Advertisement

‘ವಿಧಾನಸಭಾ ಕ್ಷೇತ್ರಗಳಿಗೆ 20 ಕೋಟಿ ರೂ. ಅನುದಾನ’

12:40 PM Dec 06, 2017 | Team Udayavani |

ಆಲಂಕಾರು: ರಾಜ್ಯ ಸರಕಾರ ಹಣಕಾಸಿನ ವ್ಯವಸ್ಥೆ ಸುಸ್ಥಿತಿಯಲ್ಲಿರುವುದುರಿಂದ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ನಡೆಯುತ್ತಿವೆ ಎಂದು ಅರಣ್ಯ ಸಚಿವ ರಮಾನಾಥ ಅವರು ರೈ ಹೇಳಿದರು.

Advertisement

ಮಂಗಳವಾರ ಸಂಜೆ ಕುಮಾರಧಾರ ನದಿಯ ಶಾಂತಿಮೊಗರು ಸೇತುವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಪ್ರತೀ ವಿಧಾನ ಸಭಾ ಕ್ಷೇತ್ರಗಳಿಗೆ 20 ಕೋಟಿ ರೂ. ಅನುದಾನ ನೀಡಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಜಿಲ್ಲೆಯ ನಾಲ್ಕು ಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಎರಡು ನೂತನ ತಾಲೂಕು ಗಳನ್ನು ಘೋಷಿಸಲಾಗಿದೆ. ಸುಳ್ಯದಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಬಿಸಲಾಗುವುದು ಎಂದರು.

 2 ಕಡೆ ಅನುದಾನ ಬಿಡುಗಡೆ
ಮುಖ್ಯ ಅತಿಥಿ ಪುತ್ತೂರಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಶಾಂತಿ ಮೊಗರು ಸೇತುವೆಗೆ ಪುತ್ತೂರು ಮತ್ತು ಸುಳ್ಯ ಕ್ಷೇತ್ರದಿಂದ ಎರಡು ಕಡೆಗಳಿಂದ ಅನುದಾನ ಬಿಡುಗಡೆಯಾಗಿತ್ತು. ನನ್ನ ಊರಿನ ಜನತೆಯ ಬೇಡಿಕೆಗೆ ಮಣಿದು ನಾನು ಪುತ್ತೂರು ಕ್ಷೇತ್ರಕ್ಕೆ ಬಿಡುಗಡೆಯಾದ 9.5 ಕೋಟಿ ರೂ. ಸುಳ್ಯ ಕ್ಷೇತ್ರಕ್ಕೆ ಬಿಟ್ಟುಕೊಟ್ಟಿದ್ದೆ. ಇದರಲ್ಲಿ 6.5
ಕೋಟಿ ರೂ. ವೆಚ್ಚದಲ್ಲಿ ಶಾಂತಿಮೊಗರು ಆಲಂಕಾರು ರಸ್ತೆ ಕಾಮಗಾರಿ ನಡೆದಿದೆ. ಈ ಅನುದಾನದಲ್ಲಿ ಸುಳ್ಯ ಶಾಸಕರು ಬುದ್ಧಿವಂತಿಕೆಯಿಂದ 9.5 ಕೋಟಿ ರೂ. ಗಳಲ್ಲಿ 6.5 ಕೋಟಿ ರೂ.ಗಳನ್ನು ರಸ್ತೆಗೆ ಉಪಯೋಗಿಸಿ ಉಳಿದ 3 ಕೋಟಿ ರೂ. ಗಳನ್ನು ಚೊಕ್ಕಾಡಿಯ ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ ಎಂದರು. 

ಶಾಂತವಾದ ಶಾಂತಿಮೊಗರು
ಶಾಂತಿಮೊಗರಿನ ಕುಮಾರಧಾರ ನದಿಯು ಹಲವು ಜೀವಗಳ ಬಲಿಯನ್ನು ಪಡೆದಿತ್ತು. ಇದಕ್ಕಾಗಿ ಈ ಭಾಗದ ಜನತೆ ಇಲ್ಲಿ ಸರ್ವಋತು ಸೇತುವೆ ಅಗತ್ಯವಿದೆ ಎಂದು ಮನವಿಯನ್ನು ಮಾಡಿಕೊಂಡು ಬರುತ್ತಿದ್ದರು. ಇದೀಗ ಸೇತುವೆ ನಿರ್ಮಾಣವಾಗುವ ಮೂಲಕ ಶಾಂತಿಮೊಗರು ಶಾಂತವಾಗಿದೆ ಎಂದರು.

ಶೀಘ್ರವೇ ಬಸ್‌ ವ್ಯವಸ್ಥೆ
ಈ ಭಾಗದ ಬಹು ಬೇಡಿಕೆಯಾದ ಸರಕಾರಿ ಬಸ್‌ನ ವ್ಯವಸ್ಥೆಯನ್ನು ಶೀಘ್ರವೇ ಮಾಡಲಾಗುವುದು. ಈಗಾಗಲೇ ಡಿಸಿಯವರಲ್ಲಿ ಮಾತುಕತೆ ನಡೆಸಲಾಗಿದೆ. ಬುಧವಾರ ಈ ರಸ್ತೆಯ ಸರ್ವೇ ಕಾರ್ಯವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಡೆಸಲಿದೆ. ಡಿಸೆಂಬರ್‌ ತಿಂಗಳ ಅಂತ್ಯಕ್ಕೆ ಸರಕಾರಿ ಬಸ್‌ನ ವ್ಯವಸ್ಥೆ ಮಾಡಲಾಗುವುದು. ತಪ್ಪಿದಲ್ಲಿ ಜನವರಿ ತಿಂಗಳಲ್ಲಿ ಖಂಡಿತಾವಾಗಿಯು ಪುತ್ತೂರು  ಆಲಂಕಾರು- ಕಡಬ, ಹಾಗೂ ಸುಳ್ಯ ಕಡಬ ಆಲಂಕಾರು-ಪುತ್ತೂರು ಈ ರಸ್ತೆಯ ಮೂಲಕ ಬಸ್‌ ಸಂಚಾರ ಆರಂಭಿಸಲಿದೆ ಎಂದು ಭರವಸೆಯಿತ್ತರು.

Advertisement

ನಿರಾಸೆಗೊಂಡ ಜನತೆ
ರಾಜ್ಯ ಲೋಕೋಪಯೋಗಿ ಸಚಿವರು ಇಂದು ಆಲಂಕಾರಿನ ಮೂಲಕ ಶಾಂತಿಮೊಗರನ್ನು ಸಂಪರ್ಕಿಸಿ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸುಳ್ಯ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿಗರು ಹಾಗು ಸಾರ್ವಜನಿಕರು ಕುತೂಹಲದಿಂದ ಸಂಜೆವರೆಗೆ ಕಾಯುತ್ತಿದ್ದರು. ಇದಕ್ಕಾಗಿ ಸಚಿವರು ಸಾಗುವ ದಾರಿಯುದ್ದಕ್ಕೂ ಸ್ವಾಗತದ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಲೋಕೋಪಯೋಗಿ ಸಚಿವರು ಸ್ಥಳಕ್ಕಾಗಮಿಸಿದೆ ಇರುವುದು ಜನತೆಯನ್ನು ನಿರಾಸೆಗೊಳಿಸಿದೆ.

ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಸದಸ್ಯರು, ತಾಲೂಕು ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಗೈರುಹಾಜರಾಗಿರುವುದು ಎದ್ದು ಕಾಣುತ್ತಿತ್ತು. ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಡಾ| ರಘು, ಸತೀಶ್‌ ಕೆಡೆಂಜಿ, ಉಷಾ ಅಂಚನ್‌, ಸವಿತಾ ರಮೇಶ್‌, ಗಣೇಶ್‌ ಕೈಕುರೆ, ಪಿ.ಪಿ. ವರ್ಗೀಸ್‌ ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖಾ ಎಂಜಿನಿಯರ್‌ ಗೋಕುಲ್‌ದಾಸ್‌ ಸೇತುವೆಯ ಬಗ್ಗೆ ವಿವರಿಸಿ, ಸ್ವಾಗತಿಸಿದರು. ಅಸಿಸ್ಟಂಟ್‌ ಎಂಜಿನಿಯರ್‌ ಪ್ರಮೋದ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅನುದಾನ ಬಿಡುಗಡೆ 
ಜಿಲ್ಲಾಧಿಕಾರಿಗಳ ನೂತನ ಕಚೇರಿ ನಿರ್ಮಾಣಕ್ಕಾಗಿ ಮುಖ್ಯ ಮಂತ್ರಿಗಳು 41ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಸರಕಾರ ರಾಜ್ಯದ ಅಭಿವೃದ್ಧಿಯ
ಜತೆಗೆ ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಸಚಿವ ರೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next