ಚಿತ್ರದುರ್ಗ: ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ ಕಾಮ್ಸ್) 80.04 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಸಿ 2.39 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ವೆಂಕಟೇಶಮೂರ್ತಿ
ತಿಳಿಸಿದರು.
ಹಾಪಕಾಮ್ಸ್ ಆವರಣದಲ್ಲಿ ಗುರುವಾರ ನಡೆದ 2016-17ನೇ ಸಾಲಿನ 32ನೇ ವಾರ್ಷಿಕ ಮಹಾಸಭೆಯಲ್ಲಿ 2017-18ನೇ ಸಾಲಿನ 88 ಲಕ್ಷ ರೂ.ಗಳ ಬಜೆಟ್ ಮಂಡಿಸಿ ಅವರು ಮಾತನಾಡಿದರು. ಕಳೆದ ವರ್ಷ ಮತ್ತು ಪ್ರಸಕ್ತ ಸಾಲಿನ ಖರ್ಚು, ವೆಚ್ಚಗಳಿಗೆ ಅನುಮೋದನೆ ಪಡೆದರು. 1986-87ರಲ್ಲಿ ಕೆಲವೇ ಕೆಲವು ಸದಸ್ಯರಿಂದ ಆರಂಭವಾದ ಸಂಘ, ಪ್ರಸಕ್ತ ಸಾಲಿನ ಅಖೈರಿಗೆ ಒಟ್ಟು 811 ಮಂದಿ ಸದಸ್ಯರನ್ನು ಹೊಂದಿದೆ. 3 ಲಕ್ಷ 22 ಸಾವಿರದ 293 ರೂ.ಗಳ ಶೇರು ಬಂಡವಾಳ ಸಂಗ್ರಹಿಸಲಾಗಿದೆ. ಪ್ರಸಕ್ತ ವರ್ಷ ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಯ ರೈತರಿಗೆ ಬೇಕಾಗಿರುವ
ಉತ್ತಮ ತಳಿಯ ನುಗ್ಗೆ ಬೀಜಗಳನ್ನು ಧಾರವಾಡ ಮತ್ತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದಿಂದ ಖರೀದಿಸಿ ವಿತರಣೆ ಮಾಡಲಾಗಿದೆ ಎಂದರು.
ಗೊಬ್ಬರ, ಕೀಟನಾಶಕ, ಔಷ ಧ ಇತ್ಯಾದಿಗಳನ್ನು ರೈತರಿಗೆ ಒದಗಿಸಲಾಗಿದೆ. ಬಾಳೆ, ಮಾವು, ತರಕಾರಿ ಬೆಳೆಗಾರರಿಗೆ ಐಐಎಚ್‌ಆರ್ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಬನಾನಾ, ಮ್ಯಾಂಗೋ ಹಾಗೂ ವೆಜಿಟೇಬಲ್ ಸ್ಪೆಷಲ್ ಖರೀದಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದರು. ಹಾಪಕಾಮ್ಸ್ ಸದಸ್ಯ ಹೆಂಜಾರಪ್ಪ ಮಾತನಾಡಿ, ಜಿಲ್ಲೆ ಸಂಪೂರ್ಣವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಹಾಗಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಅಡಿಕೆ, ತೆಂಗು ಹಾಗೂ ಹಣ್ಣಿನ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಬಾಲಕೃಷ್ಣ, ಜಿಲ್ಲಾಡಳಿತದ ಮೂಲಕ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಷ್ಟಕ್ಕೊಳಗಾಗಿರುವ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘದ ಅಧ್ಯಕ್ಷ ಕೆ.ಎಸ್.ತಿಮ್ಮಾರೆಡ್ಡಿ, ನಿದೇಕರಾದ ಎಚ್. ಕುಬೇರ, ಜಿ. ಶ್ರೀಕಂಠನ್, ವೈ.
ಎಸ್. ಉಮಾಶಂಕರ್, ಬಿ.ಆರ್. ಯಶೋದಾ, ಕೆ.ಎಚ್. ಅನಂತ ರೆಡ್ಡಿ, ಜಿ.ಕೆ. ಸಿದ್ದಮ್ಮ, ಟಿ. ತಿಪ್ಪಮ್ಮ, ರೇಣುಕಮ್ಮ, ಪುರದ ದೊಡ್ಡಮಾರಣ್ಣ, ಟಿ.ಜಿ. ಸಂತೋಷ್‌ಕುಮಾರ್ ಇದ್ದರು.