Advertisement

ಮಾಸಾಂತ್ಯಕ್ಕೆ ತೋಳನ ಕೆರೆ ಅಣಿ

06:51 PM Aug 04, 2021 | Team Udayavani |

ಹುಬ್ಬಳ್ಳಿ: ಗೋಕುಲ ರಸ್ತೆ-ಶಿರೂರ ಪಾರ್ಕ್‌ ನಡುವೆ 32 ಎಕರೆ ವಿಶಾಲ ಜಾಗದಲ್ಲಿರುವ ತೋಳನ ಕೆರೆ ಆವರಣವನ್ನು ಅಂದಾಜು 20.26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಆಗಸ್ಟ್‌ ಅಂತ್ಯದೊಳಗೆ ಇದು ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಅಣಿಯಾಗಲಿದೆ. ಹು-ಧಾ ಸ್ಮಾರ್ಟ್‌ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದನ್ನು ಪಿಕ್‌ನಿಕ್‌ ಸ್ಪಾಟ್‌ ಆಗಿ ಪರಿವರ್ತಿಸಲಾಗುತ್ತಿದೆ.

Advertisement

ಕೆರೆಗೆ ಹರಿದುಬರುತ್ತಿದ್ದ ಸುತ್ತಮುತ್ತಲಿನ ಪ್ರದೇಶದ ತ್ಯಾಜ್ಯ ನೀರನ್ನು ತಡೆಗಟ್ಟಲಾಗಿದ್ದು, ಎಸ್‌ಟಿಪಿ ಪ್ಲಾಂಟ್‌ ನಿರ್ಮಿಸಲಾಗಿದೆ. ಕೆರೆಯ ಸುತ್ತಲಿನ ಆವರಣದ ಸುಮಾರು 14 ಎಕರೆ ಜಾಗದಲ್ಲಿ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಸ್ಪೋರ್ಟ್ಸ್  ಗಾರ್ಡನ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ ಇಲ್ಲಿ ಮಕ್ಕಳಿಗೆ ಎರಡು ಕಡೆ ಆಟದ ಸಾಮಗ್ರಿ ಹಾಗೂ ಸಾಮಾನ್ಯ ಓಪನ್‌ ಜಿಮ್‌ ಸೇರಿ 2ರಿಂದ 80 ವರ್ಷ ವಯೋಮಾನದವರು
ಉಪಯೋಗಿಸಬಹುದಾದ 56 ಬಗೆಯ ಆಟದ ಉಪಕರಣಗಳನ್ನು ಅಳವಡಿಸಲಾಗಿದೆ. ಬಾಲಿಯ ಓರ್ವ ಡಿಸೈನರ್‌ ಪರಿಕಲ್ಪನೆಯಂತೆ ಈ ಸ್ಪೋರ್ಟ್ಸ್ ಗಾರ್ಡನ್‌ ನಿರ್ಮಿಸಲಾಗಿದೆ. ಇಂತಹ ಸ್ಪೋರ್ಟ್ಸ್ ಫೋಕಸ್‌ ಹೊಂದಿದ ದೇಶದಲ್ಲೇ ಮೊಟ್ಟ ಮೊದಲ ಹಾಗೂ ಏಷ್ಯಾ ಖಂಡದಲ್ಲಿಯೇ ಎರಡನೇ ಸ್ಪೋರ್ಟ್ಸ್ ಗಾರ್ಡನ್‌ ಇದಾಗಲಿದೆ.

ಕಿಡಿಗೇಡಿಗಳು ಉದ್ಯಾನದಲ್ಲಿ ಅಳವಡಿಸಿದ್ದ ಆಟದ ಸಾಮಗ್ರಿಗಳನ್ನು ಹಾಳು ಮಾಡದಂತೆ ಹಾಗೂ ಇನ್ನಿತರೆ ಅನಗತ್ಯವಾದ ಚಟುವಟಿಕೆಗಳನ್ನು
ನಡೆಸದಂತೆ ಗಾರ್ಡನ್‌ ಸುತ್ತಲೂ 16 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಗೆ ಬಗೆಯ ಸಸ್ಯಗಳುಳ್ಳ ಸುಂದರವಾದ ಉದ್ಯಾನ, ಕಾಲುದಾರಿ
ಮಾರ್ಗದ ಅಕ್ಕಪಕ್ಕ ಹೂದೋಟ ಮತ್ತು ಹಸಿರು ಹುಲ್ಲಿನ ಹೊದಿಕೆ ನಿರ್ಮಿಸಲಾಗಿದೆ.

ಕೆರೆಯ ಸುತ್ತಮುತ್ತಲಿನ ರಮಣೀಯ ಸ್ಥಳ ವೀಕ್ಷಿಸಲು ಟವರ್‌ ಹಾಗೂ ಸಂಜೆ ಮ್ಯೂಸಿಕ್‌ ಕಾರ್ಯಕ್ರಮ ಆಯೋಜಿಸಲು ಓಪನ್‌ ಎಂಪಿ ಥೇಟರ್‌, ಫುಡ್‌ ಸ್ಟಾಲ್ಸ್‌, ಯೋಗ ಮತ್ತು ವಿಶ್ರಾಂತಿ ತಂಗುದಾಣಗಳು, ಸೈಕ್ಲಿಂಗ್‌ ಟ್ರ್ಯಾಕ್ ಕೂಡ ನಿರ್ಮಿಸಲಾಗಿದೆ. ಕೆರೆಯ ಪ್ರವೇಶ ದ್ವಾರ ಬಳಿ ಈಗಾಗಲೇ ಹೈಟೆಕ್‌ ಬೈಸಿಕಲ್‌ ನಿಲ್ದಾಣ ಸಹ ಸ್ಥಾಪಿಸಲಾಗಿದೆ. ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಕೆರೆಯು ಸುತ್ತಲೂ 150ಕ್ಕೂ ಅಧಿಕ ಆಕರ್ಷಕ ಅಲಂಕೃತ ವಿದ್ಯುತ್‌ ದೀಪದ ಕಂಬಗಳನ್ನು ಅಳವಡಿಸಲಾಗುತ್ತಿದ್ದು, ಇನ್ನು 10 ದಿನದೊಳಗೆ ಇದು ಪೂರ್ಣಗೊಳ್ಳಲಿದೆ

ಈಗಾಗಲೇ ಲ್ಯಾಂಡ್‌ ಸ್ಕೇಪ್‌ ಕಾಮಗಾರಿ ಮುಗಿದಿದ್ದು, ಪಾಥ್‌ ವೇ ಮತ್ತು ಪಾರ್ಕಿಂಗ್‌ ಸ್ಥಳದಲ್ಲಿ ಪೇವರ್ ಅಳವಡಿಸುವ ಹಾಗೂ ಬಾಸ್ಕೆಟ್‌
ಬಾಲ್‌ ಕೋರ್ಟ್‌ ನಿರ್ಮಿಸುವ ಕಾರ್ಯ ಬಾಕಿ ಉಳಿದಿದೆ. ಮಳೆಯಿಂದಾಗಿ ಈ ಕೆಲಸಗಳು ಸ್ವಲ್ಪ ವಿಳಂಬವಾಗಿದ್ದು, ಆಗಸ್ಟ್‌ ಅಂತ್ಯದೊಳಗೆ ಬಾಕಿ
ಉಳಿದಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮುಂದಾಗಿದ್ದಾರೆ. ತೋಳನಕೆರೆ ಪುನರ್‌ ಅಭಿವೃದ್ಧಿ ಕಾಮಗಾರಿಯು 2020ರ ಜೂನ್‌ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾಗಿದೆ. ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Advertisement

ತೋಳನಕೆರೆ 32 ಎಕರೆ ಪ್ರದೇಶವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಂದಾಜು 20.26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಲ್ಯಾಂಡ್‌ ಸ್ಕೇಪ್  ಕಾಮಗಾರಿ ಮುಗಿದಿದ್ದು, ಪಾಥ್‌ ವೇ ಮತ್ತು ಪಾರ್ಕಿಂಗ್‌ ಸ್ಥಳದಲ್ಲಿ ಪೇವರ್ ಅಳವಡಿಕೆ, ಬಾಸ್ಕೆಟ್‌ಬಾಲ್‌ ಕೋರ್ಟ್‌ ಕಾರ್ಯ ಬಾಕಿ ಉಳಿದಿದೆ. ಆಗಸ್ಟ್‌ ಅಂತ್ಯದೊಳಗೆ ಬಾಕಿ ಕೆಲಸ ಪೂರ್ಣಗೊಳಿಸಲಾಗುವುದು.
– ಚನ್ನಬಸವರಾಜ ಧರ್ಮಂತಿ, ಹು-ಧಾ ಸ್ಮಾರ್ಟ್‌ ಸಿಟಿ ಡಿಜಿಎಂ

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next