ಬೆಳಗಾವಿ: ನವೀಕರಣಗೊಂಡ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಪ್ರಾರಂಭವಾಗಿ ನಾಲ್ಕನೇ ದಿನವೇ ಆರು ಜನರ ತಂಡವೊಂದು ಹಾಡಹಗಲೇ ಕೈಚಳಕ ತೋರಿ 10 ಲಕ್ಷ ರೂ.ಕಳ್ಳತನ ಮಾಡಿದ ಘಟನೆ ನಗರದ ಕಿರ್ಲೋಸ್ಕರ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ನಗರದ ಆರನೇ ಶಾಖೆಯಾಗಿ ಕಿರ್ಲೋಸ್ಕರ್ ರಸ್ತೆಯಲ್ಲಿ ನವೀಕೃತ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆ ಜು.3ರಂದು ಉದ್ಘಾಟನೆಗೊಂಡಿದೆ. ಗುರುವಾರ ಬೆಳಗ್ಗೆ 10:30ರ ಸುಮಾರಿಗೆ ಬಂದ ಆರು ಜನರ ತಂಡ, ಬ್ಯಾಂಕ್ ಒಳಗೆ ಪ್ರವೇಶಿಸಿ ಗ್ರಾಹಕರಂತೆ ನಟಿಸಿತು. ತಂಡದಲ್ಲಿದ್ದ ಕೆಲವರು ಸರದಿ ಸಾಲಿನಲ್ಲಿ ನಿಂತರು. ಕೆಲವರು ಎದುರಿನ ಆಸನಗಳ ಮೇಲೆ ಕುಳಿತರು. ನಂತರ, ಒಂದೆಡೆ ಸೇರಿದ ನಾಲ್ವರು ತಮ್ಮ, ತಮ್ಮಲ್ಲೇ ಮಾತನಾಡಿಕೊಂಡು, ಸಿಬ್ಬಂದಿಯೊಂದಿಗೆ ಮಾಹಿತಿ ಕೇಳುವವರಂತೆ ನಟಿಸಿದರು. ಕ್ಯಾಶ್ ಕೌಂಟರ್‌ನಲ್ಲಿದ್ದ ಸಿಬ್ಬಂದಿಯೊಂದಿಗೆ ಒಬ್ಬ ಮಾತನಾಡುತ್ತ ನಿಂತಿದ್ದಾಗ ಮತ್ತೂಬ್ಬ ಹಿಂದಿನಿಂದ ಕ್ಯಾಂಶ್ ಕೌಂಟರ್ ಪ್ರವೇಶಿಸಿ ಹಣದ ಪೆಟ್ಟಿಗೆಯಲ್ಲಿದ್ದ 10 ಲಕ್ಷ ರೂ.ಗಳನ್ನು ಚೀಲದಲ್ಲಿ ತುಂಬಿಕೊಂಡ. ಇದೇ ವೇಳೆ, ಭದ್ರತಾ ಸಿಬ್ಬಂದಿ ಜತೆ ಮತ್ತೂಬ್ಬ ಮಾತನಾಡುತ್ತಾ ನಿಂತುಕೊಂಡಿದ್ದ. 4-5 ಸೆಕೆಂಡ್‌ಗಳಲ್ಲೆ ಹಣ ತುಂಬಿಕೊಂಡ ವ್ಯಕ್ತಿ ಕ್ಯಾಶ್ ಕೌಂಟರ್‌ನಿಂದ ಹೊರ ಬಂದ. ಆತನ ಹಿಂದೆಯೇ ತಂಡದ ಉಳಿದ ಸದಸ್ಯರು ಬ್ಯಾಂಕ್‌ನಿಂದ ಪರಾರಿಯಾದರು.
ವಿಚಿತ್ರವೆಂದರೆ, ಕಳ್ಳತನವಾಗಿರುವ ಬಗ್ಗೆ ಸಿಬ್ಬಂದಿಗೆ ಬಹಳ ಹೊತ್ತಿನವರೆಗೂ ಗೊತ್ತೇ ಆಗಿಲ್ಲ. ಸುಮಾರು ಒಂದು ಗಂಟೆಯ ಬಳಿಕ (11:45ರ ಸುಮಾರಿಗೆ) ಗ್ರಾಹಕರಿಗೆ ಪಾವತಿಸಲು ಹಣ ಇಲ್ಲದಿರುವುದು ಕ್ಯಾಶಿಯರ್ ಗಮನಕ್ಕೆ ಬಂತು. 2000 ರೂ.ಮುಖಬೆಲೆಯ 8 ಲಕ್ಷ ರೂ.ಹಾಗೂ 500 ರೂ. ಮುಖಬೆಲೆಯ 2 ಲಕ್ಷ ರೂ. ಕಳ್ಳತನವಾಗಿರುವುದು ತಿಳಿಯಿತು. ಗಲಿಬಿಲಿಗೊಂಡ ಕ್ಯಾಶಿಯರ್, ಎಲ್ಲೆಡೆ ಹುಡುಕಾಡಿ, ಮ್ಯಾನೇಜರ್‌ಗೆ ವಿಷಯ ತಿಳಿಸಿದ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳತನ ಆಗಿರುವುದು ತಿಳಿದು ಬಂತು.
ಕೂಡಲೇ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ದೌಡಾಯಿಸಿದ ಖಡೇಬಜಾರ ಪೊಲೀಸರು ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ ಹಾಕಿದ್ದು, ಬ್ಯಾಂಕ್ ಸುತ್ತಲಿನ ಅಂಗಡಿಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವು ದೃಶ್ಯಗಳಲ್ಲಿ ಆರೋಪಿಗಳ ಮುಖ ಚಹರೆ ಸ್ಪಷ್ಟವಾಗಿ ಗೋಚರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರಿಗಾಗಿ ಶೋಧ ಕಾರ್ಯ ನಡೆದಿದ್ದು, ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಮುಖ ಚಹರೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೆ, ಯಾವ ಮಾರ್ಗದ ಮೂಲಕ ನಗರದಿಂದ ಪರಾರಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಶೀಘ್ರವೇ ಕಳ್ಳರನ್ನು ಹಿಡಿಯಲಾಗುವುದು.
– ಸೀಮಾ ಲಾಟಕರ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ.