ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂ. ಅವ್ಯವಹಾರ ಪ್ರಕರಣದ ಲೋಕಾಯುಕ್ತ ತನಿಖೆ ಆರಂಭವಾಗಿ ಮೂರು ವರ್ಷ ಕಳೆದರೂ ಪ್ರಾಥಮಿಕ ಮಾಹಿತಿ ಸಂಗ್ರಕ್ಕಷ್ಟೇ ಸೀಮಿತಗೊಂಡಿದೆ. ಇದಕ್ಕೆ ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಆದರೆ, ಆಮೆಗತಿಯ ತನಿಖೆಯಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನನೆಗುದಿಗೆ ಬಿದ್ದಂತಾಗಿದೆ.
ತನಿಖೆ ಆರಂಭಿಸಿದ ಲೋಕಾಯುಕ್ತ ಪೊಲೀಸರು ಕಳೆದ ಮೂರು ವರ್ಷಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ದತ್ತಾಂಶ, ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿದ್ದು ಹೊರತುಪಡಿಸಿ ಮುಂದೆ ಸಾಗಿಲ್ಲ. ಲೋಕಾಯುಕ್ತ ಮೂಲಗಳ ಪ್ರಕಾರ ತನಿಖೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದು ಪರೋಕ್ಷವಾಗಿ ಅಕ್ರಮದಲ್ಲಿ ಶಾಮೀಲಾದವರಿಗೆ ರಿಲೀಫ್ ನೀಡಿದೆ.
ತನಿಖೆ ಅಪೂರ್ಣ: ನರೇಗಾ ಯೋಜನೆಯಲ್ಲಿ 2007ರಿಂದ 2012ರ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕಂಟ್ರೋಲರ್ ಆಡಿಟರ್ ಆಫ್ ಜನರಲ್ (ಸಿಎಜಿ) ನೀಡಿದ್ದ ವರದಿ ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಈ ಕುರಿತ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತ್ತು. 2014ರ ಸೆ. 18ರಂದು ಈ ಕುರಿತು ಆದೇಶ ಹೊರಡಿಸಲಾಗಿತ್ತು. ಅದರಂತೆ ತನಿಖೆಯ ಜವಾಬ್ದಾರಿ ಹೊತ್ತ ಲೋಕಾಯುಕ್ತ ಪೊಲೀಸರು, ಹಲವು ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಣೆಯ ಪ್ರಾಥಮಿಕ ಕಾರ್ಯ ಪೂರ್ಣಗೊಳಿಸಿದ್ದರೆ, ಕೆಲ ಜಿಲ್ಲೆಗಳಲ್ಲಿ ಇನ್ನೂ ತನಿಖೆಯೇ ಆರಂಭವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ನೀಡಿಲ್ಲ: ಸಿಎಜಿ ವರದಿಯಲ್ಲಿ ಉಲ್ಲೇಖೀಸಿರುವಂತೆ ಅವ್ಯವಹಾರದ ಕುರಿತು ಮಾಹಿತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಆಯಾ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಕೆಲವು ಜಿಲ್ಲೆಗಳಿಂದ ಮಾತ್ರ ಮಾಹಿತಿ ಬಂದಿದ್ದು, ಇನ್ನು ಕೆಲವು ಜಿಪಂಗಳು ಮಾಹಿತಿ ನೀಡಿಲ್ಲ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆಯಿಂದ ವಿಳಂಬ: ಸರ್ಕಾರದ ಸೂಚನೆಯಂತೆ ಪ್ರಾಥಮಿಕ ಹಂತದ ತನಿಖೆಯನ್ನು ಆಯಾ ಜಿಲ್ಲಾ ಲೋಕಾಯುಕ್ತ ಎಸ್ಪಿಗಳಿಗೆ ವಹಿಸಲಾಗಿದೆ. ಆದರೆ, 25ಎಸ್ಪಿಗಳ ಪೈಕಿ ಬೆಂಗಳೂರು ಸೇರಿ ಇತರೆ ಜಿಲ್ಲೆಗಳಿಗೆ ಅನ್ವಯವಾಗುವಂತೆ 7 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರಿಗೆ ಮೂರು, ನಾಲ್ಕು ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ. ಇದಲ್ಲದೆ ಪೊಲೀಸ್ ಕಾನ್‌ಸ್ಟೆಬಲ್‌ಗಳು, ಕಾರು ಚಾಲಕರು ಸೇರಿ 120ಕ್ಕೂ ಅಧಿಕ ಸಿಬ್ಬಂದಿಯ ಕೊರತೆಯಿದೆ. ಇದಲ್ಲದೆ ಲೋಕಾಯುಕ್ತ ಪೊಲೀಸರು ಇನ್ನಿತರೆ ಪ್ರಕರಣಗಳ ತನಿಖೆಯನ್ನೂ ನಡೆಸಬೇಕಾಗಿದೆ. ಹೀಗಾಗಿ ತನಿಖೆ ವಿಳಂಬವಾಗುತ್ತಿದೆ ಎಂದು ಲೋಕಾ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಏನು?: ವರ್ಷದಿಂದ ವರ್ಷಕ್ಕೆ ಕಡಿಮೆಯಾದ ಕೂಲಿಕಾರ್ಮಿಕರ ನೋಂದಣಿ, 3.49 ಲಕ್ಷ ಉದ್ಯೋಗ ಚೀಟಿಗಳು ಹಾಗೂ 8.23 ಲಕ್ಷ ಚೀಟಿಗಳಲ್ಲಿ ತಪ್ಪು ಮಾಹಿತಿ. 63.89 ಲಕ್ಷ ವ್ಯಕ್ತಿಗಳ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕದೆ ವಂಚಿಸಿರುವುದು ಮುಂತಾದ ಅಂಶಗಳನ್ನು ಸಿಎಜಿ ವರದಿಯಲ್ಲಿ ವಿವರಿಸಿತ್ತು. ಅಲ್ಲದೆ, ಕಾಮಗಾರಿಗೆ ಸಾಮಾಗ್ರಿ ಪೂರೈಸಿದವರ ಹೆಸರನ್ನೇ ನಮೂದಿಸದೆ 1290,83 ಕೋಟಿ ರೂ. ಪಾವತಿ ಮಾಡಿರುವುದು ಸೇರಿ ಹಲವು ಮಹತ್ವದ ಅಂಶಗಳನ್ನು ಗಮನಕ್ಕೆ ತಂದು ಭಾರೀ ಅವ್ಯವಹಾರದ ಬಗ್ಗೆ ಬೆಳಕು ಚೆಲ್ಲಿತ್ತು. ಹೀಗಾಗಿ, ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ತನಿಖೆಗೆ ಸರ್ಕಾರ ಆದೇಶಿಸಿತ್ತು.
* ಮಂಜುನಾಥ್ ಲಘುಮೇನಹಳ್ಳಿ