ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಬಿಬಿಎಂಪಿ, ಅನುಮತಿ ಪಡೆಯದೆ ರಸ್ತೆ ಅಗೆಯುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಸಿದ್ಧವಾಗಿದೆ.
ಪಾಲಿಕೆಯಿಂದ ಅನುಮತಿ ಪಡೆಯದೆ ರಸ್ತೆ ಅಗೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದ್ದಾರೆ. ಇದರೊಂದಿಗೆ ಪ್ರಸ್ತಕ ಸಾಲಿನ ಬಜೆಟ್‌ನಲ್ಲೂ ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು “ದಂಡ ನಿಯಮ’ ಜಾರಿಗೆ ಮುಂದಾಗಿದ್ದಾರೆ.
ನಾಗರಿಕರು ಮತ್ತು ಸಂಸ್ಥೆಗಳು ಅಥವಾ ಏಜೆನ್ಸಿಗಳು ಅನಧಿಕೃತವಾಗಿ ರಸ್ತೆ ಅಗೆಯುತ್ತಾರೆ. ನಂತರ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗುತ್ತಿದೆ. ಜತೆಗೆ ಅಪಘಾತಗಳು ಸಂಭವಿಸುತ್ತಿರುವುದರಿಂದಾಗಿ ಪಾಲಿಕೆ ಈ ನಿಯಮ ಜಾರಿಗೊಳಿಸುತ್ತಿದೆ.
ನಗರದ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ರಸ್ತೆ ಅಗೆದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಕೇಂದ್ರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ವಲಯಗಳಲ್ಲಿ ಅಧಿಕಾರಿಗಳು ಅನಧಿಕೃತವಾಗಿ ಒಎಫ್ಸಿ ಅಳವಡಿಸುವ ಹಾಗೂ ರಸ್ತೆ ಅಗೆಯುವವರಿಗೆ ಲಕ್ಷಾಂತರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ರಸ್ತೆ ಅಗೆದರೆ ಭಾರಿ ದಂಡ: ಪಾಲಿಕೆಯ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಅನುಮತಿ ಪಡೆಯದೆ ರಸ್ತೆ ಅಗೆಯುವ ಮನೆಯವರಿಗೆ 10 ಲಕ್ಷ ರೂ. ದಂಡ ಹಾಗೂ ಕಂಪನಿ ಅಥವಾ ಏಜೆನ್ಸಿಗೆ 25 ಲಕ್ಷ ರೂ. ದಂಡ ವಿಧಿಸುವಂತೆ ಹಿರಿಯ ಅಧಿಕಾರಿಗಳು ಸುತ್ತೋಲೆಯ ಮೂಲಕ ಜಂಟಿ ಆಯುಕ್ತರಿಗೆ ತಿಳಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವ ವಲಯದಲ್ಲಿ ಹಲವಾರು ಏಜೆನ್ಸಿಗಳಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜಾಗೃತಿ ಅಭಿಯಾನ: ದಂಡ ವಿಧಿಸುವ ಕುರಿತು ಈಗಾಗಲೇ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗಿದೆ. ಇದರೊಂದಿಗೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳಿಗೂ ಈ ಕುರಿತು ಮಾಹಿತಿ ರವಾನೆ ಮಾಡಲಾಗಿದೆ. ಅದಾದ ಬಳಿಕವೂ ನಾಗರಿಕರು ಮತ್ತು ಏಜೆನ್ಸಿಗಳು ತಪ್ಪು ಮಾಡಿದರೆ ಭಾರಿ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ.
ಅನುಮತಿ ಪಡೆಯದೆ ನಾಗರಿಕರು ಮತ್ತು ಏಜೆನ್ಸಿಗಳು ರಸ್ತೆ ಅಗೆಯುತ್ತಿರುವ ಕಾರಣ ಗುಂಡಿಗಳು ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರಿ ದಂಡ ವಿಧಿಸುವ ಮೂಲಕ ಅನಧಿಕೃತ ರಸ್ತೆ ಅಗೆತ ತಡೆಯಲಾಗುವುದು.
-ಜಿ.ಪದ್ಮಾವತಿ, ಮೇಯರ್