ಬೆಂಗಳೂರು: ಪ್ರತಿಷ್ಠಿತ ಕಂಪನಿಗಳಿಗೆ ಕಾರುಗಳನ್ನು ಬಾಡಿಗೆ ಆಧಾರದಲ್ಲಿ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ದಿನೇಶ್ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ.
ಆರೋಪಿ ದಿನೇಶ್‌ನಿಂದ ವಂಚನೆಗೊಳಗಾದವರು ಬಸವನಗುಡಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದು, ತಮಗಾದ ವಂಚನೆಯನ್ನು ವಿವರಿಸುತ್ತಿದ್ದಾರೆ. ಆರೋಪಿ ನಗರದ ವಿವಿಧ ಭಾಗಗಗಳಲ್ಲಿ 40ಕ್ಕೂ ಅಧಿಕ ಮಂದಿಯಿಂದ ಮೂರು ಕೋಟಿ ರೂ.ಗಳಿಗೆ ಹೆಚ್ಚು ಹಣ ಪಡೆದು ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿ3 ಲಾಜಿಸ್ಟಿಕ್ ಟ್ರಾನ್ಸ್‌ಪೂರ್ಟ್ ಅಂಡ್ ಲಾಜಿಸ್ಟಿಕ್ ಕಂಪನಿ ನಡೆಸುತ್ತಿದ ಆರೋಪಿ ದಿನೇಶ್, ಖಾಸಗಿ ಕಂಪನಿಗಳಿಗೆ ಕಾರುಗಳನ್ನು ಬಾಡಿಗೆಗೆ ನೀಡಿ ತಿಂಗಳಿಗೆ 15 ಸಾವಿರಕ್ಕೂ ಅಧಿಕ ಬಾಡಿಗೆ ಹಣ ಕೊಡಿಸುತ್ತೇನೆ. ಆದರೆ, ಆರಂಭಿಕವಾಗಿ 2.5 ಲಕ್ಷ ರೂ ಪಾವತಿಸಬೇಕು ಎಂದು ಹಣ ಕಟ್ಟಿಸಿಕೊಳ್ಳುತ್ತಿದ್ದ. ಬಳಿಕ ಆರಂಭದಲ್ಲಿ ಹಣ ನೀಡಿ ಪುನ: ವಂಚನೆ ಮಾಡುತ್ತಿದ್ದ. ಇದೇ ಮಾದರಿಯಲ್ಲಿ ದಿನೇಶ್ 50 ಲಕ್ಷ ರೂ.ವಂಚಿಸಿದ್ದು,
ಹಣ ವಾಪಾಸ್ ಕೇಳಿದ್ದಕ್ಕೆ ಜೀವಬೆದರಿಕೆ ಒಡ್ಡಿದ್ದಾನೆ ಎಂಬ ಆರೋಪ ಸಂಬಂಧ ದಾಖಲಾದ ದೂರಿನ ಅನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಕೆಂಚೇಗೌಡ ನೇತೃತ್ವದ ತಂಡ, ಮೂರುವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಿನೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಇನ್ನೂ ಹಲವರಿಗೆ ವಂಚನೆ ಎಸಗಿರುವುದು ಕಂಡುಬಂದಿದೆ.
ಆರೋಪಿ ದಿನೇಶ್ ವಿರುದ್ಧ ತನಿಖೆ ಮುಂದುವರಿದಿದೆ. ಆತ ಇನ್ನೂ ಹಲವರಿಗೆ ವಂಚಿಸಿರುವುದು ಗೊತ್ತಾಗಿದ್ದು, ವಂಚನೆಗೊಳಗಾಗಿರುವವರು ಬಸವನಗುಡಿ ಪೊಲೀಸರಿಗೆ ದೂರು ನೀಡಬಹುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.