ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿ ಹಾಗೂ ರಿಯಾಯಿತಿ ದರದ ಮಾರಾಟದ ಹಿನ್ನೆಲೆ ಯಲ್ಲಿ ಖಾದಿ ಎಂಪೋರಿಯಂ ಮಂಗಳವಾರದಿಂದ ಆರಂಭಿಸಿರುವ ರಿಯಾಯ್ತಿ ಮಾರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನವೇ 16 ಲಕ್ಷ ರೂ. ವಹಿವಾಟು ನಡೆದಿದೆ.
ಗಾಂಧಿ ಭವನದ ಆವರಣದಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಸಂಬಂಧಪಟ್ಟ ಖಾದಿ ಎಂಪೋರಿಯಂನಲ್ಲಿ ಗಾಂಧಿ ಜಯಂತಿಯಂದು ಭಾರಿ ವ್ಯಾಪಾರ- ವಹಿವಾಟು ನಡೆದಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 50ರಿಂದ 60 ಸಾವಿರ ರೂ. ನಷ್ಟಿರುತ್ತಿದ್ದ ವ್ಯಾಪಾರ ಮಂಗಳವಾರ 16 ಲಕ್ಷ ರೂ. ದಾಟಿತ್ತು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಅಥವಾ ಇತರೆ ರಾಷ್ಟ್ರೀಯ ಹಬ್ಬಗಳಂದು ಖಾದಿ ಮತ್ತು ಗ್ರಾಮೋದ್ಯೋಗದ ವಸ್ತ್ರ, ವಸ್ತುಗಳ ವಹಿವಾಟು ಸುಮಾರು 70ರಿಂದ 80 ಸಾವಿರ ರೂ.ದಷ್ಟಿರುತ್ತಿತ್ತು. ಆದರೆ ಗಾಂಧಿ ಜಯಂತಿ ಹಾಗೂ ರಿಯಾಯಿತಿ ಮಾರಾಟದ ಹಿನ್ನೆಲೆಯಲ್ಲಿ ಈ ವರ್ಷ ಒಟ್ಟು 16,00,177.45 ರೂ.ನಷ್ಟು ವ್ಯಾಪಾರವಾಗಿದೆ. ಕಳೆದ ವರ್ಷ
ಗಾಂಧಿ ಜಯಂತಿಯಂದು 12.48 ಲಕ್ಷ ರೂ. ವಹಿವಾಟು ನಡೆದಿತ್ತು ಎನ್ನುತ್ತಾರೆ ಗಾಂಧಿ ಭವನದ ಖಾದಿ ಎಂಪೋರಿಯಂ ಮಳಿಗೆಯ ಸಹಾಯಕ ವ್ಯವಸ್ಥಾಪಕಿ ವಿಜಯಕುಮಾರಿ.
ಎಂದಿನಂತೆ ಈ ಬಾರಿಯೂ ಗಾಂಧಿ ಜಯಂತಿ ಅಂಗವಾಗಿ ಒಟ್ಟು 55 ದಿನಗಳ ಕಾಲ ರಿಯಾಯಿತಿ ದರದ ಮಾರಾಟ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಅ.2ರಿಂದ ಡಿ.7ರವರೆಗೆ ನಡೆದ ರಿಯಾಯಿತಿ ಮಾರಾಟದಲ್ಲಿ ವಹಿವಾಟು ಒಟ್ಟು 2.40 ಕೋಟಿ ರೂ. ಮೀರಿತ್ತು. ಈ ಬಾರಿ ಎರಡುವರೆ ಕೋಟಿ ರೂ. ಗಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಯುವ ಪೀಳಿಗೆ ಹಾಗೂ ಹಿರಿಯ ನಾಗರಿಕರು ಖಾದಿ ಬಳಕೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅದರಲ್ಲೂ ಕಾರ್ಪೋರೇಟ್ ಕಂಪೆನಿಗಳ ಉದ್ಯೋಗಿಗಳು ಮತ್ತು ಕಾಲೇಜು ಯುವತಿಯರು ಖಾದಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆಗಳತ್ತ ಚಿತ್ತ ಹರಿಸುತ್ತಿರುವ ಯುವ ಪೀಳಿಗೆ ಶರ್ಟ್, ಸ್ಕರ್ಟ್, ಟಾಪ್‌ಗ್ಳ ಕಡೆಗೆ ಹೆಚ್ಚು ಆಕರ್ಷಿತವಾಗುತ್ತಿದೆ. ಮಸ್ಲಿನ್ ಖಾದಿ ಶರ್ಟ್‌ಗಳು, ಜುಬ್ಟಾ ಸೆಟ್, ಚೂಡಿದಾರ್ ಸೆಟ್, ಖಾದಿ ಸೀರೆಗಳು, ಕೋಲ್ಕತ್ತಾ ಮತ್ತು ಒಡಿಶಾದ ಖಾದಿ ಉಡುಪುಗಳಿಗೆ ಭಾರಿ ಬೇಡಿಕೆ ಇದೆ. ಹುಬ್ಬಳ್ಳಿ ಸೀರೆಗಳು ಈ ಸಮಯದಲ್ಲಿ ಹೆಚ್ಚಾಗಿ ಮಾರಾಟವಾಗಲಿವೆ ಎನ್ನುತ್ತಾರೆ ಸಿಬ್ಬಂದಿ.
ನಾನಾ ಬಗೆಯ ವಸ್ತ್ರ ಮಾರಾಟ ಗಾಂಧಿ ಭವನದ ಬಳಿಯ ಸರ್ಕಾರಿ ಸ್ವಾಮ್ಯದ ಖಾದಿ ಎಂಪೋರಿಯಂನಲ್ಲಿ ಹತ್ತಿ (ಕಾಟನ್) ಖಾದಿ 9,66,702.85 ರೂ., ಉಲನ್ ಖಾದಿ 7,715 ರೂ., ರೇಷ್ಮೆ ಖಾದಿ 4,22,007 ರೂ., ಕರಕುಶಲ ವಸ್ತುಗಳು 16,870 ರೂ., ಚರ್ಮದ ಉತ್ಪನ್ನಗಳು 14,922, ಪಾಲಿಸ್ಟರ್ ವಸ್ತ್ರಗಳು 1,00,286 ರೂ.ನಷ್ಟು ವ್ಯಾಪಾರ ವಹಿವಾಟು ನಡೆದಿದೆ.
ಡಿ.7ರವರೆಗೆ ರಿಯಾಯಿತಿ ಖಾದಿ ಗ್ರಾಮೋದ್ಯೋಗ ಮಂಡಳಿಗೆ ಸಂಬಂಧಿಸಿದ ಮಳಿಗೆಗಳು ಹಾಗೂ ಖಾದಿ ಎಂಪೋರಿಯಂನಲ್ಲಿ ಡಿ.7ರವರೆಗೆ ಖಾದಿ ವಸ್ತ್ರಗಳ ಮೇಲೆ ಶೇ.35ರಷ್ಟು ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೆ ಖಾದಿ ಎಂಪೋರಿಯಂ ಅಕ್ಟೋಬರ್‌ನಲ್ಲಿ ನಾಲ್ಕು ಭಾನುವಾರಗಳು ತೆರೆದಿರಲಿದೆ.
ಶ್ರುತಿ ಮಲೆನಾಡತಿ