Advertisement

ಕುಡಿಯುವ ನೀರಿಗೆ 1,215 ಕೋ. ರೂ. : ಉಡುಪಿಯಲ್ಲಿ ಸಚಿವ ಎಸ್‌. ಅಂಗಾರ

12:39 AM Jan 27, 2022 | Team Udayavani |

ಉಡುಪಿ: ಕಾರ್ಕಳ, ಹೆಬ್ರಿ, ಕಾಪು ವಿನಲ್ಲಿ 1, 215 ಕೋಟಿ ರೂ. ಮೊತ್ತದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಹೇಳಿದರು.

Advertisement

 ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡು ಕ್ರೀಡಾಂಗಣ ದಲ್ಲಿ ಜರಗಿದ ಗಣರಾಜ್ಯೋತ್ಸವದಲ್ಲಿ ಧ್ವಜಾ ರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಪ್ರಾಥಮಿಕ ಯೋಜನಾ ವರದಿಯನ್ನು ಸರಕಾರದ ಅನು ಮೋದನೆಗೆ ಸಲ್ಲಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 396 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಬ್ರಹ್ಮಾವರ, ಕುಂದಾಪುರ, ಕಾರ್ಕಳ ತಾಲೂಕಿನ 12. 55 ಹೆಕ್ಟೇರ್‌ ಪ್ರದೇಶದಲ್ಲಿ 42 ಕಿರು ಜಲಾನಯನಗಳಲ್ಲಿ ಮುಂದಿನ 5 ವರ್ಷಗಳ ಕಾಲ ಅನುಷ್ಠಾನ ಮಾಡಲು ಕೇಂದ್ರ ಸರಕಾರದಿಂದ 2,661.65 ಲಕ್ಷ ರೂ. ಯೋಜನೆಗೆ ಅನುಮೋದನೆ ದೊರೆತಿದೆ ಎಂದರು.

ಶಾಲಾ ಕಟ್ಟಡಕ್ಕೆ ಅನುದಾನ
ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ 254 ಲಕ್ಷ ರೂ. ಒದಗಿಸಿದ್ದು, 19 ಪ್ರೌಢಶಾಲೆಗಳಿಗೆ ಕೊಠಡಿ ನಿರ್ಮಿಸಲಾಗುತ್ತಿದೆ. 18 ಅಂಗನವಾಡಿ ಕಟ್ಟಡ ನಿರ್ಮಿಸಲು 297 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದರು.

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶನ್‌ ಪ್ಲಾನ್‌ 2021-31 ಕರಡು ಪ್ರಸ್ತಾವನೆ ಸಿದ್ಧ ಪಡಿಸಿ ಪ್ರವಾಸೋದ್ಯಮ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ 28 ಹೊಸ ಕಾಮಗಾರಿಗಳಿಗೆ 4,410.19 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Advertisement

ಉಡುಪಿ ಶಾಸಕ ಕೆ. ರಘುಪತಿ ಭಟ್‌, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ವೈ, ಎಡಿಸಿ ಸದಾಶಿವ ಪ್ರಭು, ಎಸ್‌ಪಿ ಎನ್‌. ವಿಷ್ಣುವರ್ಧನ, ಕರಾವಳಿ ಕಾವಲು ಪಡೆ ಎಸ್‌ಪಿ ಅಂಶು ಕುಮಾರ್‌ ಉಪಸ್ಥಿತರಿದ್ದರು.

24 ಗಂಟೆ ಕುಡಿಯುವ ನೀರು
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 24 ಗಂಟೆ ಕುಡಿಯುವ ನೀರು ಪೂರೈಸಲು338.63 ಕೋಟಿ ರೂ. ಅಂದಾಜು ವೆಚ್ಚದಡಿ ವಾರಾಹಿ ನದಿಯಿಂದ ಮಣಿಪಾಲ ಜಿಎಲ್‌ಎಸ್‌ಆರ್‌ಗೆ ನಿರಂತರ ನೀರು ಪೂರೈಕೆಯ ಅಮೃತ್‌ ಹಾಗೂ ಎಡಿಬಿ ನೆರವಿನ ಯೋಜನೆ ಪ್ರಗತಿಯಲ್ಲಿದೆ. ರಾಜ್ಯ ಹೆದ್ದಾರಿ ಸುಧಾರಣೆಯಡಿ ಜಿಲ್ಲೆಯ ಒಟ್ಟು 87.77 ಕಿ.ಮೀ. ಉದ್ದದ ರಸ್ತೆಗಳನ್ನು 8,673 ಲ. ರೂ.ಗಳಲ್ಲಿ ಮೇಲ್ದರ್ಜೆಗೇರಿಸುತ್ತಿದ್ದು, 31.33 ಕಿ.ಮೀ. ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಅಂತ್ಯೋದಯ 28,620 ಹಾಗೂ ಬಿಪಿಎಲ್‌ 1,61,369 ಸೇರಿ ಒಟ್ಟು 1,89, 989 ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವರು ಹೇಳಿದರು.

ಬೈಂದೂರಲ್ಲಿ ಸೀ ಫುಡ್ ಪಾರ್ಕ್‌
ಆರ್‌ಕೆವಿವೈ ಯೋಜನೆಯಡಿ ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ಸೀ-ಫುಡ್ ಪಾರ್ಕ್‌ ಸ್ಥಾಪನೆಗೆ 53 ಎಕ್ರೆ ಜಮೀನು ಕಾದಿರಿಸಲಾಗಿದೆ. ಪ್ರಸ್ತುತ ಮೀನುಗಾರಿಕೆ ಋತುವಿನಲ್ಲಿ 49,774 ಲೀಟರ್‌ ಕರರಹಿತ ಡೀಸೆಲನ್ನು ವಿತರಿಸಲಾಗಿದೆ ಎಂದರು.

ಯಾರಿಗೂ ಅಸಮಾಧಾನವಿಲ್ಲ
ಉಡುಪಿ: ಜಿಲ್ಲಾ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಉಸ್ತುವಾರಿ ಸಿಗದಿದ್ದರೂ ಚುನಾಯಿತ ಪ್ರತಿನಿಧಿಯಾಗಿ ನಾನು ಕೆಲಸ ಮಾಡಬೇಕು. ನನ್ನ ಕ್ಷೇತ್ರದ ಕೆಲಸದ ಜೊತೆಗೆ ಹೆಚ್ಚುವರಿಯಾಗಿ ಉಸ್ತುವಾರಿ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್‌. ಅಂಗಾರ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘಟನೆಯ ವ್ಯವಸ್ಥೆಯಲ್ಲಿ ಅಧಿಕಾರ ಪಡೆದಿರುವ ನಾವು ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ಆಲೋಚಿಸಬೇಕು. ನಮ್ಮ ತಪ್ಪುಗಳಿಗೆ ಸಂಘಟನೆ ಹೊಣೆಯಾಗುವುದಿಲ್ಲ. ಸಂಘಟನೆಗೆ ನಿಷ್ಠರಾಗಿದ್ದರೆ, ಸಂಘಟನೆ ಕೈ ಬಿಡುವುದಿಲ್ಲ. ಯಾರಾದರೂ ಸಂಘಟನೆ ಕೈಬಿಡುವಂತೆ ವರ್ತಿಸಿದರೆ ನಾವು ಹೊಣೆಗಾರರಲ್ಲ ಎಂದರು.

ಬಿಜೆಪಿ ಮುಳುಗುವ ಹಡಗು ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಮುಳುಗುವ ಹಡಗು ಸಿದ್ದರಾಮಯ್ಯರದ್ದು. ಯಾಕೆಂದರೆ ಅವರಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಗೆ ಸ್ಪಷ್ಟತೆ ಇದೆ, ಉದ್ದೇಶ ವಿಚಾರಧಾರೆ ಇದೆ. ಸಿದ್ದರಾಮಯ್ಯ ಮುಳುಗುವ ಸ್ಥಿತಿಯಲ್ಲಿ ಇರುವುದರಿಂದ ಎಲ್ಲರೂ ಹಾಗೇ ಕಾಣುತ್ತಿರಬಹುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next