Advertisement

ಭದ್ರತಾ ಲೋಪದ ಲಾಭ ಪಡೆದು 18 ಲಕ್ಷ ದೋಚಿದ ದುಷ್ಕರ್ಮಿಗಳು

12:09 PM Oct 31, 2017 | Team Udayavani |

ಬೆಂಗಳೂರು: ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳಿದ್ದ ಸೆಕ್ಯೂರ್‌ ವ್ಯಾಲೂ ಏಜೆನ್ಸಿ ಸಿಬ್ಬಂದಿ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ 18.50 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಜಾಲಹಳ್ಳಿಯ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯರಸ್ತೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

Advertisement

ಘಟನೆಯಲ್ಲಿ ಸೆಕ್ಯೂರ್‌ ವ್ಯಾಲೂ ಕಂಪನಿಯ ಸಿಬ್ಬಂದಿ ಸಾಗರ್‌ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪೀಣ್ಯ ಸುತ್ತಮುತ್ತಲ ಐಸಿಐಸಿಐ ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸಲು ಮೋಹನ್‌, ಸಾಗರ್‌ ಮತ್ತು ಕಾರಿನ ಚಾಲಕ ಸೇರಿ ಏಜೆನ್ಸಿಯ ಮೂವರು ಸಿಬ್ಬಂದಿ 1.26 ಕೋಟಿ ರೂ. ಹಣ ತೆಗೆದುಕೊಂಡು ಹೋಗಿದ್ದರು.

ಈ ವೇಳೆ ಪೀಣ್ಯದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಐಸಿಐಸಿಐ ಎಟಿಎಂ ಕೇಂದ್ರಕ್ಕೆ ಹಣ ತುಂಬಲು18.50 ಲಕ್ಷ ರೂ. ಇದ್ದ ಬ್ಯಾಗ್‌ನೊಂದಿಗೆ ಸಾಗರ್‌ ಮತ್ತು ಮೋಹನ್‌ ವಾಹನದಿಂದ ಕೆಳಗಿಳಿದಿದ್ದಾರೆ. ಈ ವೇಳೆ ಮೋಹನ್‌ ಎಟಿಎಂ ಕೇಂದ್ರಕ್ಕೆ ಹೋಗಿ ಎಟಿಎಂ ಯಂತ್ರ ಪರಿಶೀಲಿಸುತ್ತಿದ್ದು, ಸಾಗರ್‌ ಬ್ಯಾಗ್‌ ಹಿಡಿದು ಹೊರಗೆ ನಿಂತಿದ್ದರು.

ಈ ವೇಳೆ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು, ಸಾಗರ್‌ ಬಳಿಯಿದ್ದ ಹಣದ ಬ್ಯಾಗ್‌ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಸಾಗರ್‌ ಪ್ರತಿರೋಧ ವ್ಯಕ್ತಪಡಿಸಿದಾಗ ಒಬ್ಬ ದುಷ್ಕರ್ಮಿ, ಸಾಗರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಬ್ಯಾಗ್‌ ಕಸಿದುಕೊಂಡಿದ್ದಾನೆ. ಕೂಡಲೆ ಎಟಿಎಂ ಕೇಂದ್ರದಲ್ಲಿದ್ದ ಮೋಹನ್‌ ಮತ್ತು ಕಾರಿನ ಚಾಲಕ ನೆರವಿಗೆ ಬಂದಿದ್ದಾರೆ. ಮಾರಕಾಸ್ತ್ರ ತೋರಿಸಿ ಅವರನ್ನೂ ಬೆದರಿಸಿದ ದುಷ್ಕರ್ಮಿಗಳು ಹಣದ ಬ್ಯಾಗ್‌ ಸಮೇತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವನಿಯೋಜಿತ ಕೃತ್ಯ
ದರೋಡೆಯ ರೂಪುರೇಷೆ ಗಮನಿಸಿದರೆ ಪೂರ್ವ ನಿಯೋಜಿತ ಕೃತ್ಯ ಎನಿಸುತ್ತಿದೆ. ಆರೋಪಿಗಳು ಏಜೆನ್ಸಿಯ ಸಿಬ್ಬಂದಿ ಬಂದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಅಲ್ಲದೆ ಈ ಎಟಿಎಂ ಮತ್ತು ಏಜೆನ್ಸಿಯ ವಾಹನದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ ಎಂಬ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿದ್ದಾರೆ. ತಮ್ಮ ಗುರುತು ಪತ್ತೆಯಾಗಬಾರದೆಂದು ಮುಸುಕು ಧರಿಸಿ ದರೋಡೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದ್ದಾರೆ.

Advertisement

ಹಣ, ಎಟಿಎಂಗೆ ಸೆಕ್ಯೂರಿಟಿ ಗಾರ್ಡ್‌ ಇಲ್ಲ
ಸಾಮಾನ್ಯವಾಗಿ ಎಟಿಎಂ ಕೇಂದ್ರಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಗಳು ಹಣ ತುಂಬಲು ಹೊರಡವ ಸಿಬ್ಬಂದಿ ಜತೆ ಒಬ್ಬ ಗನ್‌ಮ್ಯಾನ್‌ ಅನ್ನು ನೇಮಿಸುತ್ತವೆ. ಅಲ್ಲದೆ ನಗರ ಪೊಲೀಸ್‌ ಆಯುಕ್ತರ ಸೂಚನೆಯಂತೆ ಎಲ್ಲ ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್‌ ನೇಮಿಸುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಸೆಕ್ಯೂರ್‌ ವ್ಯಾಲ್ಯೂ ಸಿಬ್ಬಂದಿ ಜತೆ ಯಾವುದೇ ಗನ್‌ಮ್ಯಾನ್‌ ಇರಲಿಲ್ಲ.

ಜತೆಗೆ ಎಟಿಎಂ ಕೇಂದ್ರಕ್ಕೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಈ ಹಿನ್ನೆಲೆಯಲ್ಲಿ ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಪೈಕಿ ಒಬ್ಟಾತ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಅಥವಾ ಏಜೆನ್ಸಿ ಅಥವಾ ಬ್ಯಾಂಕ್‌ನ ಸಿಬ್ಬಂದಿ ಸಂಚು ರೂಪಿಸಿರಬಹುದು ಎಂದು ಪೊಲೀಸರು ಶಂಕೆವ್ಯಕ್ತಪಡಿಸಿದ್ದಾರೆ.

ಆಯುಕ್ತರ ಸೂಚನೆಗೂ ಕಿಮ್ಮತ್ತಿಲ್ಲ
ಈ ಹಿಂದೆ ನಗರದ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಇತ್ತೀಚೆಗೆ ಕೆಲ ಠಾಣೆಗಳ ವ್ಯಾಪ್ತಿಯ ಎಟಿಎಂ ಕೇಂದ್ರಗಳಲ್ಲಿ ಇದೇ ಮಾದರಿಯ ದರೋಡೆ ನಡೆದಿತ್ತು. ಈ ಘಟನೆಗಳಿಂದ ಎಚ್ಚೆತ್ತ ನಗರದ ಪೊಲೀಸರು ಕೂಡಲೇ ಬ್ಯಾಂಕ್‌ ಮುಖ್ಯಸ್ಥರ ಜತೆ ಸಭೆ ನಡೆಸಿ ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್‌ ನೇಮಕ ಮಾಡುವಂತೆ ಸೂಚಿಸಿದ್ದರು. ಆದರೆ, ನಗರದ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಈಗಲೂ ಭದ್ರತಾ ಸಿಬ್ಬಂದಿ ಇಲ್ಲ.

ಆರೋಪಿಗಳ ಪತ್ತೆಗಾಗಿ ಆರ್‌ಎಂಸಿ ಯಾರ್ಡ್‌ ಹಾಗೂ ಬಾಗಲಗುಂಟೆ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪ್ರತ್ಯೇಕ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ.
-ಚೇತನ್‌ ಸಿಂಗ್‌ ರಾಥೋಡ್‌, ಉತ್ತರ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next