Advertisement

ಆರ್‌ಆರ್‌ಆರ್‌: ಹೋರಾಟದ ಹಾದಿಯಲ್ಲಿ ಕಂಡ ದೃಶ್ಯ ವೈಭವ

09:25 AM Mar 26, 2022 | Team Udayavani |

1920ರ ಕಾಲಘಟ್ಟದಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ದ ನಡೆಯುವ ಹೋರಾಟ. ಅದರಲ್ಲೊಂದಷ್ಟು ಅಚ್ಚರಿಯ ತಿರುವುಗಳು, ಒಂದೆಡೆ ಸ್ನೇಹ, ಪ್ರೀತಿ, ದೇಶಪ್ರೇಮ ಮತ್ತೂಂದೆಡೆ ಅಸಹಾಯಕತೆ, ಹತಾಶೆ, ನೋವು, ಆಕ್ರೋಶ. ಇವೆಲ್ಲವನ್ನೂ ಪ್ರತಿ ಫ್ರೇಮ್‌ ನಲ್ಲೂ ಅಚ್ಚುಕಟ್ಟಾಗಿ ಪೋಣಿಸಿ, ಅದ್ಧೂರಿಯಾಗಿ ಕಟ್ಟಿಕೊಟ್ಟು ನೋಡುಗರಿಗೆ ತೆರೆಮುಂದೆ ಹೊಸ ಅನುಭವ ಕೊಡುವ ಯಶಸ್ವಿ ಪ್ರಯತ್ನ. ಇದು ಈ ವಾರ ತೆರೆಗೆ ಬಂದಿರುವ ಬಹುನಿರೀಕ್ಷಿತ “ಆರ್‌ ಆರ್‌ಆರ್‌’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಕಂಟೆಂಟ್‌ ಮತ್ತು ಅದ್ಧೂರಿ ಮೇಕಿಂಗ್‌ ಮೂಲಕವೇ ಛಾಪು ಮೂಡಿಸಿರುವ ನಿರ್ದೇಶಕ ಎಸ್‌. ಎಸ್‌ ರಾಜಮೌಳಿ ಮ್ಯಾಜಿಕ್‌ “ಆರ್‌ಆರ್‌ಆರ್‌’ ಸಿನಿಮಾದಲ್ಲೂ ಮುಂದುವರೆದಿದೆ. ಒಂದು ಕಥೆಯಲ್ಲಿ ಪ್ರೇಕ್ಷಕರನ್ನು ರಂಜಿಸುವ, ಕಾಡುವ, ಕನವರಿಸುವ ಕೊನೆಗೆ ಹುಚ್ಚೆದ್ದು ಕುಣಿಯುವಂತೆ ಮಾಡುವ ಏನೆಲ್ಲ “ಸೂತ್ರ’ಗಳು ಇರಬೇಕೋ, ಅದೆಲ್ಲವನ್ನೂ ಸುಸೂತ್ರವಾಗಿ ಕಟ್ಟಿಕೊಟ್ಟಿರುವ ಸಿನಿಮಾ “ಆರ್‌ಆರ್‌ಆರ್‌’.

Advertisement

ಆಂಧ್ರದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್‌ ಹಾಗೂ ಅಲ್ಲೂರಿ ಸೀತಾರಾಮರಾಜು ಎಂಬ ಎರಡು ಪಾತ್ರಗಳ ಸುತ್ತ ಇಡೀ “ಆರ್‌ಆರ್‌ ಆರ್‌’ ಸಿನಿಮಾದ ಕಥೆ ಸಾಗುತ್ತದೆ. ಕೋಮರಂ ಭೀಮ್‌ ಗೊಂಡ ಸಮುದಾಯದ ಬೇಟೆಗಾರ. ಅಲ್ಲೂರಿ ಸೀತಾರಾಮ ರಾಜು ಬ್ರಿಟಿಷರ ಅಡಿ ಪೊಲೀಸ್‌ ಅಧಿಕಾರಿ. 1920ರ ಕಾಲಘಟ್ಟದಲ್ಲಿ ಬ್ರಿಟಿಷರು ಗೊಂಡ ಸಮುದಾಯದ ಬಾಲಕಿಯನ್ನು ಹೊತ್ತೂಯ್ಯುತ್ತಾರೆ. ಆ ಬಾಲಕಿಯನ್ನು ಬಿಡಿಸುವ ಸಲುವಾಗಿ ಕೋಮರಂ ಭೀಮ್‌ ದೆಹಲಿಯತ್ತ ಹೊರಡುತ್ತಾನೆ. ಮತ್ತೂಂದೆಡೆ ಬ್ರಿಟಿಷ್‌ ಪ್ರಭುತ್ವಕ್ಕೆ ಸವಾಲೆಸೆದ ಕಾಡಿನ ಆ ಬೇಟೆಗಾರನನ್ನು ಬಂಧಿಸಲು ಅಲ್ಲೂರಿ ಸೀತಾರಾಮ ರಾಜು ತಯಾರಾಗಿನಿಲ್ಲುತ್ತಾನೆ. ತಾವು ನಂಬಿದ ಆದರ್ಶಕ್ಕಾಗಿ ಪ್ರಾಣವನ್ನೇ ಕೊಡಬಲ್ಲ, ತಮಗೆ ಎದುರಾಗಿ ನಿಂತವರ ಪ್ರಾಣವನ್ನೂ ತೆಗೆಯಬಲ್ಲ ಇವರಿಬ್ಬರ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ? ಯಾರು ನಿಲ್ಲುತ್ತಾರೆ? ಎನ್ನುವುದೇ “ಆರ್‌ಆರ್‌ಆರ್‌’ ಸಿನಿಮಾದ ಕಥೆ.

