Advertisement

ರಘುರಾಮ್‌ ರಾಜನ್‌ ಇದ್ದಾಗಲೇ 2 ಸಾವಿರ ರೂ. ನೋಟು ಮುದ್ರಣ!

03:45 AM Feb 18, 2017 | Team Udayavani |

ದೆಹಲಿ: ನೋಟುಗಳ ಅಪನಗದೀಕರಣದ ಬಳಿಕ ಸರಿಯಾಗಿ ಹೊಸ ಮುಖ ಬೆಲೆಯ 500 ರೂ., 2 ಸಾವಿರ ರೂ. ನೋಟುಗಳು ಸಿಗುತ್ತಿಲ್ಲ ಎಂಬ ವಿಚಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಗಮನಾರ್ಹ ವಿಚಾರವೇನೆಂದರೆ ರಘುರಾಂ ರಾಜನ್‌ ಆರ್‌ಬಿಐ ಗವರ್ನರ್‌ ಆಗಿದ್ದಾಗಲೇ 2 ಸಾವಿರದ ಹೊಸ ನೋಟಿನ ಮುದ್ರಣ ಶುರುವಾಗಿತ್ತು. ಅಷ್ಟೇ ಅಲ್ಲ, ಅದರಲ್ಲಿ ಹಾಲಿ ಗವರ್ನರ್‌ ಊರ್ಜಿತ್‌ ಪಟೇಲ್‌ ಸಹಿಯನ್ನೇ ಹಾಕಲಾಗಿತ್ತು ಎಂಬುದನ್ನು ದೆಹಲಿಯ ಪತ್ರಿಕೆ ನಡೆಸಿದ ತನಿಖಾ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಆರ್‌ಬಿಐನ 2 ಮುದ್ರಣಾಲಯಗಳು ಈ ವಿಚಾರ ತಿಳಿಸಿದ್ದು, ಆ.22ರಂದು ಮೊದಲ ಹಂತದ ನೋಟು ಮುದ್ರಣ ಆರಂಭವಾಗಿತ್ತು ಎಂದಿವೆ. ಅಂದರೆ ಆರ್‌ಬಿಐನ ಹಾಲಿ ಗವರ್ನರ್‌ ಡಾ.ಊರ್ಜಿತ್‌ ಪಟೇಲ್‌ ಹೆಸರನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬಳಿಕ ಆ ಕಾರ್ಯ ಆರಂಭವಾಗಿದೆ. ಅವರು ಅಧಿಕಾರ ಸ್ವೀಕರಿಸಿದ್ದು 2016ರ ಸೆ.4ರಂದು.

