ನವದೆಹಲಿ: ಕೋವಿಡ್ ವಿರುದ್ಧದ ಹೋರಾಟಕ್ಕೆಂದು ಪ್ರಾರ್ಂಭಿಸಲಾಗಿದ್ದ ಪಿಎಂ-ಕೇರ್ಸ್ ನಿಧಿಯಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ 3,100 ಕೋಟಿ ರೂ. ಮೊತ್ತವನ್ನು ವೆಂಟಿಲೇಟರ್‌ಗಳು, ವಲಸಿಗರ ಕಲ್ಯಾಣಕ್ಕೆ ಬಳಸಿಕೊಳ್ಳುವುದಾಗಿ ಪ್ರಧಾನಿ ಕಾರ್ಯಾಲಯ ಬುಧವಾರ ಘೋಷಿಸಿದೆ.
3,100 ಕೋಟಿ ರೂ.ಗಳ ಪೈಕಿ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ವೆಂಟಿಲೇಟರ್‌ಗಳ ಖರೀದಿಗೆಂದು ಮೀಸಲಿಡಲಾಗಿದೆ.
ಒಂದು ಸಾವಿರ ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಹಾಗೂ 100 ಕೋಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಪಡಿಸಲೆಂದು ಬಳಸಲಾಗುವುದು ಎಂದು ಪ್ರಧಾನ ಮಂತ್ರಿ ಕಛೇರಿ ಮೂಲಗಳು ತಿಳಿಸಿವೆ.
ಭಾರತದಲ್ಲೇ ತಯಾರಾಗಿರುವ 50 ಸಾವಿರ ವೆಂಟಿಲೇಟರ್ ಗಳ ಖರೀದಿ ವೆಚ್ಚವನ್ನು ಈ ನಿಧಿಯ ಮೂಲಕವೇ ಪಾವತಿ ಮಾಡಲಾಗುವುದು ಮತ್ತು ಈ ವೆಂಟಿಲೇಟರ್ ಗಳು ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಸರಕಾರಗಳು ನಡೆಸುತ್ತಿರುವ ಕೋವಿಡ್ 19 ಆಸ್ಪತ್ರೆಗಳಿಗೆ ಪೂರೈಸಲಾಗುವುದು.
ಇನ್ನು ವಲಸೆ ಕಾರ್ಮಿಕರ ಸಹಾಯಕ್ಕಾಗಿ ಬಿಡುಗಡೆ ಮಾಡಲಾಗಿರುವ 1000 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯ ಸರಕಾರಗಳಿಗೆ ಹಂಚಿಕೆ ಮಾಡಲಾಗುವುದು ಮತ್ತು ಜಿಲ್ಲಾಧಿಕಾರಿಗಳು ಅಥವಾ ಮುನ್ಸಿಪಲ್ ಕಮಿಷನರ್ ಗಳ ಮೂಲಕ ವಲಸೆ ಕಾರ್ಮಿಕರಿಗೆ ಆಹಾರ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶಕ್ಕಾಗಿ ವಿನಿಯೋಗಿಸಲಾಗುವುದು.
ಮಾ.27ರಂದು ರಚನೆಯಾದ ಪ್ರಧಾನ ಮಂತ್ರಿ ಕೇರ್ಸ್ ನಿಧಿಯನ್ನು ಟ್ರಸ್ಟ್ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇದರ ಅಧ್ಯಕ್ಷರಾಗಿದ್ದು ಅವರ ಸಂಪುಟದ ಹಿರಿಯ ಸಚಿವರು ಈ ಟ್ರಸ್ಟಿನ ಸದಸ್ಯರಾಗಿದ್ದಾರೆ.