ಅದು ಹೇಗಿರುತ್ತದೆ ಅನ್ನೋದನ್ನ ತಿಳಿಯಬೇಕಾದರೆ, “ಆರ್‌ಆರ್‌ಆರ್‌’ ಸಿನಿಮಾವನ್ನು ತೆರೆಮೇಲೆ ಕಣ್ತುಂಬಿಕೊಳ್ಳಬೇಕು. ಒಂದು ಕಥೆಯನ್ನು ಎಷ್ಟರ ಮಟ್ಟಿಗೆ ಅದ್ಧೂರಿಯಾಗಿ, ಅದ್ಭುತವಾಗಿ ತೆರೆಮೇಲೆ ತೋರಿಸಲು ಸಾಧ್ಯವೋ ಅದೆಲ್ಲ ಪ್ರಯತ್ನವನ್ನೂ ನಿರ್ದೇಶಕ ರಾಜಮೌಳಿ “ಆರ್‌ಆರ್‌ಆರ್‌’ ಸಿನಿಮಾದಲ್ಲಿ ಮಾಡಿರುವುದು ಪ್ರತಿ ಫ್ರೇಮ್‌ ನಲ್ಲೂ ಕಾಣುತ್ತದೆ.

ಇದನ್ನೂ ಓದಿ:ಎದೆ ಹಾಲಿನಿಂದಲೇ ಆಭರಣ; 15 ಕೋಟಿ ರೂ. ನಿರೀಕ್ಷೆ!

ನೈಜ ಪಾತ್ರಗಳನ್ನಿಟ್ಟುಕೊಂಡು ಹೆಣೆದ ಕಥೆ, ಅದಕ್ಕೆ ಕೊಟ್ಟ ದೃಶ್ಯ ರೂಪ ಎರಡೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, “ಆರ್‌ಆರ್‌ಆರ್‌’ ಅಪ್ಪಟ ನಿರ್ದೇಶಕನ ಸಿನಿಮಾ. ತಮ್ಮ ಕಲ್ಪನೆಯನ್ನು ದೃಶ್ಯರೂಪದಲ್ಲಿ ತೆರೆಮೇಲೆ ಕಟ್ಟಿಕೊಟ್ಟು ರಾಜಮೌಳಿ ಮತ್ತೂಮ್ಮೆ ತಮ್ಮ ಬ್ರ್ಯಾಂಡ್‌ ತೂಕ ಹೆಚ್ಚಿಸಿಕೊಂಡಿದ್ದಾರೆ.

Advertisement

ಕೋಮರಂ ಭೀಮ್‌ ಪಾತ್ರದಲ್ಲಿ ಜೂ.ಎನ್‌ಟಿಆರ್‌, ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ರಾಮ್‌ ಚರಣ್‌ ತೇಜ್‌ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಆನ್‌ ಸ್ಕ್ರೀನ್‌ ಕೆಮಿಸ್ಟ್ರಿ, ಡ್ಯಾನ್ಸ್‌, ಆ್ಯಕ್ಷನ್‌, ಥ್ರಿಲ್ಲಿಂಗ್‌ ದೃಶ್ಯಗಳಲ್ಲಿ ಇಬ್ಬರೂ ನಟರ ಪೈಪೋಟಿ ಅಭಿನಯ ನೋಡುಗರಿಗೆ ಮನ ರಂಜನೆ ಕೊಡುತ್ತದೆ. ಆಲಿಯಾ ಭಟ್‌, ಅಜಯ್‌ ದೇವಗನ್‌, ಶ್ರೇಯಾ ಪಾತ್ರಗಳಿಗೆ ಸ್ಕ್ರೀನ್‌ ಸ್ಪೇಸ್‌ ಕಡಿಮೆಯಿದ್ದರೂ, ತಮ್ಮ ಪಾತ್ರಗಳ ಮೂಲಕ ಮನಸ್ಸಿನಲ್ಲಿ ಉಳಿಯುತ್ತಾರೆ.

ಒಟ್ಟಾರೆ ಪ್ರತಿ ದೃಶ್ಯಗಳಲ್ಲೂ ರೋಚಕತೆ ಹುಟ್ಟಿಸಿ, ಸೀಟಿನ ತುದಿಯಲ್ಲಿ ಕೂತು ಪ್ರೇಕ್ಷಕರನ್ನು ಸೀಟಿ ಹೊಡೆಯುವಂತೆ ಮಾಡುವ “ಆರ್‌ಆರ್‌ಆರ್‌’ ಕಂಪ್ಲೀಟ್‌ ಪೈಸಾ ವಸೂಲ್‌ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next