Advertisement

ಕಳೆದ ಡಿಸೆಂಬರ್‌ನಲ್ಲಿ ಸಂಸತ್‌ನ ಸ್ಥಾಯಿ ಸಮಿತಿ ಮುಂದೆ ಆರ್‌ಬಿಐ ನೀಡಿದ ಮಾಹಿತಿ ಪ್ರಕಾರ 2016ರ ಜೂ.7ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅನುಮತಿ ಸಿಕ್ಕಿತ್ತು. ಅದರ ಪ್ರಕಾರ ಕ್ರಮ ಕೈಗೊಳ್ಳಲಾಯಿತೆಂದು ಹೇಳಿತ್ತು. ನೋಟು ಮುದ್ರಣ ನಿಯಮ ಪ್ರಕಾರ ಆರ್‌ಬಿಐ ಆದೇಶದ ಕೂಡಲೇ ಅದನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಆದರೆ ಹಾಲಿ ಪ್ರಕ್ರಿಯೆಯಲ್ಲಿ ಆದೇಶ ಬರುವುದಕ್ಕಿಂತ ಎರಡು ತಿಂಗಳು ಮೊದಲೇ ಪ್ರಸ್‌ಗಳಲ್ಲಿ ಮುದ್ರಣ ಕಾರ್ಯ ಆರಂಭವಾಗಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ್‌ ಪ್ರೈ.ಲಿ (ಬಿಆರ್‌ಬಿಎನ್‌ಎಂಪಿಎಲ್‌) ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ ನ.23ರಂದು ಮರು ವಿನ್ಯಾಸಗೊಳಿಸಿದ 500 ರೂ. ನೋಟುಗಳ ಮುದ್ರಣ ಶುರು ಮಾಡಿದ್ದು  ನ.23ರಂದು. ಅಂದರೆ ಕೇಂದ್ರ ಸರ್ಕಾರ ಆರಂಭದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟಿನ ಮುದ್ರಣಕ್ಕೇ ಹೆಚ್ಚಿನ ಆದ್ಯತೆ ನೀಡಿತ್ತು.  ಹೀಗಾಗಿ, ಮೊದಲು ಮುದ್ರಿತವಾದ ನೋಟುಗಳಲ್ಲಿ ರಾಜನ್‌ ಸಹಿ ಬದಲು, ಪಟೇಲ್‌ ಸಹಿ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಆರ್‌ಬಿಐ ಹಾಗೂ ಕೇಂದ್ರ ವಿತ್ತ ಸಚಿವಾಲಯಕ್ಕೆ ಪ್ರಶ್ನೆಗಳನ್ನು ಕಳುಹಿಸಿದರೂ, ಉತ್ತರ ಬಂದಿಲ್ಲ.

ದಪ್ಪಚರ್ಮ ಬೆಳೆಸಿಕೊಳ್ಳಬೇಕು: “ನೋಟುಗಳ ಅಪನಗದೀಕರಣದಿಂದಾಗಿ ಆರ್ಥಿಕತೆಯಲ್ಲಿ ಅಲ್ಪಾವಧಿಯ ಕುಸಿತ ಕಂಡರೂ, ನಂತರ ದೇಶದ ಜಿಡಿಪಿಯು ಹೇಗೆ ಉತ್ತುಂಗಕ್ಕೆ ಏರಲಿದೆ ಎಂಬುದನ್ನು ನೋಡಿ.’ ಹೀಗೆಂದು ಹೇಳಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಊರ್ಜಿತ್‌ ಪಟೇಲ್‌. ನೋಟುಗಳ ಅಮಾನ್ಯದ ಬಳಿಕ ಭಾರಿ ಟೀಕೆ, ಆಕ್ರೋಶಗಳಿಗೆ ಗುರಿಯಾಗಿದ್ದ ಪಟೇಲ್‌ ಅವರು ಇದೀಗ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮರ್ಥಿಸಿ ಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ದಪ್ಪ ಚರ್ಮವನ್ನು ನಾವು ಬೇಗನೆ ಬೆಳೆಸಿಕೊಳ್ಳಬೇಕಾಗುತ್ತದೆ. ನಾವು ಅದನ್ನು ಮಾಡಿದ್ದೇವೆ. ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸವಾಲು ಗಳನ್ನು ಎದುರಿಸುವುದರ ಜೊತೆಗೆ, ನೋಟುಗಳ ಮರುಪೂರೈಕೆ ಕೆಲಸವನ್ನು ಅತ್ಯಂತ ವೇಗವಾಗಿ ನಡೆಸಿದ್ದೇವೆ. ಒಮ್ಮೊಮ್ಮೆ ರಚನಾತ್ಮಕ ಟೀಕೆಗಳನ್ನು ನಾವು ಸುಧಾರಣೆಗಾಗಿ ಬಳಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಪಟೇಲ್‌.

ಹೆಚ್ಚಾದ ನೋಟುಗಳ ಸಂಗ್ರಹ: ನೋಟುಗಳ ಮರುಪೂರೈಕೆ ಬಹುತೇಕ ಪೂರ್ಣಗೊಂಡಿದ್ದರೂ ಜನ, ನೋಟುಗಳ ಸಂಗ್ರಹವನ್ನು ಕಡಿಮೆ ಮಾಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕೈಯ್ಯಲ್ಲಿ ಹಣವಿಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು ಎಂಬ ಭೀತಿಯಿಂದ ಅನೇಕರು ಈಗಲೂ ಎಟಿಎಂಗೆ ಹೋಗಿ ಹಣ ವಿತ್‌ಡ್ರಾ ಮಾಡುತ್ತಿದ್ದಾರೆ. ಮೊದಲು ಒಂದು ಎಟಿಎಂಗೆ ದಿನಕ್ಕೆ 
120 ಮಂದಿ ಬರುತ್ತಿದ್ದರೆ, ಈಗ ಈ ಸಂಖ್ಯೆ 140 ದಾಟುತ್ತಿದೆ. ಜನ ಹಣ ವಿತ್‌ಡ್ರಾ ಮಾಡಿ ನಗದನ್ನು ಸಂಗ್ರಹಿಸಿಡುತ್ತಿದ್ದಾರೆ ಎನ್ನಲಾಗಿದೆ.

Advertisement

ಮಾಹಿತಿ ಕೊಡದವರಿಗೆ ಐಟಿಯಿಂದ ಶೀಘ್ರ ಪತ್ರ
ಇದೇ ವೇಳೆ, ಸುಮಾರು 4.5 ಲಕ್ಷ ಕೋಟಿಯಷ್ಟು ಶಂಕಿತ ಠೇವಣಿಗಳ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದ್ದು, ಈ ಕುರಿತ ಪ್ರತಿಕ್ರಿಯೆ ಕೋರಿ ಈಗಾಗಲೇ 18 ಲಕ್ಷ ಮಂದಿಗೆ ಎಸ್ಸೆಮ್ಮೆಸ್‌ ಮತ್ತು ಇಮೇಲ್‌ ಕಳುಹಿಸಿದೆ. ಯಾರ್ಯಾರು ಇದಕ್ಕೆ ಉತ್ತರಿಸಿಲ್ಲವೋ ಅವರಿಗೆ ನಾನ್‌ ಸ್ಟಾಟ್ಯುಟರಿ ಪತ್ರ ಕಳುಹಿಸಿ, ಪ್ರತಿಕ್ರಿಯೆ ಕೋರಲಾಗುವುದು ಎಂದು ಇಲಾಖೆ ತಿಳಿಸಿದೆ. ಇದೇ ವೇಳೆ 7 ಲಕ್ಷ ಮಂದಿ ಬ್ಯಾಂಕ್‌ ಮತ್ತು ಐಟಿ ಇಲಾಖೆಯಲ್ಲಿ ರುವ ತಮ್ಮ ಮಾಹಿತಿ ಸರಿಯಾಗಿದೆ ಎಂದು ಎಸ್‌ಎಂಎಸ್‌ ಮತ್ತು ಇ- ಮೇಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನೋಟುಗಳ ಅಮಾನ್ಯವು ಪೆಪ್ಸಿಕೋ ಉದ್ಯಮದ ಮೇಲೆ ಪ್ರತಿ ಕೂಲ ಪರಿಣಾಮ ಬೀರಿದೆ. 4ನೇ ತ್ತೈಮಾಸಿಕದ ಫ‌ಲಿತಾಂಶವೇ ಇದನ್ನು ಸೂಚಿಸುತ್ತದೆ. ವರ್ಷದ ಹಿಂದೆ 1.71 ಶತಕೋಟಿ ಡಾಲರ್‌ ಇದ್ದ ಪೆಪ್ಸಿಕೋದ ನಿವ್ವಳ ಆದಾಯವು 2016ರ ಡಿಸೆಂಬರ್‌ನಲ್ಲಿ 1.40 ಶತ ಕೋಟಿ ಡಾಲರ್‌ಗೆ ಇಳಿದೆ.
– ಇಂದ್ರಾ ನೂಯಿ, ಪೆಪ್ಸಿಕೋ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next