ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಕ್ರೀಡೆಯಲ್ಲೇ ಬೃಹತ್ ಜಾಹೀರಾತು ಒಪ್ಪಂದಗಳಲ್ಲೊಂದಕ್ಕೆ ಭಾರತದ ಪಿ.ವಿ.ಸಿಂಧು ಸಹಿ ಹಾಕಿದ್ದಾರೆ. ಚೀನಾದ ಲಿ ನಿಂಗ್ ಕ್ರೀಡೋತ್ಪನ್ನ ಕಂಪನಿ ಜೊತೆಗೆ 4 ವರ್ಷಗಳ ಅವಧಿಗೆ 50 ಕೋಟಿ ರೂ. ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು 2017ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪುಮಾ ಜೊತೆಗೆ ಮಾಡಿಕೊಂಡ 100 ಕೋಟಿ ರೂ. ಒಪ್ಪಂದಕ್ಕೆ ಸರಿಸಮನಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕೊಹ್ಲಿ 8 ವರ್ಷಗಳ ಅವಧಿಗೆ 100 ಕೋಟಿ ರೂ. ಪಡೆಯಲಿದ್ದರೆ, ಸಿಂಧು 4 ವರ್ಷಗಳಲ್ಲಿ 50 ಕೋಟಿ ರೂ. ಗಳಿಸಲಿದ್ದಾರೆ. 40 ಕೋಟಿ ರೂ.ಗಳನ್ನು ಸಿಂಧು ನಗದು ರೂಪದಲ್ಲಿ ಪಡೆಯಲಿದ್ದರೆ, ಇನ್ನುಳಿದ ಮೊತ್ತವನ್ನು ಕ್ರೀಡೋಪಕರಣಗಳ ರೂಪದಲ್ಲಿ ಪಡೆಯಲಿದ್ದಾರೆ. 2016ರಲ್ಲಿ ಒಲಿಂಪಿಕ್ಸ್ ಬೆಳ್ಳಿ ಗೆದ್ದ ಬಳಿಕ, ಸಿಂಧು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ವಿಶ್ವದ ಜನಪ್ರಿಯ ತಾರೆಯಾದರು. ಅವರೀಗ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದಲ್ಲೇ 7ನೇ ಶ್ರೀಮಂತ ಆಟಗಾರ್ತಿ ಎನಿಸಿಕೊಂಡಿದ್ದಾರೆ.