ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಪೂರಕವಾಗಿ ವಿವಿಧ ಕೇಂದ್ರಗಳ ಸ್ಥಾಪನೆ ಹಾಗೂ ಮೂಲಸೌರ್ಕಗಳ ಅಭಿವೃದ್ಧಿ ಜತೆಗೆ ಅಗತ್ಯ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಹೈಯರ್ ಎಜುಕೇಷನ್ ಫಂಡಿಂಗ್ ಅಸಿಸ್ಟೆಂಸ್ (ಎಚ್ ಇಎಫ್‌ಎ) ಯೋಜನೆಯಡಿ 165 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹಾಗೂ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ
ಹೇಳಿದರು.
ಶುಕ್ರವಾರ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇಂದ್ರ ಸರ್ಕಾರ ಅಧೀನದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವ ರಾಜಸ್ಥಾನ, ಕರ್ನಾಟಕದ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಹೊಂದಿರುವ ವಿಶ್ವವಿದ್ಯಾಲಯಗಳು ಎಂದು ಭಾವಿಸಿ ಪ್ರೊಜೆಕ್ಟ್ ಮೋಡ್‌ದಿಂದ ವಾರ್ಷಿಕ ಮೋಡ್‌ಗೆ ಬದಲಾಯಿಸಿದ ಪರಿಣಾಮ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ಕಡಿಮೆಯಾಗಲಿದೆ. ಇದಕ್ಕೆ ಪರ್ಯಾಯವಾಗಿ ವಿಶ್ವವಿದ್ಯಾಲಯದ 165 ಕೋಟಿ ರೂ. ಪ್ರಸ್ತಾವಿತ ಯೋಜನೆ ಮೊತ್ತವನ್ನು ಕೇಂದ್ರ ಸರ್ಕಾರವು ಕೆನರಾ ಬ್ಯಾಂಕಿನ ಮೂಲಕ ಸಾಲ ಪಡೆದು ತದನಂತರ ಬ್ಯಾಂಕಿಗೆ ಮರು ಭರಿಕೆ ಮಾಡುವಂತೆ ನಿರ್ದೇಶಿಸಿ ಹಿಫಾ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
371(ಜೆ)ನೇ ಕಲಂ ವಿಶೇಷ ಸ್ಥಾನಮಾನ ಹೊಂದಿರುವ ಹೈದ್ರಾಬಾದ ಕರ್ನಾಟಕದಲ್ಲಿ ಈ ವಿಶ್ವವಿದ್ಯಾಲಯ ಇರುವುದರಿಂದ ಮೊದಲಿನಂತೆಯೆ ಪ್ರೊಜೆಕ್ಟ್ ಮೋಡ್‌ಗೆ ತರುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರನ್ನು ಕೋರಲಾಗುವುದು. ಹಿಫಾ ಯೋಜನೆಯಡಿ ವಿಶ್ವವಿದ್ಯಾಲಯದ ಆವರಣದಲ್ಲಿ 11.21 ಕೋಟಿ ರೂ. ವೆಚ್ಚದಲ್ಲಿ ಜ್ಞಾನ ಭವನ ಸಂಕೀರ್ಣ, ತಲಾ ಒಂಭತ್ತು ಕೋಟಿ ರೂ. ವೆಚ್ಚದಲ್ಲಿ ಸೋಫೆಸಿಕೇಟೆಡ್ ಇನ್ಸ್‌ಟ್ರಾಮೆಂಶನ್ ಸೆಂಟರ್ ಹಾಗೂ ಪರೀಕ್ಷಾ ಕೇಂದ್ರ ನಿರ್ಮಾಣ ಇತರ ಅಭಿವೃದ್ಧಿ ಕಾಮಗಾರಿಗಳು ಒಳಗೊಂಡಿವೆ ಎಂದು ತಿಳಿಸಿದರು.
ಹುದ್ದೆಗಳ ನೇಮಕಾತಿ: ಅಲಹಾಬಾದ ಉತ್ಛ ನ್ಯಾಯಾಲಯದ ತೀರ್ಪಿನ ಅನ್ವಯ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕೇಡರ್ ವಾರು ಮೀಸಲಾತಿ ಪರಿಗಣಿಸದೆ ವಿಭಾಗವಾರು ಮೀಸಲಾತಿ ಪರಿಗಣಿಸಬೇಕು ಎಂದು ಇತ್ತೀಚೆಗೆ ಆದೇಶ ಹೊರಡಿಸಿ ತದನಂತರ ಈ ಬಗ್ಗೆ ವ್ಯಾಪಕ ಆಕ್ಷೇಪಣೆ ಮತ್ತು ಸಂಸತ್ತಿನಲ್ಲಿಯೂ ಚರ್ಚೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ನೇಮಕಾತಿ ಆದೇಶಕ್ಕೆ ತಡೆ ಹಿಡಿಯಲಾಗಿದೆ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಕಾರ್ಯಕ್ಕೆ ಹಿನ್ನೆಡೆಯಾಗಿದ್ದು, ಈ ವರ್ಗದ ಹಿತಕಾಯಲು ಮೊದಲಿನ ಮೀಸಲಾತಿ ಪದ್ಧತಿಯನ್ನೇ ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ 20 ರಾಜ್ಯಗಳ ಸುಮಾರು 1700 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಇದರಲ್ಲಿ ಸುಮಾರು 300-400 ಸಂಖ್ಯೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿದ್ದಾರೆ.
371ಜೆ ಅನ್ವಯ ಹೈ.ಕ. ಭಾಗದ ವಿದ್ಯಾರ್ಥಿಗಳಿಗೆ ಶೇ.8ರ ಮೀಸಲಾತಿಯಲ್ಲಿ ಪ್ರವೇಶಾತಿ ಅವಕಾಶ ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದ್ದು, ಪ್ರವೇಶದ್ವಾರದಲ್ಲಿ ತಪಾಸಣೆ ನಡೆಸಿಯೇ ಆವರಣಕ್ಕೆ ಪ್ರವೇಶ ನೀಡಲಾಗುತ್ತಿದೆ. ಪ್ರಮುಖ ಕಟ್ಟಡಗಳಿಗೆ, ವಸತಿ ನಿಲಯಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದಲ್ಲದೆ ಸುಮಾರು 25 ಜನ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸೇನಾ ಸಿಬ್ಬಂದಿಯಿಂದ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗುವುದು ಎಂದರು. ಸಮಕುಲಪತಿ ಪ್ರೊ| ಜಿ.ಆರ್. ನಾಯಕ, ರಿಜಿಸ್ಟ್ರಾರ್ ಪ್ರೊ| ಮಲ್ಲಿಕಾರ್ಜುನ
ವಿ. ಅಳಗವಾಡಿ ಹಾಗೂ ಅಧಿಕಾರಿಗಳು ಇದ್ದರು.