ಬೆಂಗಳೂರು: 2018-19ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಹಾಗೂ ಸರ್ಕಾರಿ ಶಾಲೆಗಳಲ್ಲಿ 4ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು ಮತ್ತು 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ದಿನಚರಿಗಳನ್ನು 152 ಕೋಟಿ ರೂ. ವೆಚ್ಚದಲ್ಲಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾ ಗಿದೆ ಎಂದು ಸಭೆ ಬಳಿಕ ಸಂಸದೀಯ ವ್ಯವಹಾರ ಸಚಿವ ಟಿ.ಬಿ ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದೇ ರೀತಿ “ಕರ್ನಾಟಕ ರಾಜ್ಯ ಸೂಕ್ಷ್ಮ ನೀರಾವರಿ ನೀತಿ-2017’ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 2015-16ನೇ ಸಾಲಿನ ಬಜೆಟ್‌ನಲ್ಲಿ ಸೂಕ್ಷ್ಮ ನೀರಾವರಿ ನೀತಿ ಘೋಷಿಸಲಾಗಿತ್ತು. ಅದರಂತೆ 14 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಅಳವಡಿಸಿ ಅದಕ್ಕೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಈಗ ಇನ್ನೂ 18ಲಕ್ಷ ಹೆಕ್ಟೇರ್ ಪ್ರದೇಶವನ್ನು 5 ವರ್ಷದ ಕಾಲಮಿತಿ ಅವಧಿಯೊಳಗೆ ಸೂಕ್ಷ್ಮ ನೀರಾವರಿ ಅಳವಡಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದ್ದು, ಆಕ್ಷೇಪಣೆ ತಿದ್ದುಪಡಿ ಬಳಿಕ ಜಾರಿಗೆ ತರಲಾಗುತ್ತದೆ. ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳಿಗೆ 19.77 ಕೋಟಿ ರೂ. ಅಂದಾಜಿನಲ್ಲಿ ಎರಡು ಹಂತದ ಕಾಟ್(ಮಂಚ) ಖರೀದಿಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಡಿ 418 ಕಿ.ಮೀ ಉದ್ದದ ರಸ್ತೆಗೆ ಬೇಕಾಗಿರುವ 1,361 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳ ಮೂಲಕ ನೇರ ಖರೀದಿಗೆ ಅವಕಾಶ ನೀಡಲಾಗಿದೆ. ನಬಾರ್ಡ್ ನೆರವಿನ ಆರ್‌ಐಡಿಎಫ್-23 ಯೋಜನೆಯಡಿಯಲ್ಲಿ ನುಮೋದನೆಯಾಗಿರುವ ಒಟ್ಟು 31 ಆಸ್ಪತ್ರೆ ಕಟ್ಟಡಗಳ 104.11 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಹಣ ಬಿಡುಗಡೆಗೆ ಒಪ್ಪಿಗೆ ಕೇಂದ್ರ ಸರ್ಕಾರವು ಮೂರನೇ ಕಂತಿನಲ್ಲಿ 36 ಲಕ್ಷ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ. ರೈತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರತಿ ಕ್ವಿಂಟಾಲ್ 5,450 ರೂ. ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 550 ರೂ.ಗಳನ್ನು ನೀಡುತ್ತಿದೆ. ಇದಕ್ಕಾಗಿ ಮೂರನೇ ಕಂತಿನ ಖರೀದಿಗೆ ರಾಜ್ಯ ಸರ್ಕಾರ ಕೊಡಬೇಕಿರುವ 550 ರೂ. ಪಾವತಿಗೆ ಆವರ್ತನಿಧಿಯಿಂದ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.