Advertisement
ಇದು ಉಪಗ್ರಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ವಾಂಟಮ್ ಪ್ರಯೋಗಗಳನ್ನು ನಡೆಸುವ ಯೋಜನೆಯ ಒಂದು ಭಾಗವಾಗಿದೆ. ಇದಕ್ಕಾಗಿ ರಾಮನ್ ಸಂಶೋಧನಾ ಸಂಸ್ಥೆಯು 2017ರಿಂದಲೂ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆರ್‌ಆರ್‌ಐ ಕಂಡುಕೊಂಡಿರುವ ಸುರಕ್ಷಿತ ಸಂವಹನ ವಿಧಾನದಿಂದ, ದೇಶದ ರಕ್ಷಣೆ ಮತ್ತು ವ್ಯೂಹಾತ್ಮಕ ಉದ್ದೇಶಗಳಿಗಾಗಿ ಸುರಕ್ಷಿತತವಾದ ಸಂವಹನ ಮಾಧ್ಯಮವನ್ನು ವಿನ್ಯಾಸಗೊಳಿಸಿ, ಒದಗಿಸಲು ಭಾರತಕ್ಕೆ ಸಾಧ್ಯವಾಗಲಿದೆ. ಜತೆಗೆ, ಸೈಬರ್ ಭದ್ರತೆಯನ್ನು ಹೆಚ್ಚಿಸಲು, ಆನ್‌ಲೈನ್ ವಹಿವಾಟುಗಳನ್ನು ಈಗಿರುವುದಕ್ಕಿಂತಲೂ ಹೆಚ್ಚು ಸುರಕ್ಷಿತವಾಗಿ ನಡೆಸಲು ಸಾಧ್ಯವಾಗಲಿದೆ. ಸ್ಥಿರವಾಗಿರುವಂಥ ಮೂಲಗಳು ಮತ್ತು ಚಲಿಸುತ್ತಿರುವಂಥ ರಿಸೀವರ್‌ಗಳ ನಡುವೆ ಸುರಕ್ಷಿತ ಸಂವಹನ ಮಾಧ್ಯಮವು ರಕ್ಷಣಾ ವಲಯಕ್ಕೆ ಹೆಚ್ಚಿನ ಬಲವನ್ನು ತಂದುಕೊಡಲಿದೆ. ಭಾರತೀಯ ನೌಕಾಪಡೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ತೀರದಲ್ಲಿರುವ ವ್ಯಕ್ತಿಯು ಚಲಿಸುತ್ತಿರುವ ನೌಕೆಯೊಂದಿಗೆ ಸುರಕ್ಷಿತ ಸಂವಹನ ಸಾಧಿಸುವಂಥ ಕ್ರಿಯೆ ಇದಾಗಿದೆ. ಈ ಸಂವಹನವನ್ನು ಯಾರಿಗೂ ಕದ್ದಾಲಿಸಲೂ ಸಾಧ್ಯವಾಗುವುದಿಲ್ಲ.