ಚಿಕ್ಕೋಡಿ: ಅಂಗನವಾಡಿ ಕೋವಿಡ್ 19 ವಾರಿಯರ್ಸ್ ಜೀವಹಾನಿಯಾದರೇ 30 ಲಕ್ಷ ರೂ. ಪರಿಹಾರ ನೀಡುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಕೋವಿಡ್ 19 ವೈರಸ್ ಬಗ್ಗೆ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಕೋವಿಡ್ 19 ಸೋಂಕು ತಗಲು ಜೀವಹಾನಿಯಾದರೆ ಅಂಥವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು. ದೇಶದ ಆಶಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಘೋಷಿಸಿದ್ದರು. ಆಶಾ ಕಾರ್ಯಕರ್ತರ ಸರಿಸಮನಾಗಿ ಅಂಗನವಾಡಿ ಕಾರ್ಯಕರ್ತರು ಕೋವಿಡ್ 19 ನಿಯಂತ್ರಿಸಲು ಕೆಲಸ ಮಾಡುತ್ತಿದ್ದು, ನಮಗೂ ಪರಿಹಾರ ಘೋಷಿಸಬೇಕೆಂದು ಅಂಗನವಾಡಿ ಕಾರ್ಯಕರ್ತರು ನನ್ನ ಬಳಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿ ನಾನು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಾಗ ತಕ್ಷಣ ಸಿಎಂ 30 ಲಕ್ಷ ರೂ. ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು