Advertisement

ಹಾಸನ ಹಾಲು ಒಕ್ಕೂಟಕ್ಕೆ 12 ಕೋಟಿ ರೂ. ಲಾಭ

08:59 PM Jun 01, 2019 | Lakshmi GovindaRaj |

ಹಾಸನ: ಮೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಹಾಸನ ಹಾಲು ಒಕ್ಕೂಟವು 2018 -19 ನೇ ಸಾಲಿನಲ್ಲಿ 12 ಕೋಟಿ ರೂ. ಲಾಭ ಗಳಿಸಿದ್ದು, ಲಾಭಾಂಶದ ಬಹುತೇಕ ಭಾಗವನ್ನು ಹಾಲು ಉತ್ಪಾದಕರಿಗೇ ಹಂಚುವ ನಿಟ್ಟಿನಲ್ಲಿ ಜೂ. 1 ರಿಂದ ಪ್ರತಿ ಲೀ.ಗೆ ಒಂದು ರೂ. ಹೆಚ್ಚಳ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆದ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೇಳಿದರು.

Advertisement

ಹಾಸನ ಡೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ವಾಪ್ತಿಯನ್ನು ಒಳಗೊಂಡ ಹಾಸನ ಹಾಲು ಒಕ್ಕೂಟವು ತಾವು ಅಧ್ಯಕ್ಷರಾದ 1995 ರಲ್ಲಿ ಪ್ರತಿದಿನ 17 ಸಾವಿರ ಲೀ. ಹಾಲು ಸಂಗ್ರಹಿಸಿ 25 ಕೋಟಿ ರೂ. ವಹಿವಾಟು ನಡೆಸುತ್ತಿತ್ತು. ಈಗ ಒಕ್ಕೂಟವು 10 ಲಕ್ಷ ಲೀ. ಹಾಲು ಸಂಗ್ರಹಿಸುತ್ತಿದ್ದು, ವಾರ್ಷಿಕ 1300 ಕೋಟಿ ರೂ ವಹಿವಾಟು ನಡೆಸುತ್ತಿದೆ. ತಾವು ಅಧ್ಯಕ್ಷರಾದಂದಿನಿಂದಳೂ ಒಕ್ಕೂಟವು ಲಾಭ ಗಳಿಸುತ್ತಲೇ ಬಂದಿದೆ ಎಂದರು.

ವಿಮಾ ಸೌಲಭ್ಯ: ಹಾಸನ ಹಾಲು ಒಕ್ಕೂಟವು ತನ್ನ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಎರಡು ವಿಮಾ ಯೋಜನೆಗಳನ್ನು ಆರಂಭಿಸಲು ನಿರ್ಧರಿಸಿದೆ. ವಿಮಾ ವ್ಯಾಪ್ತಿಗೊಳಗಾಗುವ ಹಾಲು ಉತ್ಪಾದಕರು ವಾರ್ಷಿಕ 500 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರಲ್ಲಿ ಹಾಸ ಹಾಲು ಒಕ್ಕೂಟವು 250 ರೂ. ಪಾವತಿಸಿದರೆ ಫ‌ಲಾನುಭವಿ 250 ರೂ. ಪಾವತಿಸಿದರೆ ಸಾಕು. ವಿಮೆದಾರರು ಅಸಕ್ಮಿಕವಾಗಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷರೂ ವಿಮಾ ಪರಿಹಾರ ಸಿಗಲಿದೆ.

ಇದರಿಂದ ಹಾಲು ಒಕ್ಕೂಟಕ್ಕೆ ಒಂದು ಕೋಟಿ ರೂ. ಹೊರ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ. ಹಾಗೆಯೇ ಒಕ್ಕೂಟ ವ್ಯಾಪ್ತಿಯ 50 ಸಾವಿರ ಹಸುಗಳಿಗೂ ಪ್ರತಿ ಹಸುವಿಗೂ 50 ಸಾವಿರ ರೂ. ಮೊತ್ತಕ್ಕೆ ವಿಮೆ ಮಾಡಿಸಲು ತೀರ್ಮಾನಿಸಿದ್ದು, ಅದರ ಪ್ರೀಮಿಯಂ ಮೊತ್ತ ವಾರ್ಷಿಕ 900 ರೂ. ಬರುತ್ತದೆ. ಅದರಲ್ಲಿ ಹಾಸನ ಹಾಲು ಒಕ್ಕೂಟವು 450 ರೂ. ಪಾವತಿಸಲಿದ್ದು, ಹಸುವಿನ ಮಾಲೀಕ 450 ರೂ.ಪಾವತಿಸಬೇಕು. ಈ ಯೋಜನೆಗೆ ಹಾಸನ ಒಕ್ಕೂಟವು 1.50 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ವಿವರ ನೀಡಿದರು.

ಪೆಟ್‌ ಬಾಲ ಘಟಕ ಆರಂಭ: ಹಾಸನ ಡೇರಿ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ 150 ಕೋಟಿ ರೂ. ಅಂದಾಜಿನ ಹಾಲಿನ ಪೆಟ್‌ ಬಾಟಲ್‌ ಘಟಕವು ಡಿಸೆಂಬರ್‌ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ಪ್ರತಿದಿನ 30 ಸಾವಿರ ಹಾಲಿನ ಪೆಟ್‌ ಬಾಟಲ್‌ಗ‌ಳಿಗೆ ಹಾಲು ತುಂಬಿ ಮಾರಾಟ ಮಾಡಲಾಗುವುದು. ಇಂತಹ ಮೂರು ಘಟಕಗಳು ದೇಶದ ಹೈನು ಉದ್ಯಮದಲ್ಲಿದ್ದು, ಹಾಸನ ಡೇರಿಯ ಪೆಟ್‌ ಬಾಟಲ್‌ ಘಕವು ದಕ್ಷಿಣ ಭಾರತದಲ್ಲಿ ಮೊದಲ ಘಟಕವಾಗಿದೆ ಎಂದರು.

Advertisement

ಐಸ್‌ಕ್ರೀಂ ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಹಾಸನ ಡೇರಿ ಆವರಣದಲ್ಲಿ ಆರಂಭವಾಗಿರುವ ನಂದಿನಿ ಐಸ್‌ ಕ್ರೀಂ ಘಟಕ ಈಗ ದಿನಕ್ಕೆ 10 ಸಾವಿರ ಲೀ. ಐಸ್‌ ಕ್ರೀಂ ಮಾರಾಟ ಮಾಡುತ್ತಿದೆ. ನಂದಿನಿ ಐಸ್‌ ಕ್ರೀಂಗೆ ಭಾರೀ ಬೇಡಿಕೆಯಿದ್ದು, ಹಾಸನದ ಡೇರಿ ಘಟಕದಿಂದ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇನ್ನೊಂದು ವರ್ಷದೊಳಗೆ ಐಸ್‌ ಕ್ರೀಂ ಉತ್ಪಾದನಾ ಸಾಮರ್ಥಯವನ್ನು 20 ಸಾವಿರ ಲೀ.ಗೆ ವಿಸ್ತರಣೆ ಮಾಡಲಾಗುವುದು. ಯುಎಚ್‌ಟಿ ಹಾಲಿನ ಘಟಕದ ಸಾಮರ್ಥಯವನ್ನು ಈಗಿರುವ 1 ಲಕ್ಷ ಲೀಟ್‌ನಿಂದ 4 ಲಕ್ಷ ಲೀ.ಗೆ ವಿಸ್ತರಣೆ ಮಾಡಲಾಗುತ್ತಿದ್ದು, ವಿಸ್ತರಣಾ ಘಟಕದ ಕೆಲಸ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

50 ಎಕರೆಯಲ್ಲಿ ಮೇಗಾ ಡೇರಿ ನಿರ್ಮಾಣ: ಹಾಸನದಲ್ಲಿ 500 ಕೋಟಿ ರೂ. ಅಂದಾಜಿನ ಮೆಗಾಡೇರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕೌಶಿಕ ಗ್ರಾಮದ ಸಮೀಪ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಮೆಗಾ ಡೇರಿಗೆ 50 ಎಕರೆ ಮಂಜೂರಾಗಿದೆ. ಭೂಮಿಯ ದರದಲ್ಲಿ ರಿಯಾಯ್ತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಅಲ್ಲಿ ಮೆಗಾಡೇರಿ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಹಾಲಿನ ಪುಡಿ ಘಟಕ, ಯುಎಚ್‌ಟಿ ಹಾಲಿನ ಘಟಕ, ಐಸ್‌ಕ್ರೀಂ ಘಟಕ ಸೇರಿದಂತೆ ವಿವಿಧ ಘಟಕಗಳು ನಿರ್ಮಾಣವಾಗಲಿವೆ ಎಂದು ಹೇಳಿದರು.

ನಗರದ ಚನ್ನಪಟ್ಟಣ ಬೈಪಾಸ್‌ ರಸ್ತೆ ಸರ್ಕಲ್‌ನಲ್ಲಿ ಪಶು ಆಹಾರ ಘಟಕದ ಆವರಣದಲ್ಲಿ ಕೆಎಂಎಫ್ನಿಂದ ನಿರ್ಮಾಣ ಮಾಡಿರುವ ಕಲ್ಯಾಣ ಮಂಟಪವನ್ನು ಹಾಸನ ಹಾಲು ಒಕ್ಕೂಟವೇ ವಹಿಸಿಕೊಂಡಿದೆ. ಅದನ್ನು ಶೀಘ್ರದಲ್ಲಿಯೇ ಉದ್ಘಾಟನೆ ಮಾಡಿ ಹಾಲು ಉತ್ಪಾದಕರ ಕುಟುಂಬದ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ರಿಯಾಯ್ತಿ ಬಾಡಿಗೆ ದರ ನಿಗದಿಪಡಿಸಲಾಗುವುದು ಎಂದು ಎಚ್‌.ಡಿ.ರೇವಣ್ಣ ಅವರು ತಿಳಿಸಿದರು.

ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಜಯಪ್ರಕಾಶ್‌ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ನಿರ್ದೇಶಕರುಗಳಾದ ಹೊನ್ನವಳ್ಳಿ ಸತೀಶ್‌, ದೊಡ್ಡಬೀಕನಹಳ್ಳಿ ನಾಗರಾಜು, ರಾಮಚಂದ್ರೇಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಶೇಷಾದ್ರಿ, ಉಪಾದ್ಯಕ್ಷ ಕದಾಳು ರಾಜಪ್ಪಗೌಡ ಮತ್ತಿತರು ಸಕಾರಂಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next