Advertisement

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ 5 ಕೋಟಿ ರೂ. ವಿಶೇಷ ಅನುದಾನ

11:33 AM Aug 01, 2017 | Team Udayavani |

ಬೆಂಗಳೂರು: ರಾಜಧಾನಿಯ ಯಶವಂತಪುರ, ಗೋವಿಂದರಾಜನಗರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಐದು ಕೋಟಿ ರೂ. ವಿಶೇಷ ಅನುದಾನ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಭರವಸೆ ನೀಡಿದರು.

Advertisement

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಬಿಬಿಎಂಪಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಲು ಕಾಸಿಯಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, “ಈಗಾಗಲೇ ಕೈಗಾರಿಕಾ ಪ್ರದೇಶಗಳ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮೇಯರ್‌ ಹಾಗೂ ಸ್ಥಳೀಯ ಶಾಸಕರು ಕಾಸಿಯಾ ಪ್ರತಿನಿಧಿಗಳೊಂದಿಗೆ ಪರಿಶೀಲಿಸಿ ಅಭಿವೃದ್ಧಿಪಡಿಸಬೇಕಿರುವ ರಸ್ತೆಗಳನ್ನು ಪಟ್ಟಿ ಮಾಡಿ, ಅಂದಾಜು ಪಟ್ಟಿ ಸಲ್ಲಿಸಬೇಕು. ಈ ಪ್ರದೇಶದಲ್ಲಿನ ರೆವಿನ್ಯೂ ಬಡಾವಣೆಗಳ ರಸ್ತೆ ದುರಸ್ತಿಪಡಿಸಬಹುದೇ ಎಂಬ ಬಗ್ಗೆ ಚರ್ಚಿಸಬೇಕು. ನಂತರ ಸಭೆ ನಡೆಸಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಮುಖ್ಯಮಂತ್ರಿಗಳು ನಗರೋತ್ಥಾನದಡಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ನೀಡಿದ್ದಾರೆ. ಸಣ್ಣ ಕೈಗಾರಿಕೆಗಳ ಅನುಕೂಲಕ್ಕಾಗಿ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಬಳಿಕ ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಮೇಯರ್‌ ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಪರಿಶೀಲನೆ ನಡೆಸಿ ಒಂದೇ ವಾರದಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಲಿ ಸಲ್ಲಿಸಲಾಗುವುದು ಎಂದು ಹೇಳಿದರು. ಕಾಸಿಯಾ ಅಧ್ಯಕ್ಷ ಆರ್‌.ಹನುಮಂತೇಗೌಡ ಇತರರು ಉಪಸ್ಥಿತರಿದ್ದರು.

Advertisement

ಸಂವಾದದಲ್ಲಿ ಕೇಳಿಬಂದ ಪ್ರಶ್ನೆಗಳು
ಉದ್ಯಮಿ ರವಿಕಿರಣ್‌, “ಪೀಣ್ಯ 2ನೇ ಹಂತದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಉದ್ಯಮಿಗಳನ್ನು ಕರೆತರಲು ಮುಜುಗರವಾಗುತ್ತದೆ. ರಸ್ತೆಗಳಲ್ಲಿ ಕಸದ ರಾಶಿಯಿದ್ದು, ಹಂದಿ ಕಾಟವೂ ತೀವ್ರವಾಗಿದೆ’ ಎಂದು ತಿಳಿಸಿದರು. ಯಲಹಂಕದ ಮಾಚೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಚ್ಚಾರಸ್ತೆಯಿಂದ ಕಂಟೈನರ್‌ಗಳು ಉರುಳಿಬಿದ್ದ ಘಟನೆಗಳು ಸಂಭವಿಸಿವೆ. ಬೀದಿದೀಪ ಅಳವಡಿಕೆ ಜತೆಗೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಉದ್ಯಮಿಯೊಬ್ಬರು ಮನವಿ ಮಾಡಿದರು.

ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮನವಿ
ಉದ್ಯಮಿ ನಾಗರಾಜ್‌, ಕಾರ್ಖಾನೆಗಳಲ್ಲಿ ಶೇ.80ರಷ್ಟು ತ್ಯಾಜ್ಯ, ಬಿಡಿ ಭಾಗ, ಅಗತ್ಯವಿಲ್ಲದ ವಸ್ತುಗಳು ಇತರೆ ಸಣ್ಣ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳಾಗಿ ಬಳಕೆಯಾಗುತ್ತವೆ. ಕೈಗಾರಿಕಾ ಒಕ್ಕೂಟಗಳ ನೇತೃತ್ವದಲ್ಲಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಿ ಸಂಗ್ರಹವಾಗುವ ತ್ಯಾಜ್ಯವನ್ನು ಬೇರೆಗೆ ಕಾರ್ಖಾನೆಗಳು ಖರೀದಿಸುವ ವ್ಯವಸ್ಥೆ ರೂಪಿಸುವ ಬಗ್ಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್‌.ಟಿ.ಸೋಮಶೇಖರ್‌, “ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣ ಸಂಬಂಧ ಪಾಲಿಕೆ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next