Advertisement

ಪೌರಾಡಳಿತ ಸಂಸ್ಥೆ ಅಭಿವೃದ್ಧಿಗೆ 3,000 ಕೋ. ರೂ. ಮೀಸಲು

06:30 AM Mar 10, 2018 | |

ಕಾಪು: ರಾಜ್ಯದ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳೂ ಸೇರಿದಂತೆ 270 ಪೌರಾಡಳಿತ ಸಂಸ್ಥೆಗಳ ಅಭಿವೃದ್ಧಿಗಾಗಿ ಹಾಲಿ ಬಜೆಟ್‌ನಲ್ಲಿ ರಾಜ್ಯ ಸರಕಾರ 3 ಸಾವಿರ ಕೋ. ರೂ. ಅನುದಾನ ಮೀಸಲಿರಿಸಿದೆ ಎಂದು ರಾಜ್ಯ ಪೌರಾಡಳಿತ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

Advertisement

ಶುಕ್ರವಾರ ಕಾಪು ಪುರಸಭಾ ವ್ಯಾಪ್ತಿಯ ನಗರೋತ್ಥಾನ ಅನುದಾನದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದ ಬಳಿಕ ಕಾಪು ವೀರಭದ್ರ ದೇಗುಲದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಮತ್ತು ಸವಲತ್ತು ವಿತರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಪು ಮಾದರಿಯಲ್ಲಿ  ಬೀದರ್‌ ಅಭಿವೃದ್ಧಿಗೆ ಚಿಂತನೆ ಕೇವಲ ಎರಡು ವರ್ಷಗಳ  ಹಿಂದೆ ಪ್ರಾರಂಭಗೊಂಡ ಕಾಪು ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿ ರಾಜ್ಯಕ್ಕೆ ಮಾದರಿಯಾಗಿದೆ. ನನ್ನ ಕ್ಷೇತ್ರ ಬೀದರ್‌ನಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುವುದು ಎಂದರು.

ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಘೋಷಿಸಲು ಚಿಂತನೆ
ನಗರಗಳು ಯೋಜನಾಬದ್ಧವಾಗಿ ಬೆಳೆಯಬೇಕಾದರೆ ಕಸ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ ಸಮಸ್ಯೆಗಳಿಗೆ ಪರಿಹಾರ ಅತಿ ಅಗತ್ಯ. ಮುಂದಿನ ಅಕ್ಟೋಬರ್‌ ಒಳಗೆ ರಾಜ್ಯವನ್ನು ಬಹಿರ್ದೆಸೆ ಮುಕ್ತ ರಾಜ್ಯ ವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಠಾನಿಸ ಲಾಗುತ್ತಿದೆ ಎಂದರು.

ಕಾಪು ನಂ. 1 ಪುರಸಭೆ: ಸೊರಕೆ
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕಾಪು ಕ್ಷೇತ್ರದ ಎಲ್ಲ ಪಟ್ಟಣ ಮತ್ತು ಗ್ರಾಮಗಳಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಿರಂತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಸ್ವತ್ಛತೆಯಲ್ಲಿ ಕಾಪು ಪುರಸಭೆ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮತ್ತು ಸ್ವತ್ಛತೆ ಎರಡರಲ್ಲೂ ಕಾಪು ಪುರಸಭೆಯನ್ನು ರಾಜ್ಯಕ್ಕೆ ನಂ.1 ಪುರಸಭೆಯನ್ನಾಗಿ ಪರಿವರ್ತಿಸಲಾಗುವುದು ಎಂದರು.

ಕಾಮಗಾರಿಗೆ ಚಾಲನೆ: ನಗರೋತ್ಥಾನ ಯೋಜನೆಯಡಿ 8.30 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ, 57 ಕೋ. ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ, ಫ್ಲ್ಯಾಟ್‌ ಸಿಸ್ಟಮ್‌ ಮಾದರಿಯ 500 ಮನೆ ನಿರ್ಮಾಣ ಸಹಿತ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಇದೇ ಸಂದರ್ಭ ಕಾಪು ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ, ಯುವಜನ ಸೇವಾ ಕ್ರೀಡಾ ಇಲಾಖೆ ವತಿಯಿಂದ ವಿವಿಧ ಸಂಘ ಸಂಸ್ಥೆಗೆ ಕ್ರೀಡಾ ಕಿಟ್‌ ಸಹಿತ ವಿವಿಧ ಇಲಾಖಾ ಸೌಲಭ್ಯಗಳನ್ನು ವಿತರಿಸಲಾಯಿತು.

Advertisement

ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ, ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ಜಿ.ಪಂ. ಸದಸ್ಯ ವಿಲ್ಸನ್‌ ರೊಡ್ರಿಗಸ್‌, ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್‌ ಜತ್ತನ್ನ, ಗ್ರಾ.ಪಂ. ಅಧ್ಯಕ್ಷರಾದ ಡಾ| ದೇವಿಪ್ರಸಾದ್‌ ಶೆಟ್ಟಿ, ಡೇವಿಡ್‌ ಡಿ’ಸೋಜಾ, ಜಿತೇಂದ್ರ ಫುರ್ಟಾಡೋ, ದಮಯಂತಿ ಅಮೀನ್‌, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿ, ರಾಯಪ್ಪ ವಂದಿಸಿದರು. ಕುದಿ ವಸಂತ ಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next