ಮೈಸೂರು: ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರವು ಮೃಗಾಲಯಗಳ ನಿರ್ವಹಣೆಗೆ 104 ಕೋಟಿ ರೂ. ಆಯವ್ಯಯ ಪಟ್ಟಿ ತಯಾರಿಸಿದ್ದು, ಇದಕ್ಕೆ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಮನವಿ ಸಲ್ಲಿಸಿದರು.
ಈ ಕುರಿತು ಮಾಹಿತಿ ನೀಡಿರುವ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ರಾಜ್ಯದಲ್ಲಿ ಮೈಸೂರು, ಬನ್ನೇರುಘಟ್ಟ, ಕಮಲಾಪುರ, ಕಲುಬುರುಗಿ, ದಾವಣಗೆರೆ, ಬೆಳಗಾವಿ, ಗದಗ, ಶಿವಮೊಗ್ಗ ಹಾಗೂ ಚಿತ್ರದುರ್ಗ ಸೇರಿದಂತೆ 9 ಕಡೆ ಮೃಗಾಲಯಗಳಿದ್ದು, 2021-22ನೇ ಸಾಲಿನ ಎಲ್ಲಾ ಮೃಗಾಲಯಗಳ ಆಡಳಿತಾತ್ಮಕ ವೆಚ್ಚ, ಪ್ರಾಣಿಗಳ ಆಹಾರ ಮತ್ತು ನಿರ್ವಹಣೆ, ಪಶುವೈದ್ಯ ಆರೈಕೆ, ಸ್ಟಿಲ್ ಓವರ್ ಕಾಮಗಾರಿ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 104 ಕೋಟಿ ರೂ. ಆಯವ್ಯಯ ಪಟ್ಟಿ ತಯಾರಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಇದನ್ನೂ ಓದಿ :ಕ್ಯಾನ್ಸರ್ ಆರಂಭದಲೇ ಪತ್ತೆಯಾದರೆ ಗುಣ ಸಾಧ್ಯ
ಕೊರೊನಾ ಹಿನ್ನೆಲೆ ಮೃಗಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಆದಾಯ ಕಡಿಮೆಯಾಗಿದೆ. ಇದರಿಂದ ಮೃಗಾಲಯಗಳಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ಅಲ್ಲದೇ ಇತ್ತೀಚೆಗೆ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿರುವುದರಿಂದ ಮೃಗಾಲಯದಲ್ಲಿನ ಹುಲಿ, ಸಿಂಹ, ಚಿರತೆ ಸೇರಿದಂತೆ ಹಲವು ಪ್ರಾಣಿಗಳಿಗೆ ದನದ ಮಾಂಸ ಬದಲಿಗೆ ಕೋಳಿ ಅಥವಾ ಮೇಕೆ, ಕುರಿ ಮಾಂಸ ನೀಡಬೇಕಾಗಿದೆ. ಇದರಿಂದ ವೆಚ್ಚ ಮತ್ತಷ್ಟು ಹೆಚ್ಚಾಗಿದೆ. ಈ ಎಲ್ಲಾ ಖರ್ಚುಗಳನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಮೃಗಾಲಯಗಳ ನಿರ್ವಹಣೆಗೆ 104 ಕೋಟಿ ರೂ. ಆಯವ್ಯಯ ಪಟ್ಟಿ ತಯಾರಿಸಿದ್ದು, ಇದಕ್ಕೆ ಪ್ರಸಕ್ತ ಸಾಲಿನಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಅನುಮೋದನೆ ನೀಡುವಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.
ಈ ವೇಳೆ ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.