Advertisement

45ಲಕ್ಷ ರೂ. ಅಕ್ರಮ ಹಣ ವಶ

12:16 AM Apr 03, 2019 | Team Udayavani |

ಬೆಂಗಳೂರು: ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿದ್ದ 45 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿರುವ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮಹಾಲಕ್ಷ್ಮೀ ಲೇಔಟ್‌ನ ಜಿ.ಡಿ ನಾಯ್ಡು ರಸ್ತೆಯಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಎಚ್ಚೆತ್ತ ಇನ್ಸ್‌ಪೆಕ್ಟರ್‌ ಎಂ. ಪ್ರಶಾಂತ್‌, ಕೂಡಲೇ ಫೈಯಿಂಗ್‌ ಸ್ಕ್ವಾಡ್‌ಗೆ ಮಾಹಿತಿ ರವಾನಿಸಿದ್ದಾರೆ.

ಬಳಿಕ ಜಂಟಿ ಕಾರ್ಯಾಚರಣೆ ನಡೆಸಿ 11 ಗಂಟೆ ಸುಮಾರಿಗೆ ಆಗಮಿಸಿದ ಡಿಯೋಬೈಕ್‌ ಪರಿಶೀಲಿಸಿದ್ದು ಅದರಲ್ಲಿದ್ದ ಕಪ್ಪು ಬ್ಯಾಗ್‌ನಲ್ಲಿ 45 ಲಕ್ಷ ರೂ. ಕಂಡು ಬಂದಿದೆ.

ಬೈಕ್‌ ಚಲಾಯಿಸುತ್ತಿದ್ದ ರಾಹುಲ್‌ನನ್ನು ವಿಚಾರಣೆ ನಡೆಸಿದಾಗ ಹಣದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಲಿಲ್ಲ, ಹೀಗಾಗಿ ರಾಹುಲ್‌ ವಿರುದ್ಧ ಪ್ರಕರಣ ದಾಖಲಿಸಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಚಿನ್ನ ಖರೀದಿ ನೆಪ: ಹಣ ತಮ್ಮದಲ್ಲ ಎಂದು ಹೇಳಿರುವ ರಾಹುಲ್‌, ಚಿಕ್ಕಪೇಟೆಯಲ್ಲಿ ಜ್ಯುವೆಲರಿ ಶಾಪ್‌ ನಡೆಸುವ ಸಚಿನ್‌ ಅವರ ಸೂಚನೆ ಮೇರೆಗೆ ಸುನೀಲ್‌ ಎಂಬುವವರ ಬಳಿ 45 ಲಕ್ಷ ರೂ. ಪಡೆದು ಹೋಗುತ್ತಿದೆ.

Advertisement

ಸಚಿನ್‌, ಅಕ್ಷಯ ತೃತೀಯ ಆಗಿದ್ದರಿಂದ ಚಿನ್ನ ಖರೀದಿಸಲು ಹಣದ ಅಗತ್ಯವಿದೆ. ಹೀಗಾಗಿ, ಸ್ನೇಹಿತ ಸುನೀಲ್‌ ಸಾಲ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಹೇಳಿದ್ದರು. ಅವರ ಸೂಚನೆಯಂತೆ ಹಣ ಕೊಂಡೊಯ್ಯುತ್ತಿದ್ದೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ಫ್ಲೈಯಿಂಗ್‌ ಸ್ಕ್ವಾಡ್‌ ಎಂಜಿನಿಯರ್‌ ಹನುಮಂತ ಬಗಲಿ ನೀಡಿರುವ ದೂರಿನ ಅನ್ವಯ ಆರೋಪಿ ರಾಹುಲ್‌ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಉದ್ದೇಶಕ್ಕೆ ಹಣ ಬಳಕೆ ಮಾಡುವ ಸಾಧ್ಯತೆ ಆರೋಪ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಐಟಿ ಇಲಾಖೆ ಪ್ರಕರಣ ವರ್ಗಾವಣೆ: ಅನಧಿಕೃತ ಹಣ ಸಾಗಾಟ ಪ್ರಕರಣ ಇದಾಗಿರುವುದರಿಂದ ಆದಾಯ ತೆರಿಗೆ ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿದೆ. ಐಟಿ ಅಧಿಕಾರಿಗಳು, ಹಣದ ಕುರಿತಾಗಿ ಆರೋಪಿತರನ್ನು ವಿಚಾರಣೆಗೊಳಪಡಿಸಿ ತನಿಖೆ ನಡೆಸುತ್ತಾರೆ ಎಂದು ಅಧಿಕಾರಿಗಳು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next