Advertisement

ಪ್ರವಾಹ ಪರಿಹಾರಕ್ಕೆ 200 ಕೋಟಿ ರೂ. ಬಿಡುಗಡೆ 

06:00 AM Aug 29, 2018 | Team Udayavani |

ಬೆಂಗಳೂರು: ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಕರಾವಳಿ ಮತ್ತು ಮಲೆನಾಡಿನ ಏಳು ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 200 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಈ ಪೈಕಿ ಅತಿ ಹೆಚ್ಚು ಆಸ್ತಿಪಾಸ್ತಿ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಗೆ 85 ಕೋಟಿ ರೂ. ಒದಗಿಸಲಾಗಿದೆ. ಉಳಿದಂತೆ ಹಾಸನ- 27.94 ಕೋಟಿ ರೂ., ಚಿಕ್ಕಮಗಳೂರು-25.13 ಕೋಟಿ ರೂ., ದಕ್ಷಿಣ
ಕನ್ನಡ-20.88 ಕೋಟಿ  ರೂ., ಶಿವಮೊಗ್ಗ- 15 ಕೋಟಿ ರೂ., ಉಡುಪಿ-14.54 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 11.51 ಕೋಟಿ ರೂ.
ಅನುದಾನ ಬಿಡುಗಡೆ ಮಾಡಲಾಗಿದೆ.  

Advertisement

ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾದ ಪ್ರವಾಹ ಮತ್ತು ಭೂ ಕುಸಿತದಿಂದ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿ ರುವುದರಿಂದ ಈ ಅನುದಾನ ಬಿಡುಗಡೆ ಮಾಡಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಮಾರ್ಗಸೂಚಿ ಗಳಿಗನುಗುಣವಾಗಿ ಈ ಹಣ ವೆಚ್ಚ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇದಲ್ಲದೆ, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಗೆ ಒದಗಿಸಿರುವ ಅನುದಾನದಲ್ಲಿ ಕ್ರಿಯಾ ಯೋಜನೆ ಸಿದಟಛಿಪಡಿಸಲಾಗಿದೆ. ಅದರಂತೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ಅನುದಾನವನ್ನು ಇಲಾಖಾವಾರು ಹಂಚಿಕೆ ಮಾಡಲಿದೆ. ಅದರಂತೆ ಕಾಮಗಾರಿ ಕೈಗೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಉಡೋತ್‌ ಮೊಟ್ಟೆ ಜನರಿಗೀಗ ಹೊತ್ತಿನ ಊಟಕ್ಕೂ ತತ್ವಾರ 
ಮಡಿಕೇರಿ: ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಕೈ ಚಾಚುವ ದುರ್ಗತಿ ಬಂದೊದಗಿದೆ. ಜಿಲ್ಲೆಯ ಸುಮಾರು 32 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಸ್ಥರ ಬದುಕು ಕುರುಡಾಗಿದೆ. ಪ್ರಕೃತಿ ವಿಕೋಪಕ್ಕೆ ಸಿಲುಕಿದ
ಗ್ರಾಮಗಳಲ್ಲಿ ಒಂದಾದ ನಗರಕ್ಕೆ ಸಮೀಪದಲ್ಲಿರುವ ಉಡೋತ್‌ ಮೊಟ್ಟೆ ಗ್ರಾಮದಲ್ಲಿ ಕಾರ್ಮಿಕ ವರ್ಗವೇ ಹೆಚ್ಚಿದ್ದು, ತಮ್ಮ ಬದುಕಿಗಾಗಿ ತೋಟದ ಕೆಲಸವನ್ನೇ ಅವರು ಅವಲಂಬಿಸಿದ್ದಾರೆ. ಕಾಫಿ ತೋಟಗಳೆಲ್ಲವೂ ನೀರು, ಮಣ್ಣು ಪಾಲಾಗಿರುವುದರಿಂದ ತೋಟದ ಕೆಲಸವಿಲ್ಲದೆ ಬದುಕು ಬಡವಾಗಿದೆ. ದಿನನಿತ್ಯದ ಸಾಮಗ್ರಿಗಳನ್ನು ಖರೀದಿಸಲು ನಗರಕ್ಕೂ ತೆರಳಲಾಗದೆ, ಇಲ್ಲಿನ ಬಡ ವರ್ಗ ಪರಿತಪಿಸುತ್ತಿದೆ. ಉಡೋತ್‌ ಮೊಟ್ಟೆಯಿಂದ 
 ಡಿಕೇರಿ ನಗರಕ್ಕೆ ತೆರಳುವ ಮಡಿಕೇರಿ-ಭಾಗಮಂಡಲ ರಸ್ತೆ ಸಂಪೂರ್ಣ ಹಾನಿಗೊಳಗಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ನಿರಾಶ್ರಿತರು ಮತ್ತು ಸಂತ್ರಸ್ತರಿ ಗಾಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳು ಪರಿಹಾರ ಕೇಂದ್ರಗಳ  ಪಾಲಾಗುತ್ತಿದ್ದು, ಅಲ್ಪ ಪ್ರಮಾಣದ ಪದಾರ್ಥವನ್ನು ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಗ್ರಾಮಸ್ಥರಿಗೆ ಹಂಚಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಸುಮಾರು 500 ರಿಂದ 600 ಗ್ರಾಮಸ್ಥರಿದ್ದು, ಕೂಲಿ ಕೆಲಸವನ್ನೇ ನಂಬಿ ಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 

ಆದರೆ, ಈಗ ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ತೋಟದ ಮಾಲೀಕರು ಆತಂಕಗೊಂಡಿದ್ದು, ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾರ್ಮಿಕ ವರ್ಗ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡು ವಂತಾಗಿದೆ.ಭಯದಿಂದ ಮನೆ ತೊರೆದವರು
ಅಪಾಯದ ಸ್ಥಿತಿಯಲ್ಲಿರುವ ಮನೆಗಳಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ರುವ ಬಹುತೇಕ ಮನೆಗಳು ಗುಡ್ಡದ ಮೇಲಿರುವು ದರಿಂದ ಇನ್ನು ಮುಂದೆ ನೆಮ್ಮದಿಯ ಜೀವನ ಸಾಗಿಸುವುದು ಅಸಾಧ್ಯ ಎನಿಸುತ್ತಿದೆ. ಗ್ರಾಮದ ಕಾಲುದಾರಿಗಳು ಸಮರ್ಪಕ ವಾಗಿಲ್ಲ. ದಾರಿಯುದ್ದಕ್ಕೂ ಗುಡ್ಡ
ಕುಸಿಯುವ ಭೀತಿ ಎದುರಾಗಿದೆ. ಇಲ್ಲಿ ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾ.ಪಂ.ಗೆ ಮನವಿ ಮಾಡುತ್ತಿದ್ದರೂ ನಿರ್ಲಕ್ಷ್ಯ ವಹಿಸಿದೆ ಎನ್ನುತ್ತಾರೆ ಗ್ರಾಮಸ್ಥರು.

ಸಿಎಂ ಇಂದು ದೆಹಲಿಗೆ
ಮೈಸೂರು: ಕೊಡಗಿನಲ್ಲಿ ಮಹಾ ಮಳೆಯಿಂದ  ಉಂಟಾಗಿರುವ ಅನಾಹುತದ ಪರಿಹಾರಕ್ಕೆ 3 ಸಾವಿರ ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಸಂಜೆ ತಾವು
ದೆಹಲಿಗೆ ತೆರಳುತ್ತಿದ್ದು, ಆ.30ರಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ, ಕೊಡಗು ಅನಾಹುತದ ಮಧ್ಯಂತರ ವರದಿ ಸಲ್ಲಿಸಿ, ನೆರವು ಕೋರಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. 

Advertisement

ವಿವಿಧ ರೈಲು ಸಂಚಾರ ರದ್ದು
ಹುಬ್ಬಳ್ಳಿ: ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್‌ ಘಾಟಿ ವಲಯಗಳ ಮಧ್ಯೆ ಡೋಣಿಗಲ್‌- ಎಡಕುಮೇರಿ-ಕಡಗರವಳ್ಳಿ-ಶ್ರೀಬಾಗಿಲು ಬ್ಲಾಕ್‌ ಮಧ್ಯೆ ಹಲವೆಡೆ ಭೂ ಕುಸಿತ ಕಂಡು ಬಂದಿದ್ದರಿಂದ ಕೆಲ ರೈಲುಗಳ ಸೇವೆ ರದ್ದುಪಡಿಸಲಾಗಿದೆ. ಬೆಂಗಳೂರು ನಗರದಿಂದ ಪ್ರಯಾಣ ಬೆಳೆಸಲಿರುವ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ (16511/16513) ರೈಲನ್ನು ಆ.29 ಹಾಗೂ ಆ.31ರಂದು ರದ್ದುಪಡಿಸಲಾಗಿದೆ. ಕಣ್ಣೂರು/ಕಾರವಾರದಿಂದ ಆ.29ರಂದು ಹೊರಡಲಿದ್ದ ಕಣ್ಣೂರು/ ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16512/16514)
ರೈಲು ಸೇವೆ ರದ್ದುಗೊಳಿಸಲಾಗಿದೆ. ಅದೇ ರೀತಿ ಕಣ್ಣೂರು/ ಕಾರವಾರದಿಂದ ಆ.30 ಹಾಗೂ ಸೆಪ್ಟೆಂಬರ್‌ 1ರಂದು ತೆರಳುವ ಕಣ್ಣೂರು/ಕಾರವಾರ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (16518/16524) ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next