ಪುಣೆ: 15ನೇ ಆವೃತ್ತಿಯ ಐಪಿಎಲ್ ಕೂಟದ ತನ್ನ ಮೊದಲ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ 61 ರನ್ ಅಂತರದ ಗೆಲುವು ಸಾಧಿಸಿದೆ.
ರಾಜಸ್ಥಾನ ರಾಯಲ್ಸ್ ನ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಹೊಸ ದಾಖಲೆ ಬರೆದಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 28 ಎಸೆತಗಳಲ್ಲಿ 35 ರನ್ ಗಳಿಸಿದರು. ಇದೇ ವೇಳೆ ಐಪಿಎಲ್ ನಲ್ಲಿ 2000 ರನ್ ಪೂರೈಸಿದ ಸಾಧನೆಯನ್ನೂ ಬಟ್ಲರ್ ಮಾಡಿದರು.
ಐಪಿಎಲ್ ನಲ್ಲಿ 2000 ರನ್ ಗಳಿಸಿದ ಮೊದಲ ಇಂಗ್ಲೀಷ್ ಆಟಗಾರ ಎಂಬ ಖ್ಯಾತಿಗೆ ಜೋಸ್ ಬಟ್ಲರ್ ಪಾತ್ರರಾದರು. 66ನೇ ಪಂದ್ಯದಲ್ಲಿ ಬಟ್ಲರ್ ಈ ದಾಖಲೆ ಬರೆದರು. ಬಟ್ಲರ್ ಇದುವರೆಗೆ ಐಪಿಎಲ್ ನಲ್ಲಿ ಒಂದು ಶತಕ ಮತ್ತು 11 ಅರ್ಧಶತಕ ಗಳಿಸಿದ್ದಾರೆ.
ಇದನ್ನೂ ಓದಿ:ಲಕ್ನೋ ಸೂಪರ್ ಜೈಂಟ್ಸ್; ಐಪಿಎಲ್ ಹೊಸ ತಾರೆ; ಆಯುಷ್ ಬದೋನಿ
ಪಂದ್ಯದ ಮೊದಲ ಓವರ್ ನಲ್ಲಿ ಸ್ಪಿಪ್ ಫೀಲ್ಡರ್ ಗೆ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಭುವನೇಶ್ವರ್ ಕುಮಾರ್ ಎಸೆದ ಚೆಂಡು ನೋ ಬಾಲ್ ಆಗಿತ್ತು. ನಂತರ ಸಿಡಿದ ಬಟ್ಲರ್ ಮೂರು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಬಾರಿಸಿದರು.
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಆರು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದರೆ, ಕುಸಿತ ಕಂಡ ಸನ್ ರೈಸರ್ಸ್ ಏಳು ವಿಕೆಟ್ ಕಳೆದುಕೊಂಡು ಕೇವಲ 149 ರನ್ ಮಾತ್ರ ಗಳಿಸಿತು.