Advertisement

RR vs KKR : ನಂ. 1, 2 ತಂಡಗಳ ನಡುವೆ ಬಿಗ್‌ ಫೈಟ್‌

12:38 AM Apr 16, 2024 | Team Udayavani |

ಕೋಲ್ಕತಾ: ಈ ಬಾರಿಯ ಐಪಿಎಲ್‌ನ ಅಗ್ರ ಎರಡು ತಂಡಗಳಾದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ನಡುವಿನ ಬಿಗ್‌ ಫೈಟ್‌ ಒಂದಕ್ಕೆ ಮಂಗಳವಾರ ರಾತ್ರಿ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ ಸಾಕ್ಷಿಯಾಗಲಿದೆ.

Advertisement

ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ಆರರಲ್ಲಿ 5 ಪಂದ್ಯ ಜಯಿಸಿ ಅಗ್ರಸ್ಥಾನದಲ್ಲಿ ಓಟ ಬೆಳೆಸಿದೆ. ಈ ಕೂಟದಲ್ಲಿ 5 ಪಂದ್ಯ ಗೆದ್ದ ಮೊದಲ ತಂಡವೆಂಬುದು ರಾಜಸ್ಥಾನ್‌ ಹೆಗ್ಗಳಿಕೆ. ಇನ್ನೊಂದೆಡೆ ಕೆಕೆಆರ್‌ ಐದರಲ್ಲಿ 4 ಪಂದ್ಯ ಗೆದ್ದು ದ್ವಿತೀಯ ಸ್ಥಾನದಲ್ಲಿದೆ.

ಹೀಗಾಗಿ “ಟಾಪ್‌ ಆಫ್ ದಿ ಟೇಬಲ್‌’ ತಂಡಗಳ ನಡು ವಿನ ಕದನ ಎಲ್ಲರನ್ನೂ ಕುತೂಹಲಕ್ಕೆ ತಳ್ಳಿದೆ.
ತವರಿನ ಅಂಗಳದಲ್ಲಿ ಆಡುವ ಕಾರಣ ಕೆಕೆಆರ್‌ ಫೇವರಿಟ್‌ ಆಗಿ ಗೋಚರಿಸುತ್ತಿದೆ. ಆದರೆ ಮೊನ್ನೆ ರಾಜಸ್ಥಾನ್‌ ತವರಿನಾಚೆಯ ಚಂಡೀಗಢ ಮುಖಾಮುಖೀಯಲ್ಲಿ ಪಂಜಾಬ್‌ಗ ಪಂಚ್‌ ಕೊಟ್ಟು ಬಂದ ಹುರುಪಿನಲ್ಲಿದೆ. ಈ ಕಾರಣಕ್ಕಾಗಿ ಇದನ್ನು 50-50 ಪಂದ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಗ್‌ ಹಿಟ್ಟರ್‌ಗಳ ಕೆಕೆಆರ್‌
ಕೆಕೆಆರ್‌ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿ ರುವ ತಂಡ. ಆರಂಭದಿಂದ 7-8ನೇ ಕ್ರಮಾಂಕದ ತನಕ ಮುನ್ನುಗ್ಗಿ ಬೀಸುವವರೇ ತುಂಬಿದ್ದಾರೆ. ಇವರಲ್ಲಿಬ್ಬರು ಕ್ರೀಸ್‌ ಆಕ್ರಮಿಸಿಕೊಂಡರೂ ಸಾಕು, ಪಂದ್ಯದ ಚಿತ್ರಣವೇ ಬದಲಾಗಲಿದೆ. ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಲಕ್ನೋ ವಿರುದ್ಧ ಎಸೆತಕ್ಕೊಂದರಂತೆ 38 ರನ್‌ ಮಾಡಿ ಫಾರ್ಮ್ ಕಂಡುಕೊಂಡಿದ್ದಾರೆ. ಹಾಗೆಯೇ ವೇಗಿ ಮಿಚೆಲ್‌ ಸ್ಟಾರ್ಕ್‌ ಕೂಡ 28ಕ್ಕೆ 3 ವಿಕೆಟ್‌ ಉರುಳಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ.

ಕೆಕೆಆರ್‌ನ ಅತ್ಯಂತ ಅಪಾಯಕಾರಿ ಮ್ಯಾಚ್‌ ಟರ್ನರ್‌ ಎಂದರೆ ಸುನೀಲ್‌ ನಾರಾಯಣ್‌. ಆರಂಭಿಕನಾಗಿ ಇಳಿದು 183.51ರ ಸ್ಟ್ರೈಕ್‌ರೇಟ್‌ ದಾಖಲಿಸಿರುವ ಈ ಕೆರಿಬಿಯನ್‌ ಸವ್ಯಸಾಚಿ 33ರ ಸರಾಸರಿಯಲ್ಲಿ ರನ್‌ ಪೇರಿಸಿದ್ದಾರೆ. ಇವರು ಆರಂಭದಲ್ಲಿ ಸಿಡಿದರೆ, ವೆಸ್ಟ್‌ ಇಂಡೀಸ್‌ನ ಮತ್ತೋರ್ವ ಆಟಗಾರ ಆ್ಯಂಡ್ರೆ ರಸೆಲ್‌ ಕೆಳ ಕ್ರಮಾಂಕದಲ್ಲಿ ರನ್‌ರೇಟ್‌ ಏರಿಸಬಲ್ಲರು. ಆದರೆ ರಿಂಕು ಸಿಂಗ್‌ ಏಕೋ ಈ ಬಾರಿ ಮಂಕಾಗಿದ್ದಾರೆ. 4 ಇನ್ನಿಂಗ್ಸ್‌ಗಳಿಂದ ಗಳಿಸಿದ್ದು 63 ರನ್‌ ಮಾತ್ರ. ಉಪನಾಯಕ ನಿತೀಶ್‌ ರಾಣಾ ಗಾಯಾಳಾಗಿ ಹೊರಗುಳಿದಿರುವುದು ದೊಡ್ಡ ಹಿನ್ನಡೆಯೇನಲ್ಲ. ವನ್‌ಡೌನ್‌ನಲ್ಲಿ ಬರುವ ಅಂಗ್‌ಕೃಷ್‌ ರಘುವಂಶಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ.

Advertisement

ರಾಜಸ್ಥಾನ್‌ ಸ್ಪಿನ್‌ ಪ್ರಬಲ
ರಾಜಸ್ಥಾನ್‌ ಬ್ಯಾಟಿಂಗ್‌ ಜತೆಗೆ ಘಾತಕ ಹಾಗೂ ವೈವಿಧ್ಯಮಯ ಬೌಲಿಂಗ್‌ ಸರದಿ ಯನ್ನು ಹೊಂದಿರುವ ತಂಡ. ಅದರಲ್ಲೂ ಸ್ಪಿನ್‌ ಅಸ್ತ್ರ ಅತ್ಯಂತ ಪ್ರಬಲ. ಅಶ್ವಿ‌ನ್‌, ಚಹಲ್‌, ಕೇಶವ್‌ ಮಹಾರಾಜ್‌, ತನುಷ್‌ ಕೋಟ್ಯಾನ್‌ ಅವರ ಎಸೆತಗಳು “ಈಡನ್‌’ ಅಂಗಳದಲ್ಲಿ ಕ್ಲಿಕ್‌ ಆದರೆ ಕೆಕೆಆರ್‌ಗೆ ಕಂಟಕ ಎದುರಾಗುವ ಸಾಧ್ಯತೆ ಇಲ್ಲದಿಲ್ಲ. ವೇಗಕ್ಕೆ ಬೌಲ್ಟ್ ಮತ್ತು ಆವೇಶ್‌ ಖಾನ್‌ ಇದ್ದಾರೆ.

ಜೈಸ್ವಾಲ್‌, ಸ್ಯಾಮ್ಸನ್‌, ಪರಾಗ್‌, ಜುರೆಲ್‌, ಹೆಟ್‌ಮೈರ್‌, ಪೊವೆಲ್‌ ಅವರನ್ನೊಳಗೊಂಡ ರಾಜಸ್ಥಾನ್‌ ಬ್ಯಾಟಿಂಗ್‌ ಲೈನ್‌ಅಪ್‌ ಅತ್ಯಂತ ಬಲಿಷ್ಠ. ಆದರೆ ಬಟ್ಲರ್‌ ಫಿಟ್‌ ಆಗಿ ಆಡುವ ಬಳಗವನ್ನು ಸೇರಿಕೊಂಡರೆ ರಾಜಸ್ಥಾಕ್ಕೆ ಇನ್ನಷ್ಟು ಪವರ್‌ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next