ಬೆಂಗಳೂರು: ಸಹಕಾರ ಸಂಘಗಳಲ್ಲಿನ ಸಾಲಮನ್ನಾ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಈ ವರ್ಷ ರೈತರಿಗೆ ಹದಿಮೂರು ಸಾವಿರ ಕೋಟಿ ರೂ. ಸಾಲ ನೀಡಲು ಸಿದ್ಧತೆ ನಡೆಸಲಾಗಿದೆ.
ಜತೆಗೆ, ಸಹಕಾರ ಸಂಘಗಳಲ್ಲಿ ಕನಿಷ್ಠ ಹತ್ತು ಲಕ್ಷ ಹೊಸದಾಗಿ ರೈತರ ಸೇರ್ಪಡೆಗೊಳಿಸಿ ಶೂನ್ಯ ಬಡ್ಡಿ ದರದಲ್ಲಿ ಅವರಿಗೂ ಸಾಲ ನೀಡಲು ಸಹಕಾರ ಇಲಾಖೆ ಸಜ್ಜಾಗುತ್ತಿದೆ. ಪ್ರಸ್ತುತ ರಾಜ್ಯದ ಸಹಕಾರ ಸಂಘಗಳಲ್ಲಿ 22 ಲಕ್ಷ ರೈತರು ಸದಸ್ಯರಾಗಿದ್ದರೂ 19 ಲಕ್ಷ ರೈತರು 9448 ಕೋಟಿ ರೂ. ಸಾಲ ಪಡೆದಿದ್ದಾರೆ. ಇಷ್ಟೂ ರೈತರಿಗೆ ಮತ್ತೆ ಸಾಲ ಒದಗಿಸುವ ಜತೆಗೆ ಇನ್ನೂ ಹತ್ತು ಲಕ್ಷ ಹೊಸ ರೈತರನ್ನು ಸದಸ್ಯರನ್ನಾಗಿಸಿ ಸಾಲ ನೀಡಿದರೆ 13 ಸಾವಿರ ಕೋಟಿ ರೂ.ವರೆಗೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಹಣಕಾಸು ಹೊಂದಾಣಿಕೆ ಸಂಬಂಧ ಜಿಲ್ಲಾ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಾಲಮನ್ನಾ ಬಾಬ್ತಿನ ಹಣವೂ ಜುಲೈ ಅಂತ್ಯದೊಳಿಗೆ ಎಲ್ಲ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಸಂದಾಯವಾಗುವುದರಿಂದ ರೈತರಿಗೆ ಹೊಸದಾಗಿ ಸಾಲ ನೀಡಲು ಅನುಕೂಲವಾಗಲಿದೆ ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ.ರೈತರಿಗೆ ಸಾಲ ನೀಡಲು ನಬಾರ್ಡ್‌ನಿಂದ ಮೊದಲು ಶೇ.70 ರಷ್ಟು ರೀ ಫೈನಾನ್ಸಿಂಗ್ ನೆರವು ದೊರೆಯುತ್ತಿತ್ತಾದರೂ ಇದೀಗ ಆ ಪ್ರಮಾಣ ಶೇ.40 ಕ್ಕೆ ಇಳಿಸಲಾಗಿದೆ. ಇದದರಿಂದ ಡಿಸಿಸಿ ಬ್ಯಾಂಕ್‌ಗಳು ಹೊಸದಾಗಿ ಸಾಲ ನೀಡಲು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿವೆ. ನಬಾರ್ಡ್‌ನಿಂದ ಮತ್ತೆ ಶೇ.70ರೀ ಫೈನಾನ್ಸಿಂಗ್ ನೆರವು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಮುಂಗಾರು ಪ್ರಾರಂಭವಾದ ನಂತರ ಹೊಸ ಸಾಲದ ಜತೆಗೆ ಬಿತ್ತನೆ ಬೀಜ, ಗೊಬ್ಬರಕ್ಕೆ ಸಮಸ್ಯೆ ಇಲ್ಲದಂತೆ ನೋಡಿಕೊಂಡು ಬೆಳೆ ಬಂದ ನಂತರ ಅದನ್ನು ಉತ್ತಮ ಬೆಲೆ ಬರುವವರೆಗೆ ಸಂರಕ್ಷಿಸಿಡಲು ಗೋದಾಮು ಹಾಗೂ ಸಾಗಾಟಕ್ಕೆ ವ್ಯವಸ್ಥೆ ಮಾಡಿಕೊಡಲು ಸಹಕಾರ, ಕೃಷಿ-ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜತೆಗೂಡಿ ಕಾರ್ಯನಿರ್ವಹಿಸಲು ಸಹ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಕಳೆದ ವರ್ಷ ಸಹಕಾರ ಸಂಘಗಳಲ್ಲಿ ಪಡೆದಿದ್ದ 9448 ಕೋಟಿ ರೂ. ಸಾಲದ ಪೈಕಿ ಮೇ ಅಂತ್ಯಕ್ಕೆ 11.2 ಲಕ್ಷ ರೈತರ 4830 ಕೋಟಿ ರೂ.ಮನ್ನಾ ಆಗಿದ್ದು ಇನ್ನೂ 5 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಜೂನ್ ತಿಂಗಳ ಕ್ಲೈಮ್ಸ್ ಬಂದ ಮೇಲೆ ಸಂಪೂರ್ಣ ಸಾಲದ ಮೊತ್ತ ಮನ್ನಾ ಆಗಲಿದೆ. ಮೊದಲಿಗೆ ಅಂದಾಜು ಮಾಡಿದ ಮೊತ್ತಕ್ಕಿಂತ ಕಡಿಮೆಯೇ ಆಗಲಿದೆ. ವಾಣಿಜ್ಯ ಬ್ಯಾಂಕುಗಳು ಮೊದಲು ರೈತರು ಪಡೆದಿದ್ದ ಸಾಲಗಳ ಬಾಬ್ತಿನಲ್ಲಿ ಎನ್‌ಪಿಎ ಎಂದು ಪರಿಗಣಿಸಿದ್ದ ಖಾತೆಗಳಿಗೆ ಸಂಬಂಧಿಸಿದಂತೆ ಒಂದೇ ಬಾರಿ ತೀರುವಳಿ ಮಾಡಿದರೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಆ ನಂತರ ನಿರಾಕರಿಸಿವೆ. ಇದೀಗ ರಾಜ್ಯಸರ್ಕಾರ ಶೇ.25ರಷ್ಟಾದರೂ ಮರುಪಾವತಿಸಿ ಎಂದು ವಾಣಿಜ್ಯ ಬ್ಯಾಂಕುಗಳ ಮುಂದೆ ಪ್ರಸ್ತಾವನೆ ಇಡಲು ಮುಂದಾಗಿದೆ.
ಆತಂಕ ನಿವಾರಣೆ: ಸಾಲಮನ್ನಾ ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗಬಹುದೆಂದು ಅಂದಾಜಿಸಲಾಗಿತ್ತಾದರೂ ಬಿಗಿ ನಿಯಮಾವಳಿ ಹಿನ್ನೆಲೆಯಲ್ಲಿ ಸುಮಾರು 20 ಸಾವಿರ ಕೋಟಿ ರೂ.ವರೆಗೆ ಹೊರೆ ತಪ್ಪಿದೆ ಎಂದು ಹೇಳಲಾಗಿದೆ.
ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲದ ಪ್ರಮಾಣವೇ 20 ರಿಂದ 25 ಸಾವಿರ ಕೋಟಿ ರೂ.ವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಅದು 10,500 ಸಾವಿರ ಕೋಟಿ ರೂ.ವರೆಗೆ ಆಗಲಿದೆ. ಅದೇ ರೀತಿ ಸಹಕಾರ ಸಂಘಗಳಲ್ಲಿನ ಸಾಲಮನ್ನಾ ಮೊತ್ತವೂ ಅಂದಾಜು ಮಾಡಿದ ಮೊತ್ತಕ್ಕಿಂತ ಕಡಿಮೆಯೇ ಆಗಲಿದೆ. ಹೀಗಾಗಿ, ಆರ್ಥಿಕ ಇಲಾಖೆ ಸಾಲಮನ್ನಾ ವಿಚಾರದಲ್ಲಿ ನಿರಾಳವಾಗಿದೆ ಎಂದು ಹೇಳಲಾಗಿದೆ.
ಈ ವರ್ಷ ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಗೆ ಹೊಸ ಸಾಲ ಕೊಡುವ ಜತೆಗೆ ಇನ್ನೂ ಹತ್ತು ಲಕ್ಷ ರೈತರನ್ನು ಹೊಸದಾಗಿ ಸೇರ್ಪಡೆ ಮಾಡಲಾಗುವುದು. ಸುಮಾರು 13 ಸಾವಿರ ಕೋಟಿ ರೂ.ನಮಗೆ ಹೊಸ ಸಾಲ ನೀಡಲು ಬೇಕಾಗುತ್ತದೆ. ಈ ಸಂಬಂಧ ಚರ್ಚಿಸಲು ಇದೇ ತಿಂಗಳ 24 ರಂದು ಎಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಸಭೆ ಕರೆದಿದ್ದೇನೆ. ಒಟ್ಟು 30 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ.
– ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ
-ಎಸ್.ಲಕ್ಷ್ಮಿನಾರಾಯಣ