ವಡೋದರ : ಸಾರ್ವಜನಿಕ ರಂಗದ ಬ್ಯಾಂಕೊಂದರ ಎಟಿಎಂ ಹೊರಗಡೆ ಇಂದು 24.68 ಲಕ್ಷ ರೂ.ಗಳಿದ್ದ ಪೆಟ್ಟಿಗೆಯೊಂದು ಪತ್ತೆಯಾಗಿ ಪೊಲೀಸರಲ್ಲಿ ಹಲವು ಬಗೆಯ ಶಂಕೆಗಳಿಗೆ ಕಾರಣವಾಯಿತು.
ಎಟಿಎಂ ಗೆ ಹಣತುಂಬುವ ಏಜನ್ಸಿಯೊಂದರ ನೌಕರನು ಈ ಹಣದ ಪೆಟ್ಟಿಗೆಯನ್ನು ನಾಲ್ಕು ದಿನಗಳ ಹಿಂದೆ ಎಟಿಎಂ ಹೊರಗೆ ಮರೆತುಬಿಟ್ಟು ಹೋಗಿದ್ದನೆಂಬ ವಿಷಯ ಅನಂತರ ತನಿಖೆಯಲ್ಲಿ ಗೊತ್ತಾದಾಗ ಎಲ್ಲರಿಗೂ ಪರಮಾಶ್ಚರ್ಯವಾಯಿತು.
ಇಲ್ಲಿನ ವಾಘೋಡಿಯಾ ರಸ್ತೆಯಲ್ಲಿರುವ ಝವೇರ ನಗರಕ್ಕೆ ಸಮೀಪದ ಬ್ಯಾಂಕಿನ ಎಟಿಎಂ ಗೆ ವಿದ್ಯಾರ್ಥಿಯೋರ್ವ ಹಣ ಡ್ರಾ ಮಾಡಲೆಂದು ಹೋದಾಗ ಆತನಿಗೆ ಎಟಿಎಂ ಹೊರಗೆ ಪೆಟ್ಟಿಗೆಯೊಂದು ಶಂಕಾಸ್ಪದವಾಗಿ ಕಂಡು ಬಂತು; ಆತ ಅದನ್ನು ತೆರೆದು ನೋಡಿದಾಗ ಅಪಾರ ಪ್ರಮಾಣದ ಕರೆನ್ಸಿ ನೋಟುಗಳು ಇರುವುದು ಆತನಿಗೆ ಕಂಡು ಬಂತು; ಇದು ಎಲ್ಲೋ ಲೂಟಿ ಮಾಡಿರಬಹುದಾದ ಹಣವೆಂದು ಗ್ರಹಿಸಿದ ಆತ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಎಂದು ಸಹಾಯಕ ಪೊಲೀಸ್ ಕಮಿಶನರ್ ವೈ ಆರ್ ಗಾಮಿತ್ ಹೇಳಿದರು.
ವಿಚಿತ್ರವೆಂದರೆ ಕಳೆದ ಫೆ.23ರಿಂದಲೇ ಈ ಪೆಟ್ಟಿಗೆ ಎಟಿಎಂ ಹೊರಗೆ ಇತ್ತು. ಅದರೊಳಗೆ ಲಕ್ಷಾಂತರೂ ರೂಪಾಯಿ ಹಣ ಇದ್ದೀತೆಂಬ ಗುಮಾನಿ ಯಾರಿಗೂ ಬರಲಿಲ್ಲ. ಪೊಲೀಸರು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರೊಳಗೆ 2,000 ರೂ. ಮತ್ತು 500 ರೂ.ಗಳ ನೋಟುಗಳ ಕಂತೆಗಳು ಇದ್ದವು.
ಇದು ಎಟಿಎಂ ಸಂಬಂಧಿತ ಬ್ಯಾಂಕಿಗೆ ಸೇರಿರಬಹುದೆಂಬ ಊಹೆಯಲ್ಲಿ ಪೊಲೀಸರು ಬ್ಯಾಂಕ್ ಮ್ಯಾನೇಜರ್‌ಗೆ ವಿಷಯ ತಿಳಿಸಿದರು. ಎಟಿಎಂ ಗೆ ಹಣ ತುಂಬುವ ಏಜನ್ಸಿಯ ನೌಕರನ ಮರೆಗುಳಿತನದಿಂದ ಈ ಪ್ರಮಾದ ಉಂಟಾಯಿತೆಂಬುದು ಅನಂತರ ಗೊತ್ತಾಯಿತು.
“ನಾವು ಸಿಸಿಟಿವಿ ಚಿತ್ರಿಕೆಗಳನ್ನು ಗಮನಿಸುತ್ತಿದ್ದೇವೆ. ನಾಲ್ಕು ದಿನಗಳಿಂದಲೂ ಈ ಹಣದ ಪೆಟ್ಟಿಗೆ ಎಟಿಎಂನ ಹೊರಗೆ ಅನಾಥವಾಗಿದ್ದು ಅದು ಯಾರೂ ಗಮನಕ್ಕೂ ಬಾರದೇ ಹೋದದುದ ಆಶ್ಚರ್ಯವೇ ಸರಿ” ಎಂದು ಗಾಮಿತ್ ಹೇಳಿದರು.