Advertisement

18 ಸಾವಿರ ರೂ. ವೇತನ ನಿಗದಿಗೆ ಆಗ್ರಹ

08:47 AM Feb 12, 2019 | |

ಬಳ್ಳಾರಿ: ಕನಿಷ್ಠ ವೇತನ ನಿಗದಿಪಡಿಸಬೇಕು. ಸಿ ಮತ್ತು ಡಿ ಗ್ರೂಪ್‌ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್‌ನ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಗಣನೆಗೆ ತೆಗೆದುಕೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಎರಡು ವರ್ಷಕ್ಕೊಮ್ಮೆ 500 ರೂ. ಹೆಚ್ಚಳ ಮಾಡುತ್ತಿವೆ. ಪರಿಣಾಮ ಪ್ರಸ್ತುತ ದಿನಗಳಲ್ಲಿ ಹತ್ತನೇ ತರಗತಿ ಮತ್ತು ಪದವೀಧರರೂ ಆಗಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಕನಿಷ್ಠ ವೇತನ ಮತ್ತು ಕಾನೂನು ಬದ್ಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಸಗುಡಿಸುವವರು, ಕೂಲಿ ಕಾರ್ಮಿಕರಿಗಿಂತಲೂ ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ವೇತನ ಹೆಚ್ಚಳ, ನಿವೃತ್ತಿ ವೇತನ ಸೇರಿ ಯಾವುದೇ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಅಲ್ಲದೆ, ಸ್ಥಳೀಯರು, ಫಲಾನುಭವಿಗಳು, ವಾರ್ಡ್‌ ಸದಸ್ಯರು, ಜನಪ್ರತಿನಿಧಿಗಳಿಂದ ನಿತ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಮೇಲೆ ಹಲ್ಲೆ, ಕಿರುಕುಳಗಳು ನಡೆಯುತ್ತಿದ್ದರೂ, ಯಾವುದೇ ವಿಚಾರಣೆ ನಡೆಯದೆ, ವಿಚಾರಣಾ ರಹಿತವಾಗಿ ಕಾರ್ಯಕರ್ತೆಯರನ್ನು ವಜಾಗೊಳಿಸುವ ಘಟನೆಗಳು ಹೆಚ್ಚುತ್ತಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಕಾರ್ಯಕರ್ತೆಯರು, ಸಹಾಯಕಿಯರು ಅತ್ಯಂತ ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಕನಿಷ್ಠ ವೇತನ 18000 ರೂ.ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಯಕರ್ತೆಯರು, ಸಹಾಯಕಿಯರನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸಿ ಮತ್ತು ಡಿ ಗ್ರೂಪ್‌ ನೌಕರರನ್ನಾಗಿ ಪರಿಗಣಿಸಬೇಕು. ನಿವೃತ್ತಿ ವೇತನ ಜಾರಿಗೊಳಿಸಬೇಕು. ಸೇವಾ ಹಿರಿತನ ಆಧಾರದ ಮೇಲೆ ಗೋವಾ ಸರ್ಕಾರದ ಮಾದರಿಯಲ್ಲಿ ಗೌರವಧನ ಹೆಚ್ಚಿಸಬೇಕು. ಇಎಸ್‌ಐ, ಭವಿಷ್ಯನಿಧಿ, ಸೇವಾ ಭದ್ರತೆ, ಗ್ರಾಚ್ಯುಟಿ ಸೇರಿ ಕಾನೂನು ಬದ್ಧ ಇರುವ ಸೌಲಭ್ಯ ಜಾರಿಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಎ.ಆರ್‌.ಎಂ.ಇಸ್ಮಾಯಿಲ್‌, ಫೆಡರೇಷನ್‌ನ ಅರ್ಕಾಣಿ, ರೇಣುಕಾ, ಪಿ.ಪದ್ಮಾವತಿ, ಸರಸ್ವತಿ, ಪಿ.ಕಲಾವತಿ, ಎಸ್‌.ರತ್ನಮ್ಮ, ಕೆ.ಎಲಿಜಬೆತ್‌, ಮಂಗಮ್ಮ ಸೇರಿದಂತೆ ಅಂಗನವಾಡಿಗಳ ಕಾರ್ಯಕರ್ತೆಯರು, ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next