ಭಾಗಲ್ಪುರ : 389.31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಘಟೇಶ್ವರ ಪಂಥ್ ಕಾಲುವೆ ಯೋಜನೆಯ ಅಣೆಕಟ್ಟಿನ ಪ್ರಮುಖ ಭಾಗ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಉದ್ಘಾಟನೆಗಳ್ಳಲು 24 ತಾಸು ಇರುವಂತೆಯೇ, ಒಡೆದು ಹೋಗಿದೆ.
“ಅಣೆಕಟ್ಟು ಸಂಗ್ರಹದ ಪೂರ್ಣ ಪ್ರಮಾಣಕ್ಕೆ ನೀರನ್ನು ಬಿಡುಗಡೆ ಮಾಡಿದ ಪರಿಣಾಮವಾಗಿ ಅಣೆಕಟ್ಟಿನ ಪ್ರಮುಖ ಭಾಗ ಒಡೆದು ಹೋಗಿದೆ. ಹಾಗಿದ್ದರೂ ಅಣೆ ಕಟ್ಟಿನ ಹೊಸದಾಗಿ ನಿರ್ಮಾಣಗೊಂಡಿರುವ ಭಾಗಕ್ಕೆ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಲಲ್ಲನ್ ಸಿಂಗ್ ಅವರು ಆಡಳಿತೆಯನ್ನು ಸಮರ್ಥಿಸಿಕೊಂಡು ಹೇಳಿದ್ದಾರೆ.
ವರದಿಗಳ ಪ್ರಕಾರ ಸರಕಾರ ಭಾಗಲುಪುರದ ಕಹಲ್‌ಗಾಂವ್ ನಲ್ಲಿ ನೀರಾವರಿ ಯೋಜನೆಯಡಿ 389.31 ಕೋಟಿ ರೂ.ಗಳನ್ನು ಈ ಅಣೆಕಟ್ಟಿಗೆ ಮತ್ತು ಬಟೇಶ್ವರಸ್ಥಾನ ಗಂಗಾ ಪಂಪ್ ಕಾಲುವೆ ಯೋಜನೆಗೆ ವ್ಯಯಿಸಿದೆ.
ಕಾಲುವೆಯಲ್ಲಿ ನೀರು ಹರಿಸಲು ಮತ್ತು ಅದನ್ನು ರೈತರಿಗೆ ತಲುಪಿಸಲು ಈ ಅಣೆಕಟ್ಟನ್ನು ಕಟ್ಟಲಾಗಿತ್ತು. ಅಣೆಕಟ್ಟಿನ ಮುಖ್ಯ ಭಾಗ ಒಡೆದು ಹೋಗಿರುವ ಪರಿಣಾಮ ಕೆಳ ಮಟ್ಟದಲ್ಲಿನ ಅನೇಕ ಮನೆಗಳಿಗೆ ನೀರು ನುಗ್ಗಿದೆ. ದುರಂತ ಘಟಿಸಿದ ಬಳಿಕ ಅಧಿಕಾರಿಗಳು ಕ್ಲಪ್ತವಾಗಿ ಸ್ಥಳಕ್ಕೆ ತಲುಪಿದ್ದಾರೆ.
ಈ ಅಣೆಕಟ್ಟು ಯೋಜನೆಯಿಂದ ಭಾಗಲ್ಪುರದ 18,620 ಹೆಕ್ಟೇರ್ ಪ್ರದೇಶಗಳಿಗೆ ಮತುತ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ 22,658 ಹೆಕ್ಟೇರ್‌ಗಳಿಗೆ ನೀರುಣಿಸಲು ಸಾಧ್ಯವಿತ್ತು.
ಈ ಆಣೆಕಟ್ಟು ನಿರ್ಮಾಣದ ಆರಂಭದ ಯೋಜನಾ ವೆಚ್ಚ 13.88 ಕೋಟಿ ರೂ.ಗಳಾಗಿದ್ದವು. 1977ರ ಜನವರಿಯಲ್ಲಿ ಯೋಜನಾ ಆಯೋಗವು ಈ ಯೋಜನೆಗೆ ಅನುಮತಿ ನೀಡಿತ್ತು.