ಧಾರವಾಡ: ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ, ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ಸರ್ಕಾರ 150 ಕೋಟಿ ರೂ. ಮೀಸಲಿರಿಸಿದ್ದು,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ ಸ್ಥಾಪಿಸಿದೆ ಎಂದು ಅಭಿವೃದ್ಧಿ ಕೋಶದ ರಾಜ್ಯ ನೋಡಲ್ ಅಧಿಕಾರಿ ಡಾ| ಬಾಲಗುರುಮೂರ್ತಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯದ ಅಭಿವೃದ್ದಿಗಾಗಿ ಉಚಿತ ನಿವೇಶನ, ಮೂಲಸೌಕರ್ಯ ಪೂರೈಕೆ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸಮುದಾಯ ಭವನ, ಕೌಶಲಾಭಿವೃದ್ಧಿ ತರಬೇತಿ, ಮಹಿಳಾ ಸ್ವ-ಸಹಾಯ ಸಂಘಗಳಿಗೆ ಅನುದಾನ,
ವ್ಯಾಪಾರ ಸೇವೆ ಮತ್ತು ಉತ್ಪಾದನಾ ಘಟಕಗಳಿಗೆ ಮತ್ತು ಸಮುದಾಯದ ಸಂಘ-ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಸೂಕ್ಷ್ಮ-ಅತಿಸೂಕ್ಷ್ಮ ಸಮುದಾಯ ದಲ್ಲಿ ಶಾಲೆಯನ್ನು ಬಿಟ್ಟವರೆ ಹೆಚ್ಚಾಗಿರುತ್ತಾರೆ.
ಅವರಿಗೆ ಮರಳಿ ಶಾಲಾ ಪ್ರವೇಶ ಅಥವಾ ನೇರ ಪ್ರವೇಶ, ಪ್ರಮಾಣ ಪತ್ರ ಹಾಗೂ ಇತರೆ ಪ್ರಮಾಣ ಪತ್ರಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ಪೂರೈಸಬೇಕು. ಅಲೆಮಾರಿ ಜನಾಂಗದವರು ಒಂದೇ ಕಡೆ ನೆಲೆಸದಿದ್ದುದರಿಂದ ದಾಖಲಾತಿಗಳು ಲಭ್ಯತೆ ಇರುವುದಿಲ್ಲ ಎಂದರು.
ಜಿಲ್ಲೆಯಲ್ಲಿ ದಕ್ಕಲ, ಬಡಗ ಜಂಗಮ, ಸಿಳ್ಳಿಕ್ಯಾತರು, ಚೆನ್ನದಾಸರ, ಸುಡಗಾಡಸಿದ್ದರು, ಗಂಟುಚೋರರು ಹಾಗೆ 49 ಸಮುದಾಯಗಳು ಅಲೆಮಾರಿ-ಅರೆ ಅಲೆಮಾರಿ ಸೂಕ್ಷ್ಮ ಅತಿಸೂಕ್ಷ್ಮ ಸಮುದಾಯದಲ್ಲಿ ಸೇರಿವೆ. ಅವರೆಲ್ಲರ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ ಆಗಬೇಕಾಗಿದ್ದು, ಪ್ರತಿ ತಾಲೂಕುಗಳಲ್ಲಿ ಕುಟುಂಬಸ್ಥರ ಹೆಸರು ಡಾಟಾ ಎಂಟ್ರಿ ಮಾಡಬೇಕು. ಅವರಿಗೆ ವಸತಿಗೆ ನಿವೇಶನಕ್ಕಾಗಿ ಭೂಮಿ ಆಯ್ಕೆ ಮಾಡಿಕೊಳ್ಳಬೇಕು.
ಡಾ| ಬಿ.ಆರ್. ಅಂಬೇಡ್ಕರ್ ನಿಗಮವು ಭೂಮಿ ಖರೀದಿಸಲಿದೆ. ಅಲ್ಲದೆ ಅಭಿವೃದ್ಧಿ ಕೋಶ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಲು ಸಹಾಯಧನ ನೀಡಲಿದೆ ಎಂದರು. ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ನವೀನ ಸಿಂತ್ರೆ ಸ್ವಾಗತಿಸಿದರು. ಜಿಪಂ ಸಿಇಒ ಸ್ನೇಹಲ್ ರಾಯಮಾನೆ, ಹುಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ ಸೇರಿದಂತೆ ಅಲೆಮಾರಿ ಜನಾಂಗದ ಹಿರಿಯರು ಭಾಗವಹಿಸಿದ್ದರು.