ಮೈಸೂರು: ವರುಣಾ ಕ್ಷೇತ್ರದಲ್ಲಿ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಅಧಿಕಾರಿಗಳು ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಹೇಳಿದರು.
ವರುಣಾ ಕ್ಷೇತ್ರದ ಹುನಗನಹಳ್ಳಿ, ಪಟ್ಟೇಹುಂಡಿ, ಮಾದೇಗೌಡನಹುಂಡಿ, ರಂಗನಾಥಪುರ, ರಂಗಾಚಾರಿಹುಂಡಿ, ರಂಗಸಮುದ್ರ, ಎಳವೇಗೌಡನಹುಂಡಿ, ಹಿಟ್ಟುವಳ್ಳಿ, ಕುಪ್ಯ, ಅಗಸ್ತಪುರ, ತುಂಬಲ, ನಿಂಗೇಗೌಡನಹುಂಡಿ, ರಾಮನಾಥಪುರದ ಹುಂಡಿ, ಯಡದೊರೆಗಳಲ್ಲಿ ನೀರಾವರಿ ಇಲಾಖೆ, ಕೆ.ಆರ್.ಐ.ಡಿ.ಎಲ್.ನ ವತಿಯಿಂದ 27 ಕೋಟಿ ರೂ ವೆಚ್ಚದ ಡಾಂಬರೀಕರಣ, ಕಾಂಕ್ರಿಟ್, ರಸ್ತೆ, ಚರಂಡಿ ಸೇರಿದಂತೆ ಸುಮಾರು 27 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿಪರ್ವ ಪ್ರಾರಂಭವಾಗಿದ್ದು, ದೇಶದಲ್ಲಿಯೇ ಪ್ರಥಮವಾಗಿ ಜನಸಂಖ್ಯೆಗೆ ಅನುಗುಣವಾಗಿ ಪ.ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗೆ 2017ರಲ್ಲಿ 27 ಸಾವಿರ ಕೋಟಿ ಹಣ ಮೀಸಲಿಟ್ಟು, ಕಾನೂನು ಮಾಡಿದ್ದರಿಂದ ಇಂದು ರಾಜ್ಯದ ಎಲ್ಲಾ ಪ.ಜಾತಿ ಮತ್ತು ಪಂಗಡದ ಜನರು ವಾಸಿಸುವ ಕಾಲನಿಗಳ ರಸ್ತೆ, ಚರಂಡಿಗಳು, ಕಾಂಕ್ರಿಟ್ ರಸ್ತೆಗಳಾಗಿವೆ ಎಂದರು.
ರಾಜ್ಯದಲ್ಲಿ ಬರಗಾಲವಿದ್ದು, ಜನ-ಜಾನುವಾರುಗಳಿಗೆ ನೀರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜನರು ನೀರನ್ನು ಮಿತವಾಗಿ ಬಳಸಬೇಕು ಹಾಗೂ ಸಂರಕ್ಷಿಸಬೇಕು. ಪ್ರತಿಯೊಬ್ಬ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ತುಂಬ ಅವಶ್ಯಕವಾಗಿದೆ. ಆದ್ದರಿಂದ ಸರ್ಕಾರ ಸಾವಿರಾರು ಶುದ್ಧಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ, ಜಿಪಂ ಸದಸ್ಯೆ ಜಯಮ್ಮ ಶಿವಸ್ವಾಮಿ, ತಾಪಂ ಸದಸ್ಯರಾದ ಪಲ್ಲವಿ, ಮಂಜುನಾಥ್, ಎಪಿಎಂಸಿ ಸದಸ್ಯ ಆನಂದ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ ಇತರರು ಇದ್ದರು.