ಶಿಡ್ಲಘಟ್ಟ: ನಗರಸಭೆ ವ್ಯಾಪ್ತಿಯಲ್ಲಿರುವ ಆಶ್ರಯ ಬಡಾವಣೆ ಸಹಿತ ಇನ್ನಿತರೆ ವಾರ್ಡ್‌ಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲು ನಗರೋತ್ಥಾನ ಯೋಜನೆಯಡಿ 4 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ 1.55 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರದ ಮಾದರಿಯಲ್ಲಿ ರೇಷ್ಮೆ ನಗರ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ ನಗರೋತ್ಥಾನ ಯೋಜನೆಯಡಿ ನಗರದ ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.
ಇದ್ಲೂಡು-ಪಲೀಚೇರ್ಲು ರಸ್ತೆ ಅಭಿವೃದ್ಧಿ: ಶಿಡ್ಲಘಟ್ಟ ನಗರ ಸೇರಿದಂತೆ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಒತ್ತು ನೀಡಲಾಗಿದೆ. ಇದ್ಲೂಡು-ಪಲೀಚೇರ್ಲು ಗ್ರಾಮದ ರಸ್ತೆಯನ್ನು 1.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವಸತಿಹೀನರನ್ನು ಗುರುತಿಸಿ 500 ಮಂದಿ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ಅಧಿಕಾರಿಗಳೊಂದಿಗೆ ಸಮಾಲೋಚನೆ: ನಗರದ ಎಲ್ಲಾ ವಾರ್ಡ್‌ಗಳಲ್ಲಿರುವ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆ ಹಾಗೂ ನಗರ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಗೊಳಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಶ್ರಯ ಸಮಿತಿ ಲೋಕೋಪಯೋಗಿ ಇಲಾಖೆಯ ಎಇಇ ವಿನೋದ್, ಜೆ.ಇ ರಾಜಶೇಖರ್, ನಗರಸಭೆ ಸದಸ್ಯ ರಿಯಾಝ್ ಪಾಷ, ಕೃಷ್ಣಮೂರ್ತಿ, ಝಬೀಉಲ್ಲಾ, ಅನೀಲ್ ಕುಮಾರ್, ಶ್ರೀನಿವಾಸ್, ಮನೋಹರ್, ಮಾಜಿ ಸದಸ್ಯ ಅಬ್ದುಲ್ ಗಫೂರ್, ಮುಖಂಡರಾದ ಹನುಮಂತಪುರ ವೆಂಕಟೇಶ್, ಮಹಬೂಬ್ ಪಾಷ, ರವಿ, ಗುತ್ತಿಗೆದಾರ ಸೊಣ್ಣೇಗೌಡ ಉಪಸ್ಥಿತರಿದ್ದರು.