ಹೊಸದಿಲ್ಲಿ: ದೇಶದಲ್ಲಿಯೇ ರಕ್ಷಣ ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತೂಂದು ಮಹತ್ವದ ನಿರ್ಧಾರ ಕೈಗೊಂಡಿದೆ. 4,276 ಕೋಟಿ ರೂ. ಮೌಲ್ಯದ ವಿವಿಧ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವ ಪ್ರಸ್ತಾವಕ್ಕೆ ಮಂಗಳವಾರ ರಕ್ಷಣ ಖರೀದಿ ಮಂಡಳಿ (ಡಿಎಸಿ) ಸಮ್ಮತಿ ಸೂಚಿಸಿದೆ. ಇದರಿಂದಾಗಿ ವಿಶೇಷವಾಗಿ ಚೀನಕ್ಕೆ ಹೊಂದಿಕೊಂಡು ಇರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ವ್ಯಾಪ್ತಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ನೆರವಾಗಲಿದೆ.
ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭೂಸೇನೆಗೆ ಸಂಬಂಧಿಸಿದ ಎರಡು, ಭಾರತೀಯ ನೌಕಾಪಡೆಯ ಒಂದು ಪ್ರಸ್ತಾವಗಳಿಗೆ ಅನುಮೋದನೆ ಸಿಕ್ಕಿದೆ.
ಯಾವುದೆಲ್ಲ ಖರೀದಿ?: ಕೇಂದ್ರ ರಕ್ಷಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಹೆಲಿನಾ ಎಂಬ ಟ್ಯಾಂಕ್ ಅನ್ನು ಧ್ವಂಸ ಮಾಡುವ ಕ್ಷಿಪಣಿಗಳು, ಲಾಂಚರ್‌ಗಳು, ಸುಧಾರಿತ ಹಗುರ ಹೆಲಿಕಾಪ್ಟರ್‌ಗಳಿಗೆ ಬೇಕಾಗುವ ವಸ್ತುಗಳು ಸೇರ್ಪಡೆಯಾಗಿವೆ. ಇದರ ಜತೆಗೆ ಯುದ್ಧ ಭೂಮಿಯಲ್ಲಿ ಯೋಧರು ಸುಲಭವಾಗಿ ಒಂದು ಸ್ಥಳದಿಂದ ಮತ್ತೂಂದೆಡೆಗೆ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುವ ವಿಸೋರ್ಡ್ ((VSHORAD) ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.
ಭಾರತೀಯ ನೌಕಾಪಡೆಗೆ ಅನುಕೂಲ ವಾಗುವಂತೆ ಶಿವಾಲಿಕ್ ಸರಣಿಯ ನೌಕೆಗಳಿಗೆ ಬ್ರಹ್ಮೋಸ್ ಲಾಂಚರ್ ಮತ್ತು ಫೈರ್ ಕಂಟ್ರೋಲ್ ವ್ಯವಸ್ಥೆ, ಮತ್ತೂಂದು ಸುಧಾರಿತ ಆವೃತ್ತಿಯ ಯುದ್ಧ ನೌಕೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.