Advertisement

15 ಕೋಟಿ ರೂ. ವೆಚ್ಚದ 130 ಮೀ. ಜೆಟ್ಟಿ ನಿರ್ಮಾಣ: ಸಚಿವ ಮಹಾದೇವಪ್ಪ

11:12 AM Mar 08, 2017 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈಗಾಗಲೇ 4.9 ಕೋಟಿ ರೂ. ವೆಚ್ಚದಲ್ಲಿ 80 ಮೀಟರ್‌ ಜೆಟ್ಟಿ ನಿರ್ಮಾಣ ಮಾಡಲಾಗಿದೆ. ಮತ್ತೆ 130 ಮೀ. ಜೆಟ್ಟಿ ನಿರ್ಮಾಣಕ್ಕೆ 15 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಂದರು ಮತ್ತು ಲೋಕೋಪಯೋಗಿ ಸಚಿವ ಡಾ| ಎಚ್‌. ಸಿ. ಮಹಾದೇವಪ್ಪ ಹೇಳಿದರು.

Advertisement

ಅವರು ಮಂಗಳವಾರ ಮಲ್ಪೆ ಬಂದರು ಮತ್ತು ಮಲ್ಪೆ ಬೀಚ್‌ ಬಳಿಯಲ್ಲಿ ಕಡಲ್ಕೊರೆತ ತಡೆಗೆ ಕೈಗೊಂಡಿರುವ ಕಾಮಗಾರಿಯನ್ನು ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

ಶಾಶ್ವತ ತಡೆಗೋಡೆ 350 ಕೋ.ರೂ. 

ಜಿಲ್ಲೆಯಲ್ಲಿ ಕಡಲು ಕೊರೆತದಿಂದ ಸಮುದ್ರ ತೀರ ರಕ್ಷಣೆಗಾಗಿ ಈಗಾಗಲೇ 10.45 ಕೋಟಿ ರೂ. ವೆಚ್ಚದಲ್ಲಿ 1,154 ಮೀಟರ್‌ ಶಾಶ್ವತ ಕಾಮಗಾರಿಯನ್ನು ಮಾಡಲಾಗಿದೆ. ಎಡಿಬಿ ಯೋಜನೆಯಡಿ ಜಿಲ್ಲೆಯಲ್ಲಿ ಕಡಲುಕೊರೆತ ಶಾಶ್ವತ ತಡೆಗಾಗಿ 350 ಕೋಟಿ ರೂ. ವಿನಿಯೋಗಿಸಲಾಗುವುದು ಎಂದರು. ಯುಪಿಎ ಸರಕಾರ 2011ರಲ್ಲಿ ಕಡಲು ಕೊರೆತಕ್ಕೆ ಶಾಶ್ವತ ಕಾಮಗಾರಿ ನಡೆಸಲು ಎಡಿಬಿ ಯೋಜನೆಯಲ್ಲಿ ರಾಜ್ಯಕ್ಕೆ 911 ಕೋಟಿ ರೂ. ಮಂಜೂರು ಮಾಡಿತ್ತು. ಮೊದಲ ಹಂತದಲ್ಲಿ ದ.ಕ. ಜಿಲ್ಲೆಯಲ್ಲಿ ಕಾಮಗಾರಿ ನಡೆಸಿದರೆ, ಎರಡನೇ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ತಿಳಿಸಿದರು.

79.60 ಕೋಟಿ ರೂ. ವೆಚ್ಚದಲ್ಲಿ ತೆಂಕ ಎರ್ಮಾಳು 4.5 ಮೀ., 99.55 ಕೋಟಿ ರೂ. ವೆಚ್ಚದಲ್ಲಿ ಉದ್ಯಾವರ 5 ಕಿ.ಮೀ., 75.88 ಕೋಟಿ ರೂ. ವೆಚ್ಚದಲ್ಲಿ ಕೋಡಿ ಬೆಂಗ್ರೆಯ 4.5 ಕಿ.ಮೀ., ಕೋಡಿಕನ್ಯಾನ 1ಕಿ.ಮೀ., 92.23 ಕೋಟಿ ರೂ. ವೆಚ್ಚದಲ್ಲಿ ಮರವಂತೆ 3.5 ಕಿ.ಮೀ. ಸಮುದ್ರತೀರದ ರಕ್ಷಣೆಗಾಗಿ ಶಾಶ್ವತ ತಡೆಗೋಡೆ ಕಾಮಗಾರಿಗಳು ನಡೆಯಲಿವೆ ಎಂದರು.

Advertisement

ಪ್ರಸ್ತುತ ತೆಂಕ ಎರ್ಮಾಳು, ಬಡಾ ಎರ್ಮಾಳು, ತೊಟ್ಟಂ, ಉದ್ಯಾವರ ಪಡುಕರೆ, ಕಾಪು, ಕುಂದಾಪುರ ಕೋಡಿ, ಮಣೂರು ಪಡುಕರೆ, ಕಿರಿಮಂಜೇಶ್ವರ, ಶಿರೂರು ಪ್ರದೇಶಗಳಲ್ಲಿ ತಲಾ 1 ಕೋಟಿ ರೂ., ತೆಂಕನಿಡಿಯೂರಿನಲ್ಲಿ 1.50 ಕೋಟಿ ರೂ. ಹಾಗೂ ಶಿರೂರು ದೊಂಬೆಯಲ್ಲಿ 4.99 ಕೋಟಿ ರೂ. ವೆಚ್ಚದಲ್ಲಿ 470 ಮೀ. ತಡೆಗೋಡೆ ನಿರ್ಮಾಣ ಕಾಮಗಾರಿ ನಡೆದಿದೆ. ಕಾಪುವಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಈ ಹಿಂದೆ ತಡೆಗೋಡೆಯ ಅಗಲ 26 ಮೀ. ಇತ್ತು. ಆದರೆ ಪ್ರಸ್ತುತ ಅದನ್ನು 13 ಮೀ. ಇಳಿಸಲಾಗಿದೆ. ಇದರಿಂದ ಆರ್ಥಿಕ ಹಾಗೂ ಸಮಯದ ಉಳಿತಾಯವಾಗಿದೆ. ಹೆಚ್ಚು ಬಾಳಿಕೆಯೂ ಬರುತ್ತಿದೆ ಎಂದು ಅವರು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾಯದರ್ಶಿ ರಮೇಶ್‌, ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್‌ ಸ್ವಾಮಿ, ಬಂದರು ಇಲಾಖಾ ಅಧಿಕಾರಿಗಳಾದ ಕೆ.ಎಸ್‌. ಜಂಬಾಳೆ, ಕೆ.ಆರ್‌. ದಯಾನಂದ್‌, ಎಸ್‌. ನಾಗರಾಜ್‌, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಕಾಂಗ್ರೆಸ್‌ ಮುಖಂಡರಾದ ಕೇಶವ ಎಂ. ಕೋಟ್ಯಾನ್‌, ಗೋಪಾಲಕೃಷ್ಣ ಶೆಟ್ಟಿ, ಪ್ರಶಾಂತ್‌ ಪೂಜಾರಿ, ಸುಜಯ ಪೂಜಾರಿ, ಸ್ಟೀವನ್‌ ಅಮ್ಮನ್ನ ಮೊದಲಾದವರು ಉಪಸ್ಥಿತರಿದ್ದರು.

ಮಲ್ಪೆ-ತೀರ್ಥಹಳ್ಳಿ ರಾ.ಹೆ.ಗೆ ವಿಸ್ತೃತ ಯೋಜನೆ ತಯಾರಿ
ಮಲ್ಪೆ-ಆಗುಂಬೆ-ತೀರ್ಥಹಳ್ಳಿ ರಾ.ಹೆ. 169 (ಎ)ರ 87 ಕಿ.ಮೀ.ಗಳನ್ನು ಚತುಷ್ಪಥ ಗೊಳಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. ಈಗಾಗಲೇ ರಸ್ತೆಯ 40 ಮೀಟರ್‌ ಜಾಗ ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿದೆ. ಚತುಷ್ಪಥಗೊಳಿಸಲು ಈ ಜಾಗ ಸಾಕಾಗುತ್ತದೆಯಾದರೂ ವನ್ಯಜೀವಿ, ಪರಿಸರಕ್ಕೆ ಹಾನಿಯಾಗದಂತೆ ಸುರಂಗ ಮಾರ್ಗ ಸಹಿತ ವಿವಿಧ ಸಾಧ್ಯತೆಗಳ ಅಧ್ಯಯನ ನಡೆಯುತ್ತಿದೆ. ಡಿಪಿಆರ್‌ ಸಿದ್ಧವಾದ ಬಳಿಕ ಭೂಸ್ವಾಧೀನ ಸಹಿತ ವಿವಿಧ ಪ್ರಕ್ರಿಯೆಗಳು ನಡೆಯಲಿವೆ ಎಂದು ಸಚಿವ ಡಾ| ಎಚ್‌. ಸಿ. ಮಹದೇವಪ್ಪ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next