋಗಿ ಇಲಾಖೆಗಳ ಮೇಲಿದೆ. ಎರಡೂ ಇಲಾಖೆಗಳೂ ಸಮನ್ವ ಯತೆಯಿಂದ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಶೀಘ್ರ ಆರಂಭಿಸಿ ದರೆ ಸಾಕಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಜನಸಾಮಾನ್ಯರ ತೊಂದರೆಯೂ ನೀಗುತ್ತದೆ. ಎರಡೂ ಇಲಾಖೆಗಳ ಸಚಿವರೂ ಸಹ ಕಾಲ ಕಾಲಕ್ಕೆ ರಸ್ತೆ ಮತ್ತು ಸೇತುವೆ ಹಾನಿ ದುರಸ್ತಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕಾರ್ಯ ನಡೆಸಿದರೆ ಕಾಮಗಾರಿಗೆ ಮತ್ತಷ್ಟು ವೇಗ ಸಿಗುತ್ತದೆ.

ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಜಿಲ್ಲಾಡಳಿತದ ಸಹಕಾರದೊಂದಿಗೆ ಮಳೆಯಿಂದ ಉಂಟಾಗಿರುವ ಬೆಳೆ ನಷ್ಟ ಕುರಿತು ಆದಷ್ಟು ಬೇಗ ಸಮೀಕ್ಷೆ ನಡೆಸಿ ವರದಿ ನೀಡಿದರೆ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಅನುಕೂಲವಾಗುತ್ತದೆ. ಬೆಳೆ ಪರಿಹಾರ ಹಾಗೂ ವಿಮೆ ಪರಿಹಾರ ರೈತರಿಗೆ ಸಕಾಲದಲ್ಲಿ ಸಿಗುವಂತೆ ಮಾಡ ಬೇಕಾಗಿದೆ. ಮನೆ ಕುಸಿತ ಹಾಗೂ ಪ್ರಾಣ ಹಾನಿ ಪ್ರಕರಣಗಳಲ್ಲಿ ತಾಂತ್ರಿಕ ಕಾರಣ, ನಿಯಮಾವಳಿಗಳ ನೆಪ ಹೇಳಿ ಪರಿಹಾರ ವಿಳಂಬ ಮಾಡಬಾರದು. ಇದು ತುರ್ತು ಕೆಲಸ ಎಂದು ಪರಿಗಣಿಸಿ ಪರಿಹಾರ